ಮೈಸೂರಿಗೂ ಕಾಲಿಟ್ಟ ಬಿಟ್‍ಕಾಯಿನ್ ಪ್ರಕರಣದ ನಂಟು! ಖಾಸಗಿ ಆಸ್ಪತ್ರೆ ಡೇಟಾ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ
ಮೈಸೂರು

ಮೈಸೂರಿಗೂ ಕಾಲಿಟ್ಟ ಬಿಟ್‍ಕಾಯಿನ್ ಪ್ರಕರಣದ ನಂಟು! ಖಾಸಗಿ ಆಸ್ಪತ್ರೆ ಡೇಟಾ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ

December 1, 2021

ಮೈಸೂರು, ನ. 30(ಆರ್‍ಕೆ)- ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದ್ದ ಬಿಟ್‍ಕಾಯಿನ್ ಪ್ರಕರಣ ಇದೀಗ ಮೈಸೂರಿಗೂ ವ್ಯಾಪಿಸಿದೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಆನ್‍ಲೈನ್ ಸಾಫ್ಟ್‍ವೇರ್ ಡೇಟಾ ಹ್ಯಾಕ್ ಮಾಡಿರುವ ಸೈಬರ್ ಕ್ರಿಮಿನಲ್ ಗಳು, ಅದನ್ನು ರಿಲೀಜ್ ಮಾಡಲು ಹಣಕ್ಕೆ
ಬೇಡಿಕೆ ಇಟ್ಟಿರುವುದಲ್ಲದೆ, ಬಿಟ್‍ಕಾಯಿನ್ಸ್ ಮೂಲಕವೇ ಹಣ ನೀಡಬೇಕೆಂದು ಷರತ್ತು ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ರೋಗಿಗಳ ಚಿಕಿತ್ಸಾ ಶುಲ್ಕ, ಖಾಸಗಿ ಲೆಕ್ಕವಿರುವ ಡೇಟಾ, ದೈನಂದಿನ ಹಣಕಾಸು ವ್ಯವ ಹಾರದ ಮಾಹಿತಿಯಿರುವ ಕಂಪ್ಯೂಟರ್ ಸಿಸ್ಟಂಗಳು ಆಪರೇಟ್ ಆಗದಿರುವುದು ನವೆಂಬರ್ 19ರಂದು ಆಸ್ಪತ್ರೆ ಡೇಟಾ ಎಂಟ್ರಿ ಆಪರೇಟರ್‍ಗಳ (ಡಿಇಓ) ಗಮನಕ್ಕೆ ಬಂದಿತ್ತು. ಇದನ್ನು ಸೂಕ್ಷ್ಮವಾಗಿ ಪರಿ ಶೀಲಿಸಿದಾಗ ಆಸ್ಪತ್ರೆಯ ಸಾಫ್ಟ್‍ವೇರ್‍ನಲ್ಲಿ ಸೈಬರ್ ಕ್ರಿಮಿನಲ್‍ಗಳು ತಮ್ಮನ್ನು ಸಂಪರ್ಕಿಸುವಂತೆ ಸಂದೇಶ ರವಾನಿಸಿದ್ದು ಕಂಡುಬಂದಿತು. ಹ್ಯಾಕ್ ಮಾಡಿರುವುದನ್ನು ರಿಲೀಜ್ ಮಾಡಿ ಆನ್‍ಲೈನ್ ಸಿಸ್ಟಂ ಆಪರೇಟ್ ಆಗಬೇಕೆಂದರೆ ಹಣ ನೀಡಬೇಕು, ಅದನ್ನು ಬಿಟ್‍ಕಾಯಿನ್ಸ್ ಮೂಲಕವೇ ತಲುಪಿಸಬೇಕೆಂದು ಹ್ಯಾಕರ್‍ಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆಸ್ಪತ್ರೆಯ ಮೇನ್ ಫೈನಾನ್ಷಿಯಲ್ ಸರ್ವರ್ ಮತ್ತು ರೋಗಿಗಳ ಡೇಟಾ ಹ್ಯಾಕ್ ಮಾಡಿದ ಬೆನ್ನಲ್ಲೇ ಬಿಟ್‍ಕಾಯಿನ್ಸ್‍ನಲ್ಲಿ ಹಣ ಪಾವತಿಸುವಂತೆ ಸಂದೇಶ ರವಾನಿಸಿದ್ದಾರೆಂಬುದು ಆಸ್ಪತ್ರೆ ಆಡಳಿತ ಮಂಡಳಿಗೆ ದೃಢಪಟ್ಟಿತು. ಅದೃಷ್ಟವಶಾತ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಹಾರ್ಡ್ ಡಿಸ್ಕ್ ಹೊಂದಿದ್ದರಿಂದ ಡೇಟಾ ಬ್ಯಾಕ್‍ಅಪ್ ನಷ್ಟವಾಗಿರದ ಕಾರಣ, ದೈನಂದಿನ ವಹಿವಾಟಿಗೆ ತೊಂದರೆಯಾಗಿಲ್ಲ ಹಾಗೂ ಆರ್ಥಿಕ ನಷ್ಟವೂ ಉಂಟಾಗಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿಯು ದೃಢಪಡಿಸಿದೆ. ಇದೀಗ ಬ್ಯಾಕ್‍ಅಪ್ ಡೇಟಾದಿಂದ ಎಲ್ಲಾ ವಹಿವಾಟುಗಳನ್ನು ನಡೆಸಲಾಗುತ್ತಿದೆ.

ಡೇಟಾ ಹ್ಯಾಕ್ ಆಗಿರುವುದು ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ಸೆಕ್ಯೂರಿಟಿ ಆಫೀಸರ್ ನಜರ್‍ಬಾದಿನ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿರುವ (ಹಳೇ ಕಟ್ಟಡ) ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ (ಅಥಿbeಡಿ, ಇಛಿoಟಿomiಛಿ & ಓoಡಿಛಿoಣiಛಿs ಅಡಿime) ಪೊಲೀಸ್ ಠಾಣೆಗೆ ನವೆಂಬರ್ 19ರಂದು ದೂರು ನೀಡಿದ್ದರು.

ಸೆಕ್ಯೂರಿಟಿ ಆಫೀಸರ್ ದಾಖಲೆ ಸಮೇತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಸೆನ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಶೇಖರ್ ಅವರು, ಸೈಬರ್ ಹ್ಯಾಕರ್‍ಗಳ ಸುಳಿವಿನ ಜಾಡು ಹಿಡಿದು ಶೋಧ ನಡೆಸುತ್ತಿದ್ದಾರೆ.

ಮೈಸೂರಿನಲ್ಲಿ ಸೈಬರ್ ಸ್ವರೂಪದ ಅಪರಾಧ ಪ್ರಕರಣಗಳು ಕೋವಿಡ್ ಪರಿಸ್ಥಿತಿ ನಂತರ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು, ತಂತ್ರಜ್ಞಾನ ಬಳಸಿ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.

Translate »