ನಗರ ಪ್ರದೇಶದ ಮತದಾರರಿಗೆ ಬಿಜೆಪಿ ‘ಎ’ ಖಾತಾ ಗಾಳ
News

ನಗರ ಪ್ರದೇಶದ ಮತದಾರರಿಗೆ ಬಿಜೆಪಿ ‘ಎ’ ಖಾತಾ ಗಾಳ

July 7, 2022

ಬೆಂಗಳೂರು, ಜು. 6(ಕೆಎಂಶಿ)- ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಗರ ಪ್ರದೇಶದ ಮತದಾರರನ್ನು ಸೆಳೆಯಲು ಬಿ-ಖಾತಾ ನಿವೇಶನದಾರರಿಗೆ ಎ-ಖಾತಾ ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಹಾಗೂ ಇತರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಲಕ್ಷಾಂತರ ಬಿ-ಖಾತಾ ನಿವೇಶನದಾರರಿಗೆ ಪೂರ್ಣಪ್ರಮಾಣದ ಹಕ್ಕು ನೀಡುವ ತೀರ್ಮಾನವನ್ನು ಮುಖ್ಯಮಂತ್ರಿಯವರು ತೆಗೆದುಕೊಂಡಿದ್ದಾರೆ. ಸರ್ಕಾರದ ನಿರ್ಧಾರವನ್ನು ಸುದ್ದಿಗಾರರಿಗೆ ತಿಳಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಇನ್ನೆರಡು ತಿಂಗಳಲ್ಲಿ ಬಿ-ಖಾತಾದಾರರಿಗೆ ಎ-ಖಾತಾ ದಾಖಲೆಗಳು ಲಭ್ಯವಾಗಲಿವೆ. ಲಕ್ಷಾಂತರ ಮಂದಿ ಎ-ಖಾತಾ ಪಡೆಯಲು ಕಳೆದ ಕೆಲವು ವರ್ಷಗಳಿಂದ ಕಚೇರಿಗಳಿಗೆ ಅಲೆದಾಟ ನಡೆಸು ತ್ತಿದ್ದರು. ಇದನ್ನು ತಪ್ಪಿಸಿ, ಅವರಿಗೆ ಪೂರ್ಣ ಪ್ರಮಾಣದ ಹಕ್ಕುಪತ್ರ ಗಳನ್ನು ನೀಡುವ ಜನಪರ ತೀರ್ಮಾನ ಕೈಗೊಳ್ಳಲಾಗಿದೆ. ಬಿ ಖಾತಾ ನಿವೇಶನದಾರರು ತಮ್ಮ ನಿವೇಶನ ಅಥವಾ ಅಲ್ಲಿ ಕಟ್ಟಿರುವ ಮನೆ,ಕಟ್ಟಡವನ್ನು ಅಡಮಾನವಾಗಿಟ್ಟು ಬ್ಯಾಂಕು ಗಳಿಂದ ಸಾಲ ಪಡೆಯಲು ಇದುವರೆಗೆ ಸಾಧ್ಯವಿರಲಿಲ್ಲ.ಅದೇ ರೀತಿ ಇನ್ನೂ ಹಲವು ಸೌಲಭ್ಯಗಳು ಅವರಿಗೆ ದೊರೆಯುತ್ತಿರಲಿಲ್ಲ. ಸರ್ಕಾರದ ಈ ತೀರ್ಮಾನದಿಂದ ಅವರ ಎಲ್ಲ ಸಮಸ್ಯೆಗಳು ಬಗೆಹರಿದಿರುವುದಲ್ಲದೆ, ಈ ಖಾಸಗಿ ಬಡಾವಣೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ. ಖಾತಾ ಪರಿವರ್ತನೆಯಿಂದ ನಗರ ಸ್ಥಳೀಯ ಸಂಸ್ಥೆಗಳಿಗೂ ನೂರಾರು ಕೋಟಿ ರೂಪಾಯಿ ಆದಾಯ ಬರಲಿದ್ದು, ಅವುಗಳ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಹೆಚ್ಚು ಶಕ್ತಿ ದೊರೆಯಲಿದೆ.

ಮೈಸೂರು, ದಾವಣಗೆರೆ ಸೇರಿದಂತೆ ಹತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಬಿ ಖಾತೆದಾರರಿದ್ದು, ಉಳಿದಂತೆ ನಗರಸಭೆ ಮತ್ತಿತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇನ್ನೂ ಅಧಿಕ ಬಿ ಖಾತೆದಾರರಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಬಡಾವಣೆಗಳಲ್ಲಿ ನಾಗರಿಕ ಬಳಕೆಗೆಂದು ಮೀಸಲಿಟ್ಟ ಒತ್ತುವರಿಯಾಗಿರುವ ಸಿಎ ನಿವೇಶನಗಳನ್ನು ತೆರವುಗೊಳಿಸಿ, ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗುವುದು. ಅಷ್ಟೇ ಅಲ್ಲ ಸಮರ್ಪಕ ನಿರ್ವಹಣೆಯಿಲ್ಲದೆ ಪಾಳು ಬಿದ್ದಿರುವ ನಿವೇಶನಗಳ ಬಗ್ಗೆ ಪೂರ್ಣ ವರದಿ ನೀಡುವಂತೆ ಪ್ರಾಧಿಕಾರಗಳಿಗೆ ಆದೇಶಿಸಲಾಗಿದೆ ಎಂದರು.

ಈ ಕುರಿತು ಸರ್ಕಾರಕ್ಕೆ ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿರುವ ಸಿ.ಎ ನಿವೇಶನಗಳ ವಿವರ ಒದಗಿಸುವಂತೆ ಸೂಚಿಸಲಾಗಿದೆ.ವಿವರ ದೊರೆತ ನಂತರ ಒತ್ತುವರಿದಾರರಿದ್ದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸುವುದಲ್ಲದೆ,ಸದರಿ ನಿವೇಶನಗಳನ್ನು ಶಾಲೆ, ಆಸ್ಪತ್ರೆ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ನೀಡಬೇಕೋ? ಅಥವಾ ಸರ್ಕಾರದ ಬೇರೆ ಕೆಲಸಗಳಿಗೆ ಮೀಸಲಿಡ ಬೇಕೋ? ಅಥವಾ ಹರಾಜು ಹಾಕಬೇಕೋ? ಎಂಬುದನ್ನು ತೀರ್ಮಾನಿಸುತ್ತೇವೆ ಎಂದರು.ಇನ್ನು ರಾಜ್ಯಾದ್ಯಂತ ಕುಡಿಯುವ ನೀರು ಒದಗಿಸಲು 9335 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ತಯಾರಿಸಿದ್ದು, ಇದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ಭೈರತಿ ಬಸವರಾಜ್ ಹೇಳಿದರು.ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ ಬಾಕಿ ಪ್ರಮಾಣ 600 ಕೋಟಿ ರೂಪಾಯಿಗಳಷ್ಟಿದ್ದು, ಒನ್ ಟೈಮ್ ಸೆಟ್ಲ್‍ಮೆಂಟ್ ಆಧಾರದ ಮೇಲೆ ಬಾಕಿ ಪಾವತಿಗೆ ಅನುಕೂಲ ಮಾಡಿಕೊಡಲು ಯೋಚಿಸಲಾಗಿದೆ ಎಂದ ಅವರು, ಗ್ರಾಹಕರು ನೀರಿನ ಬಾಕಿಯನ್ನು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದು ಸರ್ಕಾರದ ಯೋಚನೆ ಎಂದರು. ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂಬ ಉದ್ದೇಶದಿಂದ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುವ, ಮತ್ತಿತರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದ ಅವರು,ಆ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮಗೆ ಅಗತ್ಯವಾದ ಸಂಪನ್ಮೂಲ ವನ್ನು ತಾವೇ ಸೃಷ್ಟಿಸಿಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶ ಎಂದರು.

Translate »