ಚಾಮುಂಡಿಬೆಟ್ಟಕ್ಕೆ ರೋಪ್‍ವೇ ಬೇಡ
ಮೈಸೂರು

ಚಾಮುಂಡಿಬೆಟ್ಟಕ್ಕೆ ರೋಪ್‍ವೇ ಬೇಡ

July 7, 2022

ಮೈಸೂರು, ಜು.6(ಆರ್‍ಕೆ)-ಚಾಮುಂಡಿಬೆಟ್ಟ ಗ್ರಾಮಸ್ಥರಿಗೆ ಮನೆ ನಿರ್ಮಿಸಲು ತಪ್ಪಲಲ್ಲಿ ಜಾಗ ಗುರುತಿ ಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾಡ ಳಿತಕ್ಕೆ ಇಂದಿಲ್ಲಿ ಸಲಹೆ ನೀಡಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಪ್ರತಾಪ್ ಸಿಂಹ ಅವರು, ಚಾಮುಂಡಿ ಬೆಟ್ಟದ ಮೇಲೆ ಎಲ್ಲೆಂದರಲ್ಲಿ ಮನೆ, ಕಟ್ಟಡ ನಿರ್ಮಾಣವಾಗುತ್ತಿವೆ. ಅಲ್ಲಿನ ಮಣ್ಣು, ಮರಳು ಮಿಶ್ರಿತವಾಗಿದ್ದು, ಮಳೆಗಾಲದಲ್ಲಿ
ನೀರು ಹರಿದು ಭೂಮಿ ಸಡಿಲಗೊಂಡು ಕುಸಿಯುವ ಅಪಾಯವಿದೆ. ಬೆಟ್ಟದ ನೈಸರ್ಗಿಕ ಸೌಂದರ್ಯ ಹಾಳಾಗುತ್ತದೆ ಎಂದರು. ಮನೆ ಕಟ್ಟಲು ಗ್ರಾಮ ಪಂಚಾಯ್ತಿಯವರು ಲೈಸನ್ಸ್ ಕೊಡುತ್ತಿದ್ದಾರೆ. ಎಲ್ಲೆಂದರಲ್ಲಿ ಕಾಂಕ್ರಿಟ್ ಕಟ್ಟಡ ನಿರ್ಮಾಣ ವಾಗಲು ಅಧಿಕಾರಿಗಳೇ ಕಾರಣ. ಇನ್ನು ಮುಂದೆ ಚಾಮುಂಡಿಬೆಟ್ಟದ ಮೇಲೆ ಕಟ್ಟಡ ನಿರ್ಮಾಣವಾಗದಂತೆ ತಡೆಯಬೇಕು ಎಂದು ತಿಳಿಸಿದರು. ಆ ವೇಳೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಚಾಮುಂಡಿಬೆಟ್ಟದ ಮೂಲ ಗ್ರಾಮಸ್ಥರು ಕುಟುಂಬ ವಿಭಜನೆಯಾದಾಗ ಮನೆ ಕಟ್ಟಲೇಬೇಕಾಗುತ್ತದೆ. ಅಲ್ಲಿ ಲೈಸೆನ್ಸ್ ಕೊಡದಿದ್ದರೆ ಬೆಟ್ಟದ ಕೆಳಗೆ ತಪ್ಪಲಿನಲ್ಲಿ ಪರ್ಯಾಯ ಜಾಗ ಕೊಡಬೇಕಾಗುತ್ತದೆ. ಕನಿಷ್ಠ 4 ಎಕರೆಯನ್ನಾದರೂ ಗುರುತಿಸಿದರೆ ಬೆಟ್ಟದ ಮೇಲೆ ಮನೆ ಕಟ್ಟುವುದನ್ನು ತಪ್ಪಿಸಬಹುದು ಎಂದರು.
ಕೆ.ಆರ್.ಕ್ಷೇತ್ರದ ನಿವಾಸಿಗಳಿಗೆ ಮನೆ ನಿರ್ಮಿಸಲು ಆಶ್ರಯ ಯೋಜನೆಯಡಿ ಕೊಟ್ಟಿರುವಂತೆ ಚಾಮುಂಡಿಬೆಟ್ಟ ಮೂಲ ನಿವಾಸಿಗಳಿಗೂ ಮುಡಾದಿಂದ ಜಾಗ ಕೊಡಬಹುದು ಎಂದು ಜಿ.ಟಿ.ದೇವೇಗೌಡರು ಸಲಹೆ ನೀಡಿದರಾದರೂ, ಅಷ್ಟೊಂದು ದೊಡ್ಡ ಜಾಗ ನಮ್ಮಲ್ಲಿಲ್ಲ ಹಾಗೂ ಬಲ್ಕ್ ಅಲಾಟ್‍ಮೆಂಟ್ ಮಾಡಲು ಪ್ರಾಧಿಕಾರದಲ್ಲಿ ಅವಕಾಶವಿಲ್ಲ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.

ಕಂದಾಯ ಇಲಾಖೆ ತಹಶೀಲ್ದಾರರಿಂದ ಸರ್ಕಾರಿ ಜಾಗ ಪತ್ತೆ ಮಾಡಿ ಮಂಜೂರು ಮಾಡಿ ಕಾನೂನುಬದ್ಧವಾಗಿ ಹಸ್ತಾಂತರಿಸಲು ಪ್ರಯತ್ನಿಸೋಣ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು. ಬೆಟ್ಟದ ಸುತ್ತಮುತ್ತ ಸೂಕ್ತ ಜಾಗ ನೀಡಿದಲ್ಲಿ ಚಾಮುಂಡಿಬೆಟ್ಟದ ಮೇಲೆ ಯಾವುದೇ ಕಟ್ಟಡ ನಿರ್ಮಾಣವಾಗದಂತೆ ತಡೆಯಬಹುದು ಎಂದು ಶಾಸಕ ಜಿ.ಟಿ.ದೇವೇಗೌಡರು ಅಭಿಪ್ರಾಯಪಟ್ಟರಲ್ಲದೆ, ಅಲ್ಲಿನ ನಿಸರ್ಗ ವನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ. ಅಲ್ಲಿ ಪ್ರವಾಸೋ ದ್ಯಮಕ್ಕೆ ಹೆಚ್ಚು ಆದ್ಯತೆ ನೀಡದೇ ಕೇವಲ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವುದಕ್ಕೆ ಸೀಮಿತಗೊಳಿಸಬಹುದು ಎಂದರು.

ಮೈಸೂರು, ಜು.6(ಆರ್‍ಕೆ)-ಚಾಮುಂಡಿ ಬೆಟ್ಟಕ್ಕೆ ರೋಪ್‍ವೇ ಯೋಜನೆ ಬೇಡವೇ ಬೇಡ ಎಂದು ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ಚಾಮುಂಡಿ ಬೆಟ್ಟವನ್ನು ಗಿಡ-ಮರ, ತೊರೆಗಳಂತಹ ನೈಸರ್ಗಿಕ ಸಂಪತ್ತಿನೊಂದಿಗೆ ರಕ್ಷಿಸಬೇಕೇ ಹೊರತು, ರೋಪ್‍ವೇ ಯೋಜನೆಯನ್ನು ಅನುಷ್ಠಾನ ಮಾಡಕೂಡದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡರು, ಚಾಮುಂಡಿಬೆಟ್ಟಕ್ಕೆ ಹೋಗಲು ದಾರಿ ಇದೆ, ಮೆಟ್ಟಿಲುಗಳಿವೆ. ಅರಣ್ಯ ಸಂಪತ್ತಿನ ನಿಸರ್ಗದ ಮಡಿಲ ಸೊಬಗನ್ನು ಸವಿಯುತ್ತಾ ವಾಹನ, ಕಾಲ್ನಡಿಗೆಯಲ್ಲೇ ಸಾಗಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಿ ಬರಬಹುದು. ಇಂತಹ ಸೌಲಭ್ಯವಿರುವಾಗ ಬೆಟ್ಟಕ್ಕೆ ರೋಪ್‍ವೇ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿ ಮಾಡಬೇಡಿ ಎಂದು ಖಡಾಖಂಡಿತವಾಗಿ ಹೇಳಿದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ, ಈ ವರ್ಷದ ಬಜೆಟ್‍ನಲ್ಲಿ ಚಾಮುಂಡಿಬೆಟ್ಟದ ರೋಪ್‍ವೇ ಯೋಜನೆ ಪ್ರಸ್ತಾಪಿಸಲಾಗಿದೆ. ಆದರೆ, ಅದು ಶ್ರದ್ಧಾ-ಭಕ್ತಿಯ ಕೇಂದ್ರ. ರಾಜ-ಮಹಾರಾಜರು ಚಾಮುಂಡಿಬೆಟ್ಟವನ್ನು ಧಾರ್ಮಿಕ ಸ್ಥಳವಾಗಿ ಪ್ರಾಮುಖ್ಯವಾಗಿಸಿದ್ದರು. ಈಗಲೂ ಅದನ್ನು ಭಕ್ತಿಗೆ ಸೀಮಿತವಾಗಿರಿಸಿ. ಅದೇ ರೀತಿ ಬೆಟ್ಟದ ಮೇಲೆ ಎಲ್ಲೆಂದರಲ್ಲಿ ಮನೆ, ಕಟ್ಟಡಗಳು ನಿರ್ಮಾಣವಾಗಲು ಬಿಡಬಾರದು ಎಂದು ನುಡಿದರು.

ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾತನಾಡಿ, ಚಾಮುಂಡಿಬೆಟ್ಟ ದೂರವೂ ಇಲ್ಲ, ಅತ್ಯಂತ ಕಡಿದಾಗಿಯೂ ಇಲ್ಲದಿರುವುದರಿಂದ ಕಡಿಮೆ ಅವಧಿಯಲ್ಲೇ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ನಿಸರ್ಗ ಸೌಂದರ್ಯ ಸವಿಯುತ್ತಾ ಸಾಗಬಹುದಾದ್ದರಿಂದ ರೋಪ್‍ವೇ ಅನಗತ್ಯ ಎಂದು ಅಭಿಪ್ರಾಯಪಟ್ಟರು.

ಸಾಹಸ ಕ್ರೀಡಾ ತರಬೇತಿ ಸಂಸ್ಥೆಯ ರುಕ್ಮಿಣಿ ಅವರು, ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ತಡೆಯಬೇಕು. ಮರಳು ಮಿಶ್ರಿತ ಭೂಮಿಯಾದ್ದರಿಂದ ಬೆಟ್ಟ ಕುಸಿಯುತ್ತದೆ. ಯಾವುದೇ ಕಾರಣಕ್ಕೂ ರೋಪ್‍ವೇ ಮಾಡಬಾರದು ಎಂದರು. ಅದೇ ಅಭಿಪ್ರಾಯವನ್ನು ಎಸ್ಪಿ ಆರ್.ಚೇತನ್ ಸೇರಿದಂತೆ ಇತರರು ವ್ಯಕ್ತಪಡಿಸಿದರು.

ಆದರೆ ಅದಕ್ಕೆ ತದ್ವಿರುದ್ಧವಾಗಿ ಪ್ರತಿಕ್ರಿಯಿಸಿದ ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ವಾಹನಗಳಿಂದ ಶಬ್ದ, ವಾಯುಮಾಲಿನ್ಯ ಉಂಟಾಗುತ್ತಿರುವ ಕಾರಣ ಎಲೆಕ್ಟ್ರಿಕ್ ವಾಹನ ವ್ಯವಸ್ಥೆ ಮಾಡಿ, ತಂತ್ರಜ್ಞಾನ ಬಳಸಿ ಸಿಂಗಪೂರ್ ಮಾದರಿಯಲ್ಲಿ ಚಾಮುಂಡಿಬೆಟ್ಟಕ್ಕೆ ರೋಪ್‍ವೇ ಮಾಡುವುದರಿಂದ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದರು.

ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಈ ಭಾಗದ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಚಾಮುಂಡಿಬೆಟ್ಟಕ್ಕೆ ರೋಪ್‍ವೇ ಬೇಡ ಎಂದಿರುವುದರಿಂದ ಯೋಜನೆ ಕೈಬಿಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು. ತಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಪರಂಪರೆ ಇಲಾಖೆ ಆಯುಕ್ತ ಬಿ.ಆರ್.ಪೂರ್ಣಿಮಾ, ಡಿಸಿಎಫ್ ಕಮಲಾ ಕರಿಕಾಳನ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರು ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಜಯಕುಮಾರ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಬಿ.ಕೆ.ಲಿಂಗರಾಜು ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »