ಹುಬ್ಬಳ್ಳಿ, ಜು.5-ದೇಶ-ವಿದೇಶದಲ್ಲಿ `ಸರಳ ವಾಸ್ತು’ ಮೂಲಕ ಪ್ರಖ್ಯಾತಿ ಗಳಿಸಿದ್ದ ಬಾಗಲಕೋಟೆಯ ಚಂದ್ರಶೇಖರ ಗುರೂಜಿಯ ವರನ್ನು (60) ಇಂದು ಮಧ್ಯಾಹ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ಐಷಾರಾಮಿ ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಈ ಭಯಾನಕ ದೃಶ್ಯ ಹೊಟೇಲ್‍ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುರೂಜಿ ಅವರ `ಸರಳ ವಾಸ್ತು’ ಕಚೇರಿಯಲ್ಲಿ ಈ ಹಿಂದೆ ಉದ್ಯೋಗಿಗಳಾಗಿದ್ದು, ಗುರೂಜಿ ಅವರ ಮಾಜಿ ಆಪ್ತ ಸಹಾಯಕರೂ ಆಗಿದ್ದ ಧಾರವಾಡದ ಮಹಾಂತೇಶ್ ಶಿರೂರ್ ಹಾಗೂ ಕಲಘಟಗಿಯ ಮಂಜುನಾಥ್ ದುಮ್ಮವಾಡ ಹತ್ಯೆಯ ಆರೋಪಿಗಳಾಗಿದ್ದು, ಇವರನ್ನು ಘಟನೆ ನಡೆದ ನಾಲ್ಕು ಗಂಟೆ ಒಳಗೆ ರಾಮದುರ್ಗದ ಬಳಿ ಬಂಧಿಸಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಕಿಮ್ಸ್‍ಗೆ ಸಾಗಿಸಲಾಯಿತಾದರೂ, ಆಸ್ಪತ್ರೆ ತಲುಪುವ ಮುನ್ನವೇ ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಅವರ ದೇಹವನ್ನು ಕಿಮ್ಸ್ ಶವಾಗಾರದಲ್ಲಿ ಇರಿಸಲಾಗಿದ್ದು, ನಾಳೆ ಮರಣೋತ್ತರ ಪರೀಕ್ಷೆ ನಂತರ ಅವರ ಸಂಬಂಧಿಕರಿಗೆ ದೇಹವನ್ನು ಒಪ್ಪಿಸಲಾಗುತ್ತಿದೆ. ನಂತರ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿನ ಅವರ ಜಮೀನಿನಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ.
ಘಟನೆ ವಿವರ: ಜುಲೈ 2 ರಿಂದ ಚಂದ್ರಶೇಖರ ಗುರೂಜಿ ಈ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಈ ಹೋಟೆಲ್‍ಗೆ ಬಂದ ಮಹಾಂತೇಶ್ ಶಿರೂರ್ ಮತ್ತು ಮಂಜುನಾಥ್ ದುಮ್ಮವಾಡ, ಹೋಟೆಲ್ ಸಿಬ್ಬಂದಿಗೆ ತಾವು ಚಂದ್ರಶೇಖರ್ ಗುರೂಜಿ ಅವರನ್ನು ಭೇಟಿಯಾ ಗಲು ಬಂದಿರುವುದಾಗಿ ತಿಳಿಸಿದ್ದಾರೆ.
ಈ ವಿಷಯವನ್ನು ಹೋಟೆಲ್ ಸಿಬ್ಬಂದಿ ಮೊದಲ ಮಹಡಿಯ ರೂಂ ನಂ.220ರಲ್ಲಿ ತಂಗಿದ್ದ ಗುರೂಜಿ ಅವರಿಗೆ ತಿಳಿಸಿದ್ದಾರೆ. ಅವರನ್ನು ಅಲ್ಲೇ ಕೂರಿಸಿ, ತಾವು ಭೇಟಿ ಮಾಡಲು ಬರುವುದಾಗಿ ಗುರೂಜಿ ಹೋಟೆಲ್ ಸಿಬ್ಬಂದಿಗೆ ಹೇಳಿ ಕಳುಹಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಚಂದ್ರಶೇಖರ ಗುರೂಜಿ ಕೆಳಗಿಳಿದು ಲಾಬಿಗೆ ಆಗಮಿಸಿ, ಈ ಇಬ್ಬರು ಕುಳಿತಿದ್ದ ಸ್ಥಳಕ್ಕೆ ಬಂದು, ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಗುರೂಜಿ ಅವರು ಬರುತ್ತಿದ್ದಂತೆ ಕೂತಲ್ಲಿಂದ ಮಹಾಂತೇಶ್ ಹಾಗೂ ಮಂಜುನಾಥ್ ಮೇಲೆದ್ದಿದ್ದಾರೆ. ಇವರಲ್ಲಿ ಒಬ್ಬನು ಸ್ವಾಮೀಜಿಯವರ ಆಶೀರ್ವಾದ ಪಡೆಯುವವನಂತೆ ಅವರ ಪಾದಕ್ಕೆರಗಿದ್ದಾನೆ. ಮತ್ತೊಬ್ಬ ಅವರ ಪಕ್ಕದಲ್ಲೇ ನಿಂತಿದ್ದು, ಪಾದಕ್ಕೆರಗಿದವನಿಗೆ ಆಶೀರ್ವದಿಸಲು ಗುರೂಜಿ ಕುರ್ಚಿಯಿಂದ ಬಾಗಲು ಮುಂದಾಗುತ್ತಿದ್ದಂತೆಯೇ ನಿಂತಿದ್ದವನು ಅವರ ಎದೆಗೆ ಚೂರಿಯಿಂದ ಇರಿದಿದ್ದಾನೆ. ಏಕಾಏಕಿ ನಡೆದ ಈ ದಾಳಿಯಿಂದ ಬೆಚ್ಚಿದ ಗುರೂಜಿಯವರು ಮೇಲೆದ್ದು, ತಮ್ಮ ಮೇಲಿನ ದಾಳಿಯಿಂದ ಪಾರಾಗಲು ಯತ್ನಿಸುತ್ತಿದ್ದಂತೆ ಇಬ್ಬರೂ ಚೂರಿಯಿಂದ ಗುರೂಜಿಯ ಎದೆ, ಬೆನ್ನು, ಹೊಟ್ಟೆ… ಹೀಗೆ ದೇಹದ ವಿವಿಧೆಡೆ ಇರಿದಿದ್ದಾರೆ. ಅಷ್ಟರಲ್ಲಿ ಗುರೂಜಿ ಕೆಳಗುರುಳಿ ಒದ್ದಾಡಿದರೂ ಬಿಡದೆ ಮತ್ತೆ ಹಲವೆಡೆ ಇರಿದು ಕೊನೆಗೆ ಕತ್ತು ಕೊಯ್ದಿದ್ದಾರೆ. ಇಷ್ಟೆಲ್ಲಾ ಕೇವಲ 40 ಸೆಕೆಂಡ್‍ನಲ್ಲಿ ಮುಗಿದು ಹೋಗಿದೆ. ಈ ಭೀಭತ್ಸ ದಾಳಿಯಿಂದ ಭಯಭೀತರಾದ ಲಾಬಿಯಲ್ಲಿದ್ದ ಹೋಟೆಲ್ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಅದರಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಚೀರಿಕೊಂಡು ಒಂದೆಡೆ ಓಡಿ ಹೋಗುತ್ತಾರೆ. ಕೆಲ ಪುರುಷ ಸಿಬ್ಬಂದಿ ಗುರೂಜಿ ಮೇಲಿನ ದಾಳಿಯನ್ನು ತಡೆಯುವ ಯತ್ನವನ್ನು ಮಾಡಿದ್ದಾರೆ. ಆದರೆ ಅವರಿಗೂ ಚಾಕು ತೋರಿಸಿ ಈ ಇಬ್ಬರು ಬೆದರಿಕೆ ಹಾಕುವುದರಿಂದ ಅವರು ಹೆದರಿ ಹಿಂದೆ ಸರಿದಿದ್ದಾರೆ. ಕೊನೆಗೆ ಈ ಇಬ್ಬರು ಹಂತಕರು ಹೋಟೆಲ್‍ನ ಹೊರಗೆ ಓಡಿ ಹೋಗಿ, ಅಲ್ಲೇ ನಿಂತಿದ್ದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೂಡಲೇ ಹೋಟೆಲ್ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗುರೂಜಿಯನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲದೇ ವಿದ್ಯಾನಗರ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹಂತಕರ ಸೆರೆಗೆ ನಾಕಾಬಂದಿ ವಿಧಿಸಿ ಕಾರ್ಯಾ ಚರಣೆಗಿಳಿದಿ ದ್ದಾರೆ. ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂ ರಾಂ, ಡಿಸಿಪಿಗಳು ಹೋಟೆಲ್‍ನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ 5 ತಂಡಗಳನ್ನು ರಚಿಸುವುದರೊಂದಿಗೆ ಹಂತಕರ ಸೆರೆಗೆ ತ್ವರಿತ ಕ್ರಮ ಕೈಗೊಂಡರು.
ಮುಂಬೈನ ತಮ್ಮ ಸರಳ ವಾಸ್ತು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಣ್ಣನ ಮಗ ನಿಧನ ಹೊಂದಿದ್ದು, ಆತನ ಅಂತಿಮ ದರ್ಶನಕ್ಕೆ ಗುರೂಜಿ ಹುಬ್ಬಳ್ಳಿಗೆ ಬಂದಿದ್ದರು.