ಮೈಸೂರಲ್ಲಿವಿವೇಕ ಸ್ಮಾರಕಕ್ಕೆಅಡಿಗಲ್ಲು
ಮೈಸೂರು

ಮೈಸೂರಲ್ಲಿವಿವೇಕ ಸ್ಮಾರಕಕ್ಕೆಅಡಿಗಲ್ಲು

July 7, 2022

ಮೈಸೂರು, ಜು.6 (ಆರ್‍ಕೆಬಿ)- ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ರಾಮಕೃಷ್ಣ ಆಶ್ರಮದ ಉದ್ದೇಶಿತ `ಸ್ವಾಮಿ ವಿವೇಕಾನಂದ ಸಾಂಸ್ಕøತಿಕ ಯುವ ಕೇಂದ್ರ – ವಿವೇಕ ಸ್ಮಾರಕ’ದ ನಿರ್ಮಾಣಕ್ಕೆ ಇಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಭೂಮಿ ಪೂಜೆ ನೆರ ವೇರಿಸಲಾಯಿತು. ರಾಮಕೃಷ್ಣ ಆಶ್ರಮದ ಯತಿಗಳು ನಡೆಸಿದ ಹೋಮದೊಂದಿಗೆ ಶಂಕು ಸ್ಥಾಪನೆ ಕಾರ್ಯ ಆರಂಭವಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಶಂಕುಸ್ಥಾಪನೆ ನೆರವೇರಿಸಿದರು. ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ, ವಿವೇಕ ಸ್ಮಾರಕದ ಮೂಲ ಮಾದರಿಯನ್ನು ಅನಾವರಣಗೊಳಿಸಿದರು.

ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾ ಡಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಇದೊಂದು ಐತಿಹಾಸಿಕ ಕ್ಷಣ. ವಿವೇಕ ಸ್ಮಾರಕವು ಸಾಂಸ್ಕೃತಿಕ, ಐತಿಹಾಸಿಕ, ಜೀವಂತಿಕೆ ಮತ್ತು ಸ್ಮರಣೀಯ ಸ್ಮಾರಕವಾಗಲಿ. ಸ್ಮಾರಕವು ಸಂಪಿ ಗೆಯ ಸುಗಂಧವನ್ನು ವಿಶ್ವಾದ್ಯಂತ ಪಸರಿಸಲಿ, ಯುವಕರನ್ನು ಸನ್ಮಾರ್ಗದಲ್ಲಿ ನಡೆಸಲಿ ಎಂದು ಶುಭ ಕೋರಿದರು. ಮೈಸೂರು ಒಡೆಯರೊಂದಿಗೆ ಅನನ್ಯ ಸಂಬಂಧ ಹೊಂದಿದ್ದ ಸ್ವಾಮಿ ವಿವೇಕಾ ನಂದರು 1893 ರಲ್ಲಿ ವಿಶ್ವ ಧರ್ಮಗಳ ಸಂಸತ್ತಿ ನಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸಲು ಚಿಕಾಗೋಗೆ ಭೇಟಿ ನೀಡಲು ನಿರ್ಧರಿಸಿದ್ದು ನಮ್ಮ ಮೈಸೂರಿನಲ್ಲಿ. 10ನೇ ಚಾಮರಾಜ ಒಡೆಯರ್ ಅವರು ಚಿಕಾಗೋ ಪ್ರಯಾಣವನ್ನು ಪ್ರಾಯೋಜಿಸಲು ಮುಂದಾದರು. ಸ್ವಾಮಿ ವಿವೇಕಾನಂದರು ನಯವಾಗಿ ನಿರಾಕರಿಸಿದರು. ಅವರು ತಮ್ಮ ತಾಯಿಯ ಆಜ್ಞೆಯನ್ನು ಅನುಸರಿಸಿ ಪ್ರಯಾಣವನ್ನು ನಿರ್ಧರಿಸಿದರು. ಮಹಾರಾಜರಿಂದ ಹಣ ಸ್ವೀಕರಿಸಲು ಅವರು ತಮ್ಮ ತಾಯಿಯ ಅನುಮೋದನೆಯನ್ನು ಪಡೆಯಬೇಕಾಗಿದೆ ಎಂದು ಹೇಳಿ, ನೆರವನ್ನು ನಯವಾಗಿ ನಿರಾಕರಿಸಿದರು. ಆದರೆ ಕೆಲವು ದಿನಗಳ ಬಳಿಕ ಸ್ವಾಮಿ ವಿವೇಕಾನಂದರು ಮೈಸೂರಿಗೆ ಹಿಂತಿರುಗಿ, ತಮ್ಮ ಚಿಕಾಗೋ ಪ್ರಯಾಣಕ್ಕಾಗಿ ಮಹಾರಾಜರಿಂದ ಹಣವನ್ನು ಸ್ವೀಕರಿಸಿದರು ಎಂದು ಸುತ್ತೂರು ಸ್ವಾಮೀಜಿ ವಿವರಿಸಿದರು.
ವಿವೇಕ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳ ಸಹಕಾರ: ಶಂಕುಸ್ಥಾಪನೆ ನೆರವೇರಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ವಿವೇಕ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಲ್ಲ ಸಹಕಾರ ನೀಡಲಿವೆ. ಸ್ಮಾರಕ ನಿರ್ಮಾಣ ಯಾವುದೇ ಅಡೆತಡೆಗಳಾಗದಂತೆ ನಮಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಆದೇಶ ಬಂದಿದೆ. ಏಕೆಂದರೆ ಇದು ರಾಷ್ಟ್ರ ನಿರ್ಮಾಣದ ಮಹತ್ಕಾರ್ಯವಾಗಿದೆ. ಯುವಕರಿಗೆ ಅಪಾರ ಪ್ರಯೋಜನವೂ ಆಗಲಿದೆ. ಇಲ್ಲಿ ರಾಜಕೀಯಕ್ಕೆ ಸ್ಥಾನವಿಲ್ಲ ಎಂದು ಹೇಳಿದರು.

ದಶಕದ ಹೋರಾಟ ಸ್ಮರಿಸಿದ ಸ್ವಾಮಿ ಮುಕ್ತದಾನಂದಜೀ: ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಾತನಾಡಿ, ಸ್ಮಾರಕ ನಿರ್ಮಾಣಕ್ಕೆ ನಡೆದ 10 ವರ್ಷದ ಹೋರಾಟವನ್ನು ಸ್ಮರಿಸಿದರು. ಮೈಸೂರಿಗರ 10 ವರ್ಷಗಳ ಸಂಕಲ್ಪ ಇಂದು ನಿಜವಾಗಿದೆ. ನಾವು ಅನೇಕ ಅಡೆತಡೆಗಳನ್ನು ಎದುರಿಸಿದ್ದೇವೆ. ಆದರೆ ನಾವು ತಾಳ್ಮೆಯಿಂದಿದ್ದೇವೆ. ಸತ್ಯ ಮತ್ತು ಉದಾತ್ತ ಕಾರಣವು ಮೇಲುಗೈ ಸಾಧಿಸುತ್ತದೆ ಎಂಬುದು ನಮ್ಮ ನಂಬಿಕೆ. ಹಾಗಾಗಿ ಸಾವಿರಾರು ಜನರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ದಶಕಗಳಿಂದ ನಿರ್ಲಕ್ಷಿಸಲ್ಪಟ್ಟ ಸ್ಥಳವು ಸ್ಮರಣೀಯ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು. ಎಲ್ಲರನ್ನು ಒಳಗೊಂಡ ಕೇಂದ್ರವಾಗಿರುವ ಇದು ಭಾರತೀಯ ಯುವಕರಿಗೆ ಸ್ವಾಮಿ ವಿವೇಕಾನಂದರ ಸಂಕಲ್ಪದಂತೆ, ಅವರ ಉದ್ದೇಶಗಳನ್ನು ಸಾಧಿಸುತ್ತದೆ ಎಂದು ತಿಳಿಸಿದರು.

ವಿವೇಕ ಸ್ಮಾರಕ- ಮತ್ತೊಂದು ಇತಿಹಾಸ ನಿರ್ಮಾಣ: ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ವಿವೇಕ ಸ್ಮಾರಕ ನಿರ್ಮಾಣದಿಂದ ಇತಿಹಾಸದ ನೆನಪು ಮಾಡುವ ಜೊತೆಗೆ ಮೈಸೂರಿನಲ್ಲಿ ಮತ್ತೊಂದು ಇತಿಹಾಸ ನಿರ್ಮಾಣವಾಗಲಿದೆ. ಇದು ಕಲಿಕೆಯ ಸ್ಥಳವಾಗಲಿದೆ. ಸಮೀಪದಲ್ಲಿಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭವನ ಇದೆ. ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡುವ ಪ್ರಮುಖ ಸ್ಥಳವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇಲ್ಲಿಯ ಬಡ ಮಕ್ಕಳಿಗೆ ಜ್ಞಾನ ಸಿಗುವಂತಾಗಲಿ: ಸ್ವಾಮೀಜಿಗಳಿಗೆ ಜಿಟಿಡಿ ಸಲಹೆ: ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರು ಮಾತನಾಡಿ, ವಿವಾದದ ಸುಳಿಯಲ್ಲಿ ಸಿಲುಕಿದ್ದ ಈ ಜಾಗ ಹೋರಾಟದ ಕೇಂದ್ರ ಬಿಂದುವೂ ಆಗಿತ್ತು. ಕೆಲವೇ ಮತಗಳಿಗಾಗಿ ರಾಜಕೀಯ ಮಾಡಿ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಪಡಿಸಲಾಗಿತ್ತು. ಕೆಲವರು ಪ್ರಚಾರಕ್ಕಾಗಿ ಸಮುದಾಯಗಳನ್ನು ವಿಭಜಿಸಲು ಮುಂದಾದರು. ಇಂದು ಎಲ್ಲ ಅಡೆತಡೆಗಳು ನಿವಾರಣೆ ಯಾಗಿದ್ದು, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ಒಂದು ವಿಗ್ರಹ ರೂಪುಗೊಳ್ಳ ಬೇಕಾದರೆ ಅದನ್ನು ಕೆತ್ತಿ, ತೀಡಿ ಸುಂದರವಾಗಿ ರೂಪುಗೊಳಿಸಲಾಗುತ್ತದೆ. ಅದೇ ರೀತ ಇದೂ ಕೂಡ ಹೊಳಪು ಪಡೆಯಲಿದೆ. ವಿವೇಕಾನಂದರು `ಏಳಿ ಎದ್ದೇಳಿ.. ಗುರಿ ಮುಟ್ಟುವತನಕ ನಿಲ್ಲದಿರಿ… ಎಂದಿದ್ದರು. ಆ ಕೆಲಸ ಈಗ ಮೈಸೂರಿನಲ್ಲಿ ಆಗಿದೆ ಎಂದರು.

ಈ ಜಾಗದಲ್ಲಿದ್ದ ಶಾಲೆಯ ಎಲ್ಲಾ ಬಡ ಮಕ್ಕಳನ್ನು ಗುರುತಿಸಿ, ಪಟ್ಟಿ ಮಾಡಿ, ಈ ಕೇಂದ್ರದಿಂದ ಅವರ ಅಭ್ಯುದಯ ಆಗಬೇಕು. ಅಷ್ಟೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದನ್ನು ಸವಾಲಾಗಿ ಸ್ವೀಕರಿಸಬೇಕು. ಈ ಕೇಂದ್ರದಿಂದ ಎಷ್ಟು ಹೂವುಗಳು ಅರಳಿವೆ ಎಂಬುದನ್ನು ತೋರಿಸಬೇಕು. ಹೋರಾಟ ಮಾಡಿದವರಿಗೂ ಒಳ್ಳೆಯ ಜ್ಷಾನೋದಯ ಆಗಬೇಕು ಎಂದು ಆಶ್ರಮದ ಸ್ವಾಮೀಜಿಯವರ ಗಮನ ಸೆಳೆದರು.

ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸ್ಮಾರಕದ ಸುತ್ತಮುತ್ತ ಅನೇಕ ಶಿಕ್ಷಣ ಸಂಸ್ಥೆಗಳಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳು ಓದುತ್ತಿದ್ದಾರೆ. ವಿವೇಕ ಸ್ಮಾರಕದಲ್ಲಿ ನಿರ್ಮಾಣವಾಗುವ ಗ್ರಂಥಾಲಯದಿಂದ ಅವರ ಜ್ಞಾನ ವೃದ್ದಿಗೆ ಅನುಕೂಲವಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‍ಸಿಂಹ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಎಂಎಲ್‍ಸಿ ಡಿ.ಮಾದೇಗೌಡ, ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ, ಮೈಸೂರು ವಿವಿ ಕುಲಪತಿ ಪೆÇ್ರ.ಜಿ.ಹೇಮಂತಕುಮಾರ್, `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಸಂಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ, ಮಾಜಿ ಶಾಸಕ ವಾಸು, ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ, ಗದಗ ಮಾಜಿ ಶಾಸಕ ಬಿ.ಆರ್.ಪಾಟೀಲ, ಕಪ್ಪತಗುಡ್ಡ ಶಿವಕುಮಾರ ಮಹಾಸ್ವಾಮೀಜಿ, ತುಮಕೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ, ಮೈಸೂರು ರಾಮಕೃಷ್ಣ ಆಶ್ರಮದ ಮಾಜಿ ಅಧ್ಯಕ್ಷ ಸ್ವಾಮಿ ಆತ್ಮವಿದಾನಂದಜೀ, ಸ್ವಾಮಿ ಯುಕ್ತೇಶಾನಂದಜೀ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಜಂಗಲ್ ಲಾಡ್ಜಸ್ ಮತ್ತು ರೆಸಾಟ್ರ್ಸ್ ಅಧ್ಯಕ್ಷ ಎಂ.ಅಪ್ಪಣ್ಣ, ಕಾಡಾ ಅಧ್ಯಕ್ಷ ಎನ್.ಶಿವಲಿಂಗಯ್ಯ, ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಯೋಜನೆಯ ಮೂಲ ಮಾದರಿ ರೂಪಿಸಿದ ವಿನ್ಯಾಸಕಾರ ರವೀಂದ್ರ ಇನ್ನಿತರರು ಉಪಸ್ಥಿತರಿದ್ದರು.

Translate »