ಕೊಡಗಲ್ಲಿ ನಿರಂತರ ಮಳೆ: ಕೆಲವೆಡೆ ಭೂ ಕುಸಿತ
ಕೊಡಗು

ಕೊಡಗಲ್ಲಿ ನಿರಂತರ ಮಳೆ: ಕೆಲವೆಡೆ ಭೂ ಕುಸಿತ

July 7, 2022

ಮಡಿಕೇರಿ,ಜು.6- ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಲಘು ಭೂ ಕುಸಿತ, ಮರ ಮುರಿದು ಬಿದ್ದಿರುವುದು, ಮಳೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು, ಗುರುವಾರ ಬೆಳಗ್ಗೆವರೆಗೂ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಮಡಿಕೇರಿ-ಮಾಣಿ ರಾಷ್ಟ್ರೀಯ ಹೆದ್ದಾರಿ 275ನ ಕರ್ತೋಜೆ ಬಳಿ ಹೆದ್ದಾರಿಗೆ ಮರಗಳು ನೆಲಕ್ಕೆ ಉರುಳಿ ಬೀಳುವುದರಿಂದರೊಂದಿಗೆ ಭಾರೀ ಭೂ ಕುಸಿದು ವಾಹನ ಸಂಚಾರ ಕೆಲಕಾಲ ಬಂದ್ ಆಗಿತ್ತು. ಹಿಟಾಚಿ ಸಹಾಯದಿಂದ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಗೊಳಿಸಲಾಯಿತು. ಮಾದಾಪುರ ಜಂಬೂರು ರಸ್ತೆಗೆ ಮರ ಮುರಿದು ಬಿದ್ದು ಕೆಲ ಕಾಲ ರಸ್ತೆ ಸಂಪರ್ಕ ಬಂದ್ ಆಗಿತ್ತು. ಸ್ಥಳೀಯ ಪಂಚಾಯಿತಿ ಟಾಸ್ಕ್ ಫೋರ್ಸ್ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ. ಹಲವು ಕಡೆಗಳಲ್ಲಿ ಮರಗಳು ಮುರಿದು ಬಿದ್ದು, ರಸ್ತೆ ಸಂಚಾರ ವ್ಯತ್ಯಯವಾದ ಬಗ್ಗೆ ವರದಿಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಮರಗಳನ್ನು ತೆರವುಗೊಳಿಸಿದ್ದಾರೆ.

ಇನ್ನು ಕಾವೇರಿ ನದಿ ಪ್ರವಾಹದಿಂದ ಭಾಗಮಂಡಲದ ತ್ರಿವೇಣಿ ಸಂಗಮ ಕಳೆದ 4 ದಿನಗಳಿಂದ ಮುಳುಗಿದ ಸ್ಥಿತಿಯಲ್ಲಿದೆ. ಭಾಗಮಂಡಲ-ಅಯ್ಯಂಗೇರಿ ರಸ್ತೆ ಕೂಡ 3 ದಿನಗಳಿಂದ ಬಂದ್ ಆಗಿದ್ದರೆ, ಮಡಿಕೇರಿ ಭಾಗಮಂಡಲ ರಸ್ತೆ ಮೇಲೆ 2 ಅಡಿ ನೀರು ಹರಿಯುತ್ತಿದೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತಾವೂರು ಗ್ರಾಮದ ಬಾರಿಕೆ ಕೃಷ್ಣ ಎಂಬವರ ಮನೆ ಬಹುತೇಕ ಕುಸಿದು ಬಿದ್ದಿದ್ದು ನಷ್ಟ ಉಂಟಾಗಿದೆ. ಸಂಪಾಜೆ ಹೋಬಳಿ ಕಾಟಕೇರಿ ಗ್ರಾಮದ ಕುಂಚೆಟ್ಟಿರ ಪೊನ್ನಪ್ಪ ಎಂಬವರ ವಾಸದ ಮನೆಯ ಮೇಲೆ ಮರ ಮುರಿದು ಬಿದ್ದಿದ್ದು, ಹಾನಿಯ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೊಡ್ಲಿಪೇಟೆ ಹೋಬಳಿಯ ಶಿವರಳ್ಳಿ ಗ್ರಾಮದಲ್ಲಿ ಸುಶೀಲ ಎಂಬವರ ಮನೆಯ ಮೇಲೆ ಮರ ಬಿದ್ದಿದ್ದು, ಹಾನಿ ಸಂಭವಿಸಿದೆ. ಎಲ್ಲಾ ಪ್ರಕರಣಗಳಲ್ಲೂ ಮನೆ ಮಂದಿ ಅಪಾಯದಿಂದ ಪಾರಾಗಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಭಾರೀ ಗಾಳಿಗೆ ವಿದ್ಯುತ್ ಕಂಬಗಳ ಮುರಿದು ಬಿದ್ದಿದ್ದು, ದುರಸ್ತಿ ಕಾರ್ಯ ನಡೆಸಲಾಗು ತ್ತಿದೆ. ಅಮ್ಮತ್ತಿ ಬಳಿಯ ಕಾಫಿ ತೋಟದ ಒಳಗೆ 33 ಕೆ.ವಿ. ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದ್ದು, ಸಿದ್ದಾಪುರ ಭಾಗಕ್ಕೆ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಬುಧವಾರ ಬೆಳಗೆ ದುರಸ್ತಿ ಕಾರ್ಯ ನಡೆಸಿದ ಬಳಿಕ ವಿದ್ಯುತ್ ಮರು ಪೂರೈಕೆ ಮಾಡಲಾಗಿದೆ. ಕೊಳಕೇರಿ, ಗರ್ವಾಲೆ, ಸೂರ್ಲಬ್ಬಿ, ಮಾದಾಪುರ, ನಾಪೋಕ್ಲು, ಗಾಳಿಬೀಡು, ಸಂಪಾಜೆ, ಕೊಡ್ಲಿಪೇಟೆ, ಬಾಳಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬಗಳ ಸಹಿತ ಟ್ರಾನ್ಸ್‍ಫಾರ್ಮರ್‍ಗಳು ಮುರಿದು ಬಿದ್ದಿರುವ ಘಟನೆಗಳು ವರದಿಯಾಗಿವೆ. ಕಳೆದ 24 ಗಂಟೆ ಅವಧಿಯಲ್ಲಿ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯಲ್ಲಿ 172 ಮಿ.ಮೀ, ಮದೆನಾಡು ಗ್ರಾ.ಪಂ ವ್ಯಾಪ್ತಿ ಯಲ್ಲಿ 166 ಮಿ.ಮೀ, ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ 157 ಮಿ.ಮೀ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ 126.5 ಮಿ.ಮೀ, ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 127 ಮಿಮೀ ಮಳೆ ಸುರಿದಿರುವುದಾಗಿ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ಭಾರೀ ಮಳೆಯಾಗುತ್ತಿರುವ ಕಾರಣ ಹಾರಂಗಿ ಜಲಾಶಯಕ್ಕೆ 12,644 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, ಜಲಾಶಯದಿಂದ ನದಿಗೆ 11,940 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. 2859 ಅಡಿ ನೀರಿನ ಸಂಗ್ರಹ ಸಾಮಥ್ರ್ಯ ಇರುವ ಜಲಾಶಯದಲ್ಲಿ ಪ್ರಸ್ತುತ 2854.54 ಅಡಿಗಳಷ್ಟು ನೀರಿನ ಸಂಗ್ರಹವಿದೆ ಎಂದು ಜಲಾಶಯ ಅಧಿಕಾರಿಗಳು ತಿಳಿಸಿದ್ದಾರೆ.

Translate »