ಮೈಸೂರಿಂದ ತುಮಕೂರಿಗೆ ಕಾರು ಬಾಡಿಗೆಗೆ ಕರೆದೊಯ್ದು ಕೆಸ್ತೂರು ಬಳಿ ಚಾಲಕನಿಗೆ ಇರಿದು ಕಾರಿನೊಂದಿಗೆ ಪರಾರಿ
ಮೈಸೂರು

ಮೈಸೂರಿಂದ ತುಮಕೂರಿಗೆ ಕಾರು ಬಾಡಿಗೆಗೆ ಕರೆದೊಯ್ದು ಕೆಸ್ತೂರು ಬಳಿ ಚಾಲಕನಿಗೆ ಇರಿದು ಕಾರಿನೊಂದಿಗೆ ಪರಾರಿ

July 6, 2022

ಮೈಸೂರು, ಜು.5(ಆರ್‍ಕೆ)- ತುರ್ತು ಕಾರಣ ಹೇಳಿ ಮಧ್ಯರಾತ್ರಿ ಮೈಸೂರಿನಿಂದ ತುಮ ಕೂರಿಗೆ ಬಾಡಿಗೆ ಕಾರಿನಲ್ಲಿ ತೆರಳು ತ್ತಿದ್ದ ಇಬ್ಬರು ದುಷ್ಕರ್ಮಿಗಳು, ಮಾರ್ಗ ಮಧ್ಯೆ ಚಾಲಕನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ, ಕೊನೆಗೆ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೈಸೂರಿನ ಗಾಂಧಿನಗರ 5ನೇ ಕ್ರಾಸ್ ನಿವಾಸಿ ರುದ್ರಸ್ವಾಮಿ(46), ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದು, ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಟೊಯೊಟಾ ಇಟಿಯಾಸ್ (ಕೆಎ-09, ಸಿ-2358) ಕಾರಿನೊಂದಿಗೆ ಆರೋಪಿಗಳು ಪರಾರಿಯಾಗಿದ್ದಾರೆ. ಸೋಮವಾರ ಸರಿರಾತ್ರಿ 1.30ರ ವೇಳೆಯಲ್ಲಿ ಮೈಸೂರಿನ ಎಫ್‍ಟಿಎಸ್ ಸರ್ಕಲ್ ಬಳಿ ರುದ್ರಸ್ವಾಮಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಆಗ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು, ನಾವು ತುಮಕೂರಿಗೆ ತುರ್ತಾಗಿ ಹೋಗಬೇಕಿದ್ದು, ಕಾರು ಬಾಡಿಗೆ ನೀಡುತ್ತೇವೆ, ತಮ್ಮನ್ನು ಕರೆದೊಯ್ಯುವಂತೆ ಕೇಳಿಕೊಂಡಿದ್ದಾರೆ. ಅವರನ್ನು ನಂಬಿ ರುದ್ರಸ್ವಾಮಿ ಬಾಡಿಗೆಗೆ ಹೋಗಿದ್ದಾರೆ. ಮಾರ್ಗಮಧ್ಯೆ ಮಂಡ್ಯದಲ್ಲಿ ಕಾರಿಗೆ ಡೀಸೆಲ್ ತುಂಬಿಸಿದ ಆಸಾಮಿಗಳು, ನಂತರ ವರಸೆ ಬದಲಿಸಿದ್ದಾರೆ. ಮಂಡ್ಯ ಸಮೀಪದ ಕೆಸ್ತೂರು ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಚಾಲಕ ರುದ್ರಸ್ವಾಮಿ ಕಣ್ಣಿಗೆ ಖಾರದಪುಡಿ ಎರಚಿ, ಅವರ ಎದೆ ಭಾಗಕ್ಕೆ ಚಾಕುವಿನಿಂದ ಇರಿದು, ನೆಲಕ್ಕುರುಳಿಸಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ಇರಿತಕ್ಕೊಳಗಾಗಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ರುದ್ರಸ್ವಾಮಿ ಅವರನ್ನು ಮುಂಜಾನೆ 3 ಗಂಟೆ ಸುಮಾರಿಗೆ ಗಮನಿಸಿದ ಸಾರ್ವಜನಿಕರು, ತಕ್ಷಣ ಮಂಡ್ಯ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಸ್ತೂರು ಠಾಣೆ ಪೊಲೀಸರು, ಗಾಯಗೊಂಡಿದ್ದ ರುದ್ರಸ್ವಾಮಿಯನ್ನು ಕೂಡಲೇ ಮಂಡ್ಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ರುದ್ರಸ್ವಾಮಿ ಸಂಬಂಧಿಕರಿಗೆ ವಿಷಯ ತಿಳಿಸಿ ಅವರನ್ನು ಮಂಡ್ಯಕ್ಕೆ ಕರೆಸಿಕೊಂಡ ಪೊಲೀಸರು, ಘಟನೆ ಸಂಬಂಧ ಕೆಸ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೈಸೂರಿನ ಎನ್‍ಆರ್ ಠಾಣೆ ಪೊಲೀಸರ ನೆರವಿನೊಂದಿಗೆ ದುಷ್ಕರ್ಮಿಗಳು ಕಾರು ಹತ್ತಿದ ಸ್ಥಳದ ಆಸುಪಾಸಿನಲ್ಲಿರುವ ಸಿಸಿಟಿವಿ ಕ್ಯಾಮರಾ ಫುಟೇಜ್ ಪಡೆದಿದ್ದಾರೆ. ಕಾರಿಗೆ ಡೀಸೆಲ್ ತುಂಬಿಸಿದ ಜಾಗ, ಕೆಸ್ತೂರು ಮಾರ್ಗದಲ್ಲಿರುವ ಸಿಸಿಟಿವಿ ಕ್ಯಾಮರಾಗಳ ಫುಟೇಜ್‍ಗಳನ್ನೂ ಪರಿಶೀಲಿಸಿದ್ದು, ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿದ್ದಾರೆ. ಗಾಯಗೊಂಡಿರುವ ಚಾಲಕ ರುದ್ರಸ್ವಾಮಿ ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಲಾಗಿದ್ದು, ಇಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

Translate »