ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರ  ನೆಲೆಗೆ ವರಿಷ್ಠರ ಕಾರ್ಯತಂತ್ರ
News

ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರ ನೆಲೆಗೆ ವರಿಷ್ಠರ ಕಾರ್ಯತಂತ್ರ

July 2, 2022

ಬೆಂಗಳೂರು, ಜು.1(ಕೆಎಂಶಿ)-ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಕ್ಷ ತಲೆ ಎತ್ತಲು ಕರ್ನಾಟಕ ಮೂಲ ನೆಲೆಯಾಗಬೇಕು ಎಂದು ಬಯಸಿರುವ ಬಿಜೆಪಿ ವರಿಷ್ಟರು, ಈ ಸಂಬಂಧ ರಾಜ್ಯದ ನಾಯಕ ರಿಗೆ ಟಾಸ್ಕ್ ನೀಡುವ ಸಾಧ್ಯತೆಗಳಿವೆ.

ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಎರಡು ದಿನಗಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ಕರ್ನಾಟಕದ ನಾಯಕರಿಗೆ ವರಿಷ್ಟರು ಈ ಸಂಬಂಧ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ನಾಯಕರು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ವಹಿಸಬೇಕಾದ ಪಾತ್ರದ ಕುರಿತು ಚರ್ಚಿಸಲಿದ್ದಾರೆ.

ಪಕ್ಷ ಉತ್ತರ ಭಾರತದಲ್ಲಿ ಮಾತ್ರವಲ್ಲದೆ ಮಧ್ಯ ಭಾರತದಲ್ಲೂ ದೊಡ್ಡ ಮಟ್ಟದಲ್ಲಿ ತಲೆ ಎತ್ತಿದ್ದು, ಕೇವಲ ದಕ್ಷಿಣ ಭಾರತ ಬಿಜೆಪಿಯ ಪಾಲಿಗೆ ಒಲಿಯುತ್ತಿಲ್ಲ ಎಂಬುದು ಬಿಜೆಪಿ ವರಿಷ್ಟರ ಯೋಚನೆ. ಕರ್ನಾಟಕ ವನ್ನು ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲೂ ಬಿಜೆಪಿ ದೊಡ್ಡ ಶಕ್ತಿಯಾಗಿ ತಲೆ ಎತ್ತಿಲ್ಲ. ಇತ್ತೀಚೆಗೆ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಯಲ್ಲಿ ಪಕ್ಷದ ಸಾಧನೆ ಗಣನೀಯವಾಗಿದೆ ಯಾದರೂ, ಅದನ್ನು ನೆಚ್ಚಿಕೊಂಡು ಇಡೀ ರಾಜ್ಯವನ್ನು ವಶಪಡಿಸಿಕೊಳ್ಳುವುದು ಕಷ್ಟ.

ನೆಲೆ ಕಂಡುಕೊಂಡ ರಾಜ್ಯಗಳಲ್ಲಿ ಪಟ್ಟು ಬಿಡದೆ ಕೆಲಸ ಮಾಡಿದರೆ, ಸ್ಥಳೀಯ ಘಟಕಗಳಿಗೆ ಶಕ್ತಿ ತುಂಬಿದರೆ ಮುಂದಿನ ದಿನಗಳಲ್ಲಿ ತೆಲಂಗಾಣ ಸೇರಿದಂತೆ ಹಲವು ಕಡೆ ಬಿಜೆಪಿ ದೊಡ್ಡ ಶಕ್ತಿಯಾಗಿ ನೆಲೆ ನಿಲ್ಲಬಹುದು.

ಕರ್ನಾಟಕ ದಕ್ಷಿಣ ಭಾರತದ ರಾಜ್ಯಗಳಿಗೆ ಮೂಲ ನೆಲೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಪಕ್ಷದ ವರಿಷ್ಟರು ಬಯಸಿದ್ದು, ಇದೇ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಭೆಯ ಸಂದರ್ಭದಲ್ಲಿ ರಾಜ್ಯದ ನಾಯಕರಿಗೆ ಸೂಚನೆ ನೀಡುವ ಲಕ್ಷಣಗಳು ದಟ್ಟವಾಗಿವೆ.

ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬರಬೇಕು. ಆ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಮೇಲೆ
ಪ್ರಭಾವ ಬೀರುವ ಕೆಲಸ ಮಾಡಬೇಕು. ಕರ್ನಾಟಕದ ನೆಲೆಯಿಂದ ಕಾರ್ಯಾಚರಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಕ್ಷ ತಲೆ ಎತ್ತಲು ದೊಡ್ಡ ಮಟ್ಟದಲ್ಲಿ ಸಹಕಾರ ಸಿಕ್ಕಂತಾಗುತ್ತದೆ. ಈ ದಿಸೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಂತಹ ರಾಜ್ಯಗಳಲ್ಲಿ ಕರ್ನಾಟಕದ ಪ್ರಭಾವ ಕೆಲಸ ಮಾಡಲಿದೆ. ಆದರೆ ಇದಕ್ಕೆ ಅಗತ್ಯವಾದ ಪೂರ್ವಸಿದ್ಧತೆಗಳನ್ನು ಹೇಗೆ ಮಾಡಿಕೊಳ್ಳಬೇಕು? ಎಂಬುದರಿಂದ ಹಿಡಿದು ಹಲವು ಮಹತ್ವದ ವಿಷಯಗಳ ಕುರಿತು ರಾಷ್ಟ್ರೀಯ ಕಾರ್ಯಕಾರಿಣಿ ಸಂದರ್ಭದಲ್ಲಿ ವರಿಷ್ಟರು ರಾಜ್ಯದ ನಾಯಕರಿಗೆ ಸೂಚನೆ ನೀಡಲಿದ್ದಾರೆ.

ಉತ್ತರ ಭಾರತದ ರಾಜ್ಯಗಳು,ಮಧ್ಯಭಾರತದ ರಾಜ್ಯಗಳು ಬಿಜೆಪಿಯ ಪರವಾದ ಒಲವು ಹೊಂದಿದ್ದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನ ಗಾತ್ರ ಹಿಗ್ಗಿದರೆ 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದ ಅಧಿಕಾರ ಗದ್ದುಗೆ ಹಿಡಿಯುವುದು ಬಿಜೆಪಿಗೆ ಸುಲಭವಾಗಲಿದೆ ಎಂಬುದು ವರಿಷ್ಟರ ಲೆಕ್ಕಾಚಾರ.

ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ನಾಯಕರಿಗೆ ಮಹತ್ವದ ಸೂಚನೆಗಳನ್ನು ನೀಡಲಿರುವ ವರಿಷ್ಟರು ಈ ಟಾಸ್ಕ್ ಎಷ್ಟರ ಮಟ್ಟಿಗೆ ಈಡೇರಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಲಿದ್ದಾರೆ ಎಂಬುದು ಮೂಲಗಳ ಹೇಳಿಕೆ.

Translate »