ಕೋಟಿ ವೃಕ್ಷ ಪ್ರತಿಷ್ಠಾನದಿಂದ ಸಸಿಗಳ ಉಚಿತ ಕೊಡುಗೆ
ಮೈಸೂರು

ಕೋಟಿ ವೃಕ್ಷ ಪ್ರತಿಷ್ಠಾನದಿಂದ ಸಸಿಗಳ ಉಚಿತ ಕೊಡುಗೆ

June 12, 2020

ಮೈಸೂರು, ಜೂ.11(ಆರ್‍ಕೆಬಿ)- ಮೈಸೂರನ್ನು ಹಸಿರು ವಲಯವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಒಂದು ಕೋಟಿ ಗಿಡ, ಮರಗಳನ್ನು ಬೆಳೆಸುವ ಉದ್ದೇಶ ಹೊಂದಿರುವ ಕೋಟಿ ವೃಕ್ಷ ಪ್ರತಿಷ್ಠಾನ, ಆಸಕ್ತ ಪರಿಸರ ಪ್ರೇಮಿಗಳು, ಸಾರ್ವಜನಿಕರು, ರೈತರಿಗೆ ಉಚಿತವಾಗಿ ಗಿಡಗಳನ್ನು ನೀಡಲಿದೆ. ಆಸಕ್ತರು ಗಿಡಗಳನ್ನು ಪಡೆದು ಬೆಳೆಸಿ, ರಕ್ಷಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ್ ಭಟ್ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಷ್ಠಾನದಿಂದ 55 ಸಾವಿರ ಸಸಿಗಳನ್ನು ನೆಡಲಾಗಿದೆ. ಈಗ ನಮ್ಮ ಬಳಿ ಅರಳಿ, ಬೇವು, ಮಾವು, ಹಲಸು, ನೇರಳೆ, ಬಿಲ್ವ, ಮಹಾಗನಿ, ಹೊಂಗೆ, ಹೊನ್ನೆ, ಬೇಲ, ಕರಿಬೇವು ಸೇರಿದಂತೆ ನಾನಾ ರೀತಿಯ 20 ಸಾವಿರ ಸಸಿಗಳಿವೆ. ಪರಿಸರ ಪ್ರೇಮಿಗಳು ಸಸಿಗಳನ್ನು ಪಡೆದು ನೆಟ್ಟು ಪೋಷಿಸುವಂತೆ ಮನವಿ ಮಾಡಿದರು. ಸಸಿ ಪಡೆದು ಬೆಳೆಸಿದವರು 3 ತಿಂಗಳಿಗೊಮ್ಮೆ ಫೋಟೊ ತೆಗೆದು ವಾಟ್ಸಾಪ್ ಸಂ. 9480505931ಗೆ ಕಳುಹಿಸಬೇಕು. ಸಸಿ ಬೇಕಾದವರೂ ಸಂದೇಶ ಹಾಕಬಹುದು ಎಂದರು. ಪ್ರತಿಷ್ಠಾನದ ಪರಿಸರ ಚಂದ್ರು ಗೋಷ್ಠಿಯಲ್ಲಿದ್ದರು.

Translate »