ಕೊಡಗು ಗಡಿಯಲ್ಲಿಮತ್ತೆ ಭೂಮಿ ಗಡಗಡ…
ಕೊಡಗು

ಕೊಡಗು ಗಡಿಯಲ್ಲಿಮತ್ತೆ ಭೂಮಿ ಗಡಗಡ…

July 2, 2022

ಮಡಿಕೇರಿ, ಜು.1- ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಮೂರು ಬಾರಿ ಭೂಮಿ ಕಂಪಿಸಿತ್ತು. ಇಂದು ಮತ್ತೆ ಎರಡು ಬಾರಿ ಲಘು ಭೂಕಂಪನ ಸಂಭವಿಸಿದ್ದು, ಜಿಲ್ಲೆ ಜನರನ್ನು ಆತಂಕಕ್ಕೆ ದೂಡಿದೆ. ಕೊಡಗು ಗಡಿ, ದಕ್ಷಿಣ ಕನ್ನಡ ಜಿಲ್ಲೆಯ ಅಂಚಿನ `ಚೆಂಬು’ ಗ್ರಾಮ ವ್ಯಾಪ್ತಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಇದನ್ನು ಜಿಲ್ಲಾ ವಿಪತ್ತು ನಿರ್ವ ಹಣಾ ಕೇಂದ್ರ ದೃಢಪಡಿಸಿದ್ದು, ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದೆ.

ಚೆಂಬು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ 1 ಗಂಟೆ 15 ನಿಮಿಷ 12 ಸೆಕೆಂಡ್‍ಗೆ ಭೂಮಿ ಕೆಲ ಸೆಕೆಂಡ್‍ಗಳ ಕಾಲ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಈ ಕಂಪನ 1.8 ದಾಖಲಾಗಿದೆ. ಬಳಿಕ ಬೆಳಗ್ಗೆ 10.47ರ ಸುಮಾರಿಗೆ ಚೆಂಬು ಹಾಗೂ ಪೆರಾಜೆ ಗ್ರಾಮದಲ್ಲಿ ಎರಡನೇ ಬಾರಿ ಭೂಮಿ ಕಂಪಿಸಿದ್ದು, ಇದರ ತೀವ್ರತೆ 2.1 ದಾಖಲಾಗಿದೆ. ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯ ಪ್ರಕಾರ ಮೊದಲ ಕಂಪನದ ಕೇಂದ್ರ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಿಂದ 5.2 ಕಿ.ಮೀ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 10 ಕಿ.ಮೀ. ಅಡಿ ಭೂ ಕಂಪನದ ಕೇಂದ್ರ ಬಿಂದು ಕಂಡು ಬಂದಿದೆ. ದ್ವಿತೀಯ ಕಂಪನದ ಕೇಂದ್ರ ಮಡಿಕೇರಿ ತಾಲೂಕಿನ ಕರಿಕೆ ಭಾಗದ ಉತ್ತರ ವಾಯುವ್ಯ ದಿಕ್ಕಿನಲ್ಲಿ 9.1 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸಂಪಾಜೆ ಭಾಗದ ಪಶ್ಚಿಮದಲ್ಲಿ 11.6 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸುಳ್ಯ ತಾಲೂಕು ಭಾಗದ ಆಗ್ನೇಯದಲ್ಲಿ 11.3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದು, ಈ ಪ್ರದೇಶದ 20-30 ಕಿಲೋಮೀಟರ್ ದೂರದಲ್ಲಿ ಭೂಕಂಪ ನದ ಅನುಭವವಾಗಿರುವುದಾಗಿ ಹೇಳಲಾಗಿದೆ.

ಗ್ರಾಮೀಣರಲ್ಲಿ ಮೂಡಿದ ಆತಂಕ: ಮಧ್ಯರಾತ್ರಿ 1.15ರ ಸುಮಾರಿಗೆ ಭೂಮಿ ಕಂಪಿಸಿದಾಗ ಗಾಢ ನಿದ್ರೆಯಲ್ಲಿದ್ದ ಜನ ಬೆಚ್ಚಿಬಿದ್ದು ಎಚ್ಚರಗೊಂಡು ಆತಂಕಕ್ಕೆ ಒಳಗಾಗಿದ್ದಾರೆ. ಆರಂಭದಲ್ಲಿ ದೊಡ್ಡ ಶಬ್ದ ಕೇಳಿಸಿತು. ಜೊತೆಗೆ ಭೂಮಿ ಅಲುಗಾಡಿದ ಅನುಭವವಾಯಿತು ಎಂದು ಸ್ಥಳೀಯರು ಹೇಳಿ ದ್ದಾರೆ. ಬೆಳಗಿನ ಜಾವ ಮತ್ತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಕಳೆದ ಮೂರು ಬಾರಿ ಭೂಮಿ ಕಂಪಿಸಿ ಆತಂಕ ಸೃಷ್ಟಿಯಾದ ಅದೇ ಪರಿಸರದಲ್ಲಿ ಮತ್ತೆ ಭೂ ಕಂಪನವಾಗಿರುವುದು ಸಾರ್ವಜನಿಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸಂಪಾಜೆ, ಚೆಂಬು, ತೊಡಿಕಾನ, ಪೆರಾಜೆ, ಬಡ್ಡಡ್ಕ, ಸುಳ್ಯ, ಉಬರಡ್ಕ, ಎಲಿಮಲೆ, ಗುತ್ತಿಗಾರು ಪರಿಸರ ಗಳಲ್ಲೂ ಈ ಕಂಪನದ ಅನುಭವವಾಗಿರುವು ದಾಗಿ ಹೇಳಲಾಗಿದೆ. ಕಳೆದ ಕೆಲ ದಿನಗಳ ಅವಧಿ ಯಲ್ಲಿ ಕೊಡಗಿನಲ್ಲಿ ಸಂಭವಿಸಿದ ಐದನೇ ಭೂ ಕಂಪನ ಇದಾಗಿದೆ. ಈ ಭೂಕಂಪನವನ್ನು ವೈಜ್ಞಾನಿಕ ವಾಗಿ ಪರಿಶೀಲಿಸಿದಾಗ ಸುಮಾರು 30 ಕಿ.ಮೀ. ಪ್ರದೇಶದವರೆಗೂ ಅನುಭವವಾಗುವ ಸಾಧ್ಯತೆ ಇದೆ. ಆದರೆ ಈ ಕಂಪನದಿಂದ ಭಯಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ ವಸ್ತುಗಳು ಅಲುಗಾಡ ಬಹುದು. ಜನತೆ ಗಾಬರಿ ಆಗಬೇಕಿಲ್ಲ. ಈ ಭೂಕಂಪನದ ಅನುಭವ ತಮಗೇನಾದರೂ ಆದರೆ ಹಾಗೂ ಭೂಮಿಯಲ್ಲಿ ಬಿರುಕುಗಳು ಕಂಡು ಬಂದರೆ ಕೊಡಗು ಜಿಲ್ಲೆಯ ವಿಪತ್ತು ನಿರ್ವಹಣಾ ಕೇಂದ್ರ 08272-221077, 221099 ಇದಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

Translate »