40 ಸೆಕೆಂಡ್‍ನಲ್ಲಿ ಹತ್ಯೆ: 4 ಗಂಟೆಯಲ್ಲಿ ಅಂದರ್!
News

40 ಸೆಕೆಂಡ್‍ನಲ್ಲಿ ಹತ್ಯೆ: 4 ಗಂಟೆಯಲ್ಲಿ ಅಂದರ್!

July 6, 2022

ಹುಬ್ಬಳ್ಳಿ, ಜು.5-ಹುಬ್ಬಳ್ಳಿಯ ಐಷಾರಾಮಿ ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಚಂದ್ರಶೇಖರ್ ಗುರೂಜಿ ಅವರನ್ನು ಕೇವಲ 40 ಸೆಕೆಂಡ್‍ಗಳಲ್ಲಿ ಕಗ್ಗೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು 4 ಗಂಟೆಯಲ್ಲಿ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ವಿಷಯ ತಿಳಿದು ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಹಾಗೂ ಸಿಸಿ ಟಿವಿ ಕ್ಯಾಮರಾದ ದೃಶ್ಯಗಳ ಆಧರಿಸಿ ಕೂಡಲೇ ಹುಬ್ಬಳ್ಳಿಯಲ್ಲಿ ನಾಕಾಬಂದಿ ವಿಧಿಸಿದ್ದಲ್ಲದೆ, ನೆರೆ ಜಿಲ್ಲೆಗಳ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಅಲ್ಲದೇ 5 ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆಗಿಳಿದರು. ಗುರೂಜಿ ಹತ್ಯೆ ನಂತರ ಹಂತಕರು ತಮ್ಮ ಮೊಬೈಲ್‍ಗಳನ್ನು ಚಾಲನೆಯಲ್ಲಿಟ್ಟಿದ್ದರಿಂದ ಪೊಲೀಸರು ಅವರ ಸುಳಿವಿನ ಜಾಡು ಹಿಡಿಯಲು ಸಹಾಯಕವಾಯಿತು. ಹತ್ಯೆ ನಡೆದ ನಂತರ ಹಂತಕರು ತಾವು ಧರಿಸಿದ್ದ ಬಟ್ಟೆ ಬದಲಿಸಿ, ಕಾರಿನಲ್ಲಿ ಬೆಳಗಾವಿ ಮೂಲಕ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದರು. ಮೊಬೈಲ್ ಜಾಡನ್ನು ಹಿಡಿದು ಬೆನ್ನತ್ತಿದ ಪೊಲೀಸರು, ಕೊನೆಗೆ ಹಂತಕರು ರಾಮದುರ್ಗದ ಬಳಿ ಹೋಗುತ್ತಿರುವ ಮಾಹಿತಿ ಪಡೆದಿದ್ದಾರೆ. ತಕ್ಷಣ ಬೆಳಗಾವಿ ಪೊಲೀಸರಿಗೆ ವಿಷಯ ತಿಳಿಸಿ, ತಾವೂ ಹಿಂಬಾಲಿಸಿದ್ದಾರೆ. ಹುಬ್ಬಳ್ಳಿ ಪೊಲೀಸರ ಮಾಹಿತಿಯಂತೆ ರಾಮದುರ್ಗ ಪೊಲೀಸರು, ಹೆದ್ದಾರಿಯಲ್ಲಿ ಅಡ್ಡಲಾಗಿ ಜೆಸಿಬಿ ವಾಹನವನ್ನು ನಿಲ್ಲಿಸಿಕೊಂಡು ಕಾದಿದ್ದರು. ನಿರೀಕ್ಷೆಯಂತೆ ಕಾರಿನಲ್ಲಿ ಬಂದ ಹಂತಕರನ್ನು ರಾಮದುರ್ಗ ಡಿವೈಎಸ್ಪಿ ಪಿಸ್ತೂಲು ತೋರಿಸಿ, ಸಿನಿಮೀಯ ರೀತಿ ಎಚ್ಚರಿಕೆ ನೀಡಿ ಶರಣಾಗುವಂತೆ ಮಾಡಿ, ಕೊನೆಗೆ ಹಂತಕರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Translate »