ಸೆನ್ ಠಾಣೆ ಪೊಲೀಸರಿಂದ ತನಿಖೆ ಆರಂಭ
ಮೈಸೂರು

ಸೆನ್ ಠಾಣೆ ಪೊಲೀಸರಿಂದ ತನಿಖೆ ಆರಂಭ

December 1, 2021

ಮೈಸೂರು, ನ. 30(ಆರ್‍ಕೆ)- ಖಾಸಗಿ ಆಸ್ಪತ್ರೆ ಡೇಟಾ ಹ್ಯಾಕ್ ಮಾಡಿ ಬಿಟ್‍ಕಾಯಿನ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಸಂಬಂಧ ಮೈಸೂ ರಿನ ಸೆನ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ತಿಳಿಸಿದ್ದಾರೆ.

ತಮ್ಮನ್ನು ಸಂಪರ್ಕಿಸಿದ ‘ಮೈಸೂರು ಮಿತ್ರ’ನೊಂದಿಗೆ ಮಾತನಾ ಡುತ್ತಿದ್ದ ಅವರು, ಆಸ್ಪತ್ರೆ ಭದ್ರತಾ ಅಧಿಕಾರಿ ನೀಡಿರುವ ದೂರಿನನ್ವಯ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ನವೆಂಬರ್ 19ರಂದೇ ಎಫ್‍ಐಆರ್ ದಾಖಲಿಸಿ,

ಸೈಬರ್ ಕ್ರಿಮಿನಲ್‍ಗಳು ನೀಡಿದ್ದಾರೆಂಬ ಸಂದೇಶದ ಸುಳಿವಿನ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ ಎಂದರು. ಆಸ್ಪತ್ರೆ ಡೇ-ಟು-ಡೇ ವಹಿವಾಟು ನಡೆಯುತ್ತಿದ್ದ ಸಾಫ್ಟ್‍ವೇರ್‍ನಲ್ಲಿ ಡೇಟಾ ಹ್ಯಾಕ್ ಮಾಡಿ, ಯಥಾ ಸ್ಥಿತಿಗೆ ತರಲು ರ್ಯಾನ್‍ಸಮ್ ಕೇಳುತ್ತಿರುವುದು ಮೈಸೂರಿನಲ್ಲಿ ಇದು ಪ್ರಥಮ ಪ್ರಕರಣವಾಗಿದ್ದು, ನಮ್ಮ ತನಿಖಾ ತಂಡದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ತಂತ್ರಜ್ಞಾನಾಧಾರಿತ ಶೋಧ ನಡೆಸಬೇಕಾಗಿರುವುದರಿಂದ ಆರೋಪಿಗಳ ಪತ್ತೆಗೆ ತುಸು ವಿಳಂಬವಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಸಾಫ್ಟ್‍ವೇರ್‍ನಲ್ಲಿ ಎನ್‍ಕೋಡಿಂಗ್ ಮೂಲಕ ಡಿವೈಸ್ ಲಾಕ್ ಮಾಡಿ ಡೇಟಾ ಎಂಟ್ರಿ ಆಪರೇಟ್ ಆಗದಂತೆ ಹ್ಯಾಕ್ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಆಸ್ಪತ್ರೆಯವರು ಬಳಸುತ್ತಿರುವ ಸಾಫ್ಟ್‍ವೇರ್ ಮಾಹಿತಿ ಪಡೆದು ಹ್ಯಾಕರ್ಸ್ ಕೈಚಳಕದ ಬಗ್ಗೆ ಶೋಧ ನಡೆಸುತ್ತಿದ್ದೇವೆ ಎಂದಿರುವ ಡಾ. ಚಂದ್ರಗುಪ್ತ, ಆದಷ್ಟು ಬೇಗ ಪ್ರಕರಣ ಬೇಧಿಸಿ ಹ್ಯಾಕರ್‍ಗಳನ್ನು ಬಂಧಿಸಲಾಗುವುದು ಎಂದರು.

Translate »