ಮೈಸೂರಿಗೆ ವಿವೇಕ ಸ್ಮಾರಕ ಕಳಶಪ್ರಾಯ
ಮೈಸೂರು

ಮೈಸೂರಿಗೆ ವಿವೇಕ ಸ್ಮಾರಕ ಕಳಶಪ್ರಾಯ

July 7, 2022

ಮೈಸೂರು, ಜು.6 (ಆರ್‍ಕೆಬಿ)- ನೂರಾರು ಜನರ ಹೋರಾಟದ ಫಲವಾಗಿ ಇಂದು ಶಂಕುಸ್ಥಾಪನೆಗೊಂಡಿರುವ `ವಿವೇಕ ಸ್ಮಾರಕ’ ಮೈಸೂರಿಗೆ ಕಳಶಪ್ರಾಯವಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಆಶಯ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ವಿವೇಕ ಸ್ಮಾರಕದ ಶಂಕು ಸ್ಥಾಪನೆ ಸಮಾರಂಭದಲ್ಲಿ ಯೋಜನೆಯ ಮೂಲ ಮಾದರಿ ಅನಾವರಣಗೊಳಿಸಿ ಅವರು ಮಾತನಾಡಿದರು. 1913ರಲ್ಲಿ ರವೀಂದ್ರನಾಥ ಠಾಗೋರ್ ಅವರಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪಾರಿತೋಷಕ ದೊರೆಯಿತು. ಹಾಗೆಯೇ 1915ರಲ್ಲಿ ಫ್ರೆಂಚ್‍ನ ರೊಮೈನ್ ರೊಲಾಂಡ್ ಅವರಿಗೂ ನೊಬೆಲ್ ಪಾರಿತೋಷಕ ಬರು ತ್ತದೆ. ಇದನ್ನು ಪಡೆದುಕೊಳ್ಳುವ ಸಂದರ್ಭ ದಲ್ಲಿ ಠಾಗೋರ್ ಹಾಗೂ ರೊಲಾಂಡ್ ಇಬ್ಬರ ಭೇಟಿಯಾಗುತ್ತದೆ. ಆಗ ಫ್ರೆಂಚ್ ನಾಟಕಕಾರ, ಕಾದಂಬರಿಕಾರ ರೊಲಾಂಡ್ ಅವರು ರವೀಂದ್ರನಾಥ್ ಠಾಗೋರ್ ಅವರೊಂದಿಗೆ ಮಾತನಾಡುತ್ತಾ, ಭಾರತದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ವ್ಯಕ್ತಪಡಿಸುತ್ತಾರೆ. ಭಾರತದ ಬಗ್ಗೆ ಸಮಗ್ರವಾಗಿ ಕಟ್ಟಿಕೊಡುವಂತಹ ಒಂದು ಪುಸ್ತಕವನ್ನು ತಿಳಿಸುವಂತೆಯೂ ಠಾಗೋರ್ ಅವರನ್ನು ಕೇಳುತ್ತಾರೆ. ಆಗ ಠಾಗೋರ್ ಅವರು ನೀವು ವಿವೇಕಾನಂದರ ಬಗ್ಗೆ ಅಧ್ಯಯನ ಮಾಡಿ ಎನ್ನುತ್ತಾರೆ. ಆಗ ರೊಮೈನ್ ರೊಲಾಂಡ್ ಅವರು ವಿವೇಕಾನಂದರ ಅಧ್ಯಯನದ ಮೂಲಕ ಭಾರತದ ಬಗ್ಗೆ ತಿಳಿದುಕೊಳ್ಳುತ್ತಾರೆ. ಬಳಿಕ ವಿವೇಕಾನಂದರ ಬಗ್ಗೆ ಪುಸ್ತಕವೊಂದನ್ನು ಸಹ ಬರೆಯುತ್ತಾರೆ. ನೊಬೆಲ್ ಪಾರಿತೋಷಕ ಪಡೆದ ವ್ಯಕ್ತಿ ಇಷ್ಟೊಂದು ಪ್ರೇರಣೆ ಪಡೆದು ಕೊಳ್ಳುತ್ತಾರೆಂದರೆ ವಿವೇಕಾ ನಂದರ ವ್ಯಕ್ತಿತ್ವ ಎಷ್ಟು ದೊಡ್ಡದು ಎಂಬುದು ಗೊತ್ತಾಗುತ್ತದೆ ಎಂದು ಪ್ರತಾಪ್‍ಸಿಂಹ ತಿಳಿಸಿದರು.

ವಿವೇಕಾನಂದರು 1893ರಲ್ಲಿ ಅಮೆರಿಕಾಕ್ಕೆ ಹೋದಾಗ ಅಲ್ಲಿ ಹೇಳಿದ `ಅಮೆರಿಕಾದ ನನ್ನ ಸಹೋದರ- ಸಹೋದರಿಯರೇ…’ ಎಂಬ ಅವರ ವಾಕ್ಯದಲ್ಲಿ ಏನಿದೆ ಎಂದು ನಮಗನಿಸ ಬಹುದು. ಆ ವಾಕ್ಯ ಎಲ್ಲರಿಗೂ ಕೂಡ ಸಹೋದರ-ಸಹೋದರಿಯಂತೆ ನೋಡುವ ಭಾರತದ ಸಂಸ್ಕøತಿಯ ಹಿನ್ನೆಲೆಯನ್ನು ಅವರು ಒಂದೇ ವಾಕ್ಯದಲ್ಲಿ ಕಟ್ಟಿಕೊಟ್ಟರು. ಅದರ ಮಾರನೇ ದಿನ ಪತ್ರಿಕೆಗಳಲ್ಲಿ `ಕೊಲಂಬಸ್ ಅಮೆರಿಕದ ಮಣ್ಣನ್ನು ಅನ್ವೇಷಿಸಿದ, ವಿವೇಕಾ ನಂದರು ಅಮೆರಿಕಾದ ಆತ್ಮವನ್ನು ಅನ್ವೇಷಿ ಸಿದರು’ ಎಂದು ಪ್ರಕಟವಾಗಿತ್ತು.

ಅಂತಹ ವಿವೇಕಾನಂದರು ಮೈಸೂರಿಗೆ ಬಂದು, ಅವರು ನೆಲೆಸಿದ್ದ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣವಾಗಲು ಇದರ ಹಿಂದೆ ನೂರಾರು ಜನರ ಕೊಡುಗೆ, ಹೋರಾಟ, ಶ್ರಮವಿದೆ. ಎಲ್ಲ ರೀತಿಯ ಹೋರಾಟ, ಒತ್ತಡವನ್ನು ತಾಳಿಕೊಂಡು, ಸ್ವಾಮಿ ಮುಕ್ತಿದಾನಂದಜೀ ಬಂದಿದ್ದಾರೆ. ಅದರ ಫಲ, ಇಂದಿನ ವಿವೇಕ ಸ್ಮಾರಕದ ಶಂಕುಸ್ಥಾಪ ನೆಗೆ ಕಾರಣವಾಗಿದೆ. ವಿವೇಕ ಸ್ಮಾರಕ ಮೈಸೂ ರಿಗೆ ಕಳಶಪ್ರಾಯವಾಗಲಿದೆ ಎಂದರು.

ವಿವೇಕ ಸ್ಮಾರಕದ ವಿಚಾರದಲ್ಲಿ `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರ ಸಹಕಾರದ ಬಗ್ಗೆಯೂ ಪ್ರತಾಪ್‍ಸಿಂಹ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದರು.

Translate »