ಜು.10ರ ನಂತರ ದಸರಾ ಉನ್ನತ ಸಮಿತಿ ಸಭೆ
ಮೈಸೂರು

ಜು.10ರ ನಂತರ ದಸರಾ ಉನ್ನತ ಸಮಿತಿ ಸಭೆ

July 6, 2022

ಮೈಸೂರು, ಜು. 5(ಆರ್‍ಕೆ)-ಜುಲೈ 10ರ ನಂತರ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮೈಸೂರಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜುಲೈ 10ರ ನಂತರ ಬೆಂಗಳೂ ರಲ್ಲಿ ದಸರಾ ಉನ್ನತ ಸಮಿತಿ (ಹೈಪವರ್ ಕಮಿಟಿ) ಸಭೆ ನಡೆಸಿ, ರೂಪು-ರೇಷೆಗಳ ಬಗ್ಗೆ ಚರ್ಚಿಸಿದ ನಂತರ ಮೈಸೂರಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗುವುದು ಎಂದರು. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಂಡು, ಯಾವುದೇ ಮಳೆ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಡಳಿತ, ಪಾಲಿಕೆ, ಮುಡಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಸುರಕ್ಷತಾ ಕೆಲಸಗಳು ನಡೆ ಯುತ್ತಿವೆ ಎಂದು ಅವರು ನುಡಿದರು. ಶಾಸಕ ಜಮೀರ್ ಅಹಮದ್ ಮನೆ ಮೇಲೆ ಎಸಿಬಿ ದಾಳಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅದಕ್ಕೆ ಕಾಂಗ್ರೆಸ್‍ನವರು ಏಕೆ ಪ್ರತಿಭಟಿಸಬೇಕು? ಜಮೀರ್ ಮನೆ ಮೇಲೆ ಎಸಿಬಿ ದಾಳಿ ಮಾಡಿರುವುದರಿಂದ ಮೊದಲು ಖುಷಿ ಪಡೋರು ಕಾಂಗ್ರೆಸ್‍ನವರೇ, ಏಕೆಂದರೆ ಅವರು ಸಿಎಂ ಆಗಲಿ, ಇವ್ರು ಸಿಎಂ ಆಗಲಿ ಎಂದು ಹೇಳುತ್ತಿರುವುದರಿಂದ ಅದಕ್ಕೆ ಒಳಗೊಳಗೇ ಖುಷಿ ಪಟ್ಕೊಂಡು ಹೊರಗಡೆ ಮಾತ್ರ ಕಾಂಗ್ರೆಸ್‍ನವರು ಪ್ರತಿಭಟನೆ ಮಾಡುತ್ತಿದ್ದಾರಷ್ಟೆ ಎಂದು ಸೋಮಶೇಖರ್ ವ್ಯಂಗ್ಯ ಮಾಡಿದರು. ಜಮೀರ್ ಪ್ರಾಮಾಣಿಕರಾಗಿದ್ದರೆ ಏಕೆ ದಾಳಿಯಾಗುತ್ತಿತ್ತು? ಕಾಂಗ್ರೆಸ್‍ನವರು ಅವರಿಗೆ ಧೈರ್ಯ ತುಂಬಿ, ನೀವು ಏನೂ ಮಾಡಿಲ್ಲ ಎಂದ ಮೇಲೆ ದಾಳಿಗೆಲ್ಲಾ ಏಕೆ ಹೆದರುತ್ತೀರಿ ಎಂದು ಹೇಳಬೇಕಿತ್ತು. ಅದನ್ನು ಬಿಟ್ಟು ಪ್ರತಿಭಟನೆ ಮಾಡುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.

ಕೊನೆಯ ಅವತಾರ: ಸಿದ್ದರಾಮೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಸಿದ್ದರಾಮಯ್ಯ ಅವರ ಕೊನೆಯ ಅವತಾರ ಎಂದು ವ್ಯಂಗ್ಯವಾಡಿದ ಸಚಿವ ಸೋಮಶೇಖರ್, ಸಿಎಂ ಆಗಿ ಸರಿಯಾಗಿ ಕೆಲಸ ಮಾಡಿದ್ದರೆ 35 ಸಾವಿರ ಮತಗಳಿಂದ ಸೋಲುತ್ತಿರಲಿಲ್ಲ. ಅಂತಹ ವೈಫಲ್ಯ ಮರೆಮಾಚಲು ಈಗ ಸಿದ್ದರಾಮೋತ್ಸವ ಆಚರಿಸುತ್ತಿದ್ದು, ಇದು ಸಿದ್ದರಾಮಯ್ಯನವರ ವೈಭವೀಕರಣ ಅಷ್ಟೇ. ಜನ್ಮದಿನವನ್ನು ಕಾಂಗ್ರೆಸ್ ಹೆಸರಲ್ಲೇ ಮಾಡಬಹುದಿತ್ತಲ್ಲಾ ಎಂದು ಪ್ರಶ್ನಿಸಿದರು.

Translate »