ರಾಜಮನೆತನ ವಿರುದ್ಧ  ಪ್ರೊ.ನಂಜರಾಜ ಅರಸ್ ಹೇಳಿಕೆಗೆ ಪ್ರಮೋದಾದೇವಿ ಒಡೆಯರ್ ಅಭಿಮಾನಿ ಬಳಗದ ಖಂಡನೆ
ಮೈಸೂರು

ರಾಜಮನೆತನ ವಿರುದ್ಧ  ಪ್ರೊ.ನಂಜರಾಜ ಅರಸ್ ಹೇಳಿಕೆಗೆ ಪ್ರಮೋದಾದೇವಿ ಒಡೆಯರ್ ಅಭಿಮಾನಿ ಬಳಗದ ಖಂಡನೆ

June 12, 2020

ಮೈಸೂರು, ಜೂ.11(ಆರ್‍ಕೆಬಿ)- ಕೆಆರ್‍ಎಸ್‍ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಇತಿಹಾಸ ತಜ್ಞ ಪ್ರೊ. ಪಿ.ವಿ.ನಂಜರಾಜ ಅರಸ್ ಅವರು ಅನಗತ್ಯವಾಗಿ ರಾಜವಂಶಸ್ಥರ ಹೆಸ ರನ್ನು ತಂದು ರಾಜಮನೆತನಕ್ಕೆ ಅಪಮಾನವಾಗುವಂತೆ ಹೇಳಿಕೆ ನೀಡಿದ್ದಾರೆ ಎಂದು ಪ್ರಮೋದಾದೇವಿ ಒಡೆಯರ್ ಅಭಿಮಾನಿಗಳ ಬಳಗ ಖಂಡಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಳಗದ ಅಧ್ಯಕ್ಷ ಜೆ.ಜಯಶಂಕರ್ ಗುರು ವಾರ ಸುದ್ದಿಗೋಷ್ಠಿ ನಡೆಸಿ, ನಾಲ್ವಡಿ ಅವರ ಪ್ರತಿಮೆಯೊಂದಿಗೆ ಸರ್ ಎಂವಿ ಪ್ರತಿಮೆ ಸ್ಥಾಪಿಸುವುದನ್ನು ವಿರೋಧಿಸುವ ನಂಜರಾಜ ಅರಸು ಅವರ ಹೋರಾಟಕ್ಕೆ ನಮ್ಮ ತಕರಾರಿಲ್ಲ. ಆದರೆ, ಹೋರಾಟದ ಮಧ್ಯೆ ಅನಗತ್ಯವಾಗಿ ಪ್ರಮೋದಾದೇವಿ ಒಡೆಯರ್ ಮತ್ತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧ ಸಲ್ಲದ ಆರೋಪ ಮಾಡುತ್ತಾ, ಮೈಸೂರು ಸಂಸ್ಥಾನಕ್ಕೆ ಕೆಟ್ಟ ಹೆಸರು ಬರುವ ರೀತಿ ಹೇಳಿಕೆ ಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ರಾಜವಂಶಸ್ಥರನ್ನು ಪ್ರಶ್ನಿಸುವ ಯೋಗ್ಯತೆಯಾಗಲೀ, ನೈತಿಕತೆಯಾಗಲೀ ಪ್ರೊ.ನಂಜರಾಜ ಅರಸು ಅವರಿಗೆ ಇಲ್ಲ. ಮೈಸೂರು ಸಂಸ್ಥಾನವನ್ನು ಅವಮಾನಿಸುವುದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೇ ಅಪಮಾನ ಮಾಡಿದಂತೆ. ಪ್ರಮೋದಾದೇವಿ ಒಡೆಯರ್ ಮತ್ತು ಮೈಸೂರು ಸಂಸ್ಥಾನ ಕುರಿತು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಅವರನ್ನು ಗೌರವಿಸುವುದನ್ನು ಕಲಿಯಬೇಕು. ಪ್ರಮೋದಾದೇವಿ ಒಡೆಯರ್ ಅವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ರಾಜಮನೆತನದ ಬಗ್ಗೆ ಮತ್ತೊಮ್ಮೆ ಇಂತಹ ಹೇಳಿಕೆ ನೀಡಿದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಬಳಗದ ಪದಾಧಿಕಾರಿಗಳಾದ ಬಿ.ಆರ್.ಪರಂಜ್ಯೋತಿ, ಸುರೇಶ್ ಮೌರಿ, ಎಸ್.ಜೆ. ಅಶೋಕ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »