ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ರಾಜ್ಯ ಮುಂಗಡ ಪತ್ರ ಮಂಡಿಸುವ ಮುನ್ನವೇ ಪತನ ಗೊಳಿಸಲು ಬಿಜೆಪಿ ವರಿಷ್ಠರೇ ಮುಂದಾಗಿದ್ದಾರೆ.
ಕುಮಾರಸ್ವಾಮಿ 2019-20ನೇ ಸಾಲಿನ ಮುಂಗಡ ಪತ್ರವನ್ನು 2019ರ ಫೆ.8ರಂದು ಮಂಡಿಸಲಿದ್ದಾರೆ. ಅದಕ್ಕೂ ಮುನ್ನವೇ ಮೈತ್ರಿ ಸರ್ಕಾರವನ್ನು ಪತನಗೊಳಿಸಿ, ಸರ್ಕಾರ ರಚನೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಬಿಜೆಪಿಯ ರಾಜ್ಯ ನಾಯಕರು ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆಗೆ ನಡೆಸಿದ ಯತ್ನ ವಿಫಲ ಗೊಂಡಿರುವುದರಿಂದ ರಾಷ್ಟ್ರೀಯ ನಾಯಕರೇ ಕೈ ಹಾಕಿದ್ದಾರೆ. ಇದೇ ಕಾರಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ದೆಹಲಿಯಲ್ಲೇ ಉಳಿಸಿಕೊಂಡಿರುವ ಅಮಿತ್ ಷಾ, ಕಳೆದ ಎರಡು ದಿನಗಳಿಂದ ಸತತವಾಗಿ ಅವರ ಜೊತೆ ಸಮಾ ಲೋಚನೆಯಲ್ಲಿ ತೊಡಗಿರುವುದಲ್ಲದೆ, ನೇರವಾಗಿ ಅತೃಪ್ತ ಕಾಂಗ್ರೆಸ್ ಶಾಸಕರ ಜೊತೆ ಸಂಪರ್ಕ ಸಾಧಿಸಿದ್ದು, ಇವರಿಗೆ ಭರವಸೆ ನೀಡಿ, ಪಕ್ಷಕ್ಕೆ ಕರೆ ತರಲು ಮುಂದಾಗಿದ್ದಾರೆ. ಅಮಿತ್ ಷಾ ಭರವಸೆ ನೀಡಿದ ನಂತರ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಲ್ಲಿನ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್, ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಆಪರೇಷನ್ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದಾರೆ.
ಕರ್ನಾಟಕದಿಂದ ದೆಹಲಿ ಕಾಂಗ್ರೆಸ್‍ಗೆ ಹೆಚ್ಚಿನ ಸಂಪನ್ಮೂಲ ಹರಿದು ಹೋಗುತ್ತಿರುವುದನ್ನು ತಪ್ಪಿಸಬೇಕೆಂಬ ಏಕೈಕ ಉದ್ದೇಶದಿಂದ ಸರ್ಕಾರ ಪತನಕ್ಕೆ ಬಿಜೆಪಿ ಹೊರಟಿದೆ.
ಚುನಾವಣೆಗಾಗಿ ಸಾಕಷ್ಟು ಹಣ ರಾಜ್ಯದಿಂದ ಕಾಂಗ್ರೆಸ್ ವರಿಷ್ಠರ ಕೈ ಸೇರಿದೆ. ಸರ್ಕಾರ ಇದೆ ರೀತಿ ಮುಂದುವರಿದಲ್ಲಿ ಆ ಪಕ್ಷ ಮತ್ತಷ್ಟು ಗಟ್ಟಿಯಾಗಲಿದೆ.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಒಂದಾಗಿ ಚುನಾವಣೆ ಕಣಕ್ಕಿಳಿದರೆ, 28 ಕ್ಷೇತ್ರಗಳಲ್ಲಿ ನಮಗೆ ಹತ್ತರಿಂದ ಹನ್ನೆರಡು ಕ್ಷೇತ್ರಗಳು ಮಾತ್ರ ದೊರೆಯಲಿವೆ. ಉಳಿದ ಎಲ್ಲಾ ಕ್ಷೇತ್ರಗಳು ಕಾಂಗ್ರೆಸ್-ಜೆಡಿಎಸ್ ಪಾಲಾಗಲಿದೆ. ಕಳೆದ ಮೂರು ಲೋಕಸಭಾ ಉಪಚುನಾವಣೆಯಲ್ಲಿ ಬಂದಿರುವ ಫಲಿತಾಂಶ ಇದಕ್ಕೆ ಸಾಕ್ಷಿ. ಇವರನ್ನು ಅಧಿಕಾರದಲ್ಲಿ ಮುಂದುವರಿಸಿದರೆ, ಜೆಡಿಎಸ್‍ಗಿಂತ ದೆಹಲಿ ಕಾಂಗ್ರೆಸ್ಸಿಗರು ಬಲಗೊಳ್ಳುತ್ತಾರೆ ಎನ್ನುವ ಕಾರಣಕ್ಕಾಗಿ ಬಿಜೆಪಿ ವರಿಷ್ಠರೇ ಮೈತ್ರಿ ಸರ್ಕಾರ ಪತನಗೊಳಿಸಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಸರ್ಕಾರ ಪತನಗೊಂಡರೆ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‍ಅನ್ನು ನಂಬಿ ಅವರ ಜೊತೆ ಕೈಜೋಡಿಸಲು ಮುಂದಾಗುವುದಿಲ್ಲ. ಈ ಎಲ್ಲಾ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕರ್ನಾಟಕದಲ್ಲಿ ಮುಂದುವರಿಯಬಾರದು.
ಲಿಂಗಾಯಿತರೇ ಬಲಾಢ್ಯರಾಗಿರುವ ಕ್ಷೇತ್ರಗಳಿಂದ ಆಯ್ಕೆಗೊಂಡಿರುವ 16 ಕಾಂಗ್ರೆಸ್ ಸದಸ್ಯರನ್ನು ಬಿಜೆಪಿ ಗುರುತಿಸಿ, ಅವರಿಗೆ ಗಾಳ ಹಾಕಿದೆ. ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬರುವಂತಹವರಿಗೆ ಮತ್ತೆ ಉಪಚುನಾವಣೆಯಲ್ಲಿ ಕಣಕ್ಕಿಳಿಯಲು ಪಕ್ಷದ ವತಿಯಿಂದ ಟಿಕೆಟ್ ನೀಡುವುದರ ಜೊತೆಗೆ ಖರ್ಚು ವೆಚ್ಚಗಳನ್ನು ನೀಡಿ, ಸರ್ಕಾರ ರಚನೆ ನಂತರ ಉತ್ತಮ ಸ್ಥಾನಮಾನ ಕಲ್ಪಿಸುವ ಭರವಸೆಯನ್ನು ವರಿಷ್ಠರೇ ನೀಡುತ್ತಿದ್ದಾರೆ.
ಈ ಹಿಂದೆ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರನ್ನು ಸೆಳೆಯಲು ರಾಜ್ಯ ಬಿಜೆಪಿ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ. ವಲಸೆ ಬರಲು ಮುಂದಾಗಿದ್ದವರು ಈ ನಾಯಕರನ್ನು ನಂಬಿ ಸದಸ್ಯತ್ವ ತೊರೆಯಲು ಹಿಂದೇಟು ಹಾಕಿದ್ದರು. ದಿನದಿಂದ ದಿನಕ್ಕೆ ಕಾಂಗ್ರೆಸ್ ವರಿಷ್ಠರಿಗೆ ಕರ್ನಾಟಕದಿಂದ ಸಂಪನ್ಮೂಲ ಹರಿದು ಹೋಗುತ್ತಿರುವುದನ್ನು ಸಹಿಸಲಾಗದೇ ಬಿಜೆಪಿ ವರಿಷ್ಠರೇ ಈ ಕ್ರಮಕ್ಕೆ ಮುಂದಾಗಿದ್ದಾರೆ.