ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಭಾರೀ ಮಳೆ
ಕೊಡಗು

ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಭಾರೀ ಮಳೆ

July 2, 2022

ಮಡಿಕೇರಿ,ಜು.1- ಕೊಡಗು ಜಿಲ್ಲೆಯ ವಿವಿಧ ಕಡೆ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಪಾಲಿಬೆಟ್ಟ ಬಳಿ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಮೇಲೆ ಮರ ಬಿದ್ದು, ಹಾನಿಯಾಗಿದೆ. ವಿದ್ಯುತ್ ಕಂಬಗಳನ್ನು ಬದಲಿಸುವ ಕಾರ್ಯ ಪ್ರಗತಿ ಯಲ್ಲಿದೆ ಎಂದು ಚೆಸ್ಕಾಂ ತಿಳಿಸಿದೆ.
ಮಡಿಕೇರಿ-ಮಂಗಳೂರು ರಸ್ತೆಯ ಕಾಟ ಕೇರಿ ಬಳಿ ಸಂಜೆ ವೇಳೆ ಮರವೊಂದು ಬಿದ್ದ ಪರಿಣಾಮ ಕೆಲ ಕಾಲ ವಾಹನ ಸಂಚಾರ ಬಂದ್ ಆಗಿತ್ತು. ಅರಣ್ಯ ಇಲಾಖೆ ಮರವನ್ನು ಕಡಿದು ತೆರವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮರ ಬಿದ್ದ ಪರಿಣಾಮ ವಿದ್ಯುತ್
ತಂತಿಗಳು ತುಂಡರಿಸಲ್ಪಟ್ಟಿದ್ದು, ಮದೆನಾಡು ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೆದ್ದಾರಿಗೆ ಮರ ಬಿದ್ದ ಪರಿಣಾಮ ನೂರಾರು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಪ್ರಸ್ತುತ ನಾಗನಕಟ್ಟೆವರೆಗೆ ನೀರು ಹರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರಿದಲ್ಲಿ ಭಾಗಮಂಡಲ-ಅಯ್ಯಂಗೇರಿ ರಸ್ತೆ ಮೇಲೆ ಪ್ರವಾಹ ನೀರು ಹರಿಯುವ ಸಾಧ್ಯತೆಗಳು ಕಂಡು ಬರುತ್ತಿದೆ.

ಪ್ರವಾಹ ಮುನ್ನೆಚ್ಚರಿಕೆ: ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗು ತ್ತಿದ್ದು, ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಮಡಿಕೇರಿ, ಗಾಳಿಬೀಡು, ವಣಚಲು, ಮುಕ್ಕೋಡ್ಲು, ಮಾದಾಪುರ, ಹಟ್ಟಿಹೊಳೆ ಮತ್ತಿತ್ತರ ಕಡೆಗಳಲ್ಲಿ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದ ನೀರಿನ ಮೂಲವಾದ ಹಟ್ಟಿಹೊಳೆ, ಮಾದಾಪುರ ಹೊಳೆಗಳಲ್ಲಿ ನೀರಿನ ಪ್ರಮಾಣ ಏರಿಕೆ ಕಂಡಿದೆ. ಮಾತ್ರವಲ್ಲದೇ, ಇನ್ನು ಕೆಲವು ದಿನಗಳ ಕಾಲ ಉತ್ತಮ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಹಾರಂಗಿ ಜಲಾಶಯ ಶೀಘ್ರವೇ ಭರ್ತಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗರಿಷ್ಟ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ ಎಂದು ಜಲಾಶಯದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾರಂಗಿ ಮತ್ತು ಕಾವೇರಿ ನದಿ ಪಾತ್ರದ ಎರಡೂ ದಂಡೆಗಳಲ್ಲಿ ವಾಸವಿರುವ ಸಾರ್ವಜನಿಕರು ತಮ್ಮ ಆಸ್ತಿ-ಪಾಸ್ತಿ, ಜನ ಜಾನುವಾರುಗಳ ರಕ್ಷಣೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಲಾಶಯದ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಹಾರಂಗಿ ವಿವರ: ಹಾರಂಗಿ ಜಲಾಶಯದ ಗರಿಷ್ಟ ನೀರಿನ ಮಟ್ಟ 2859 ಅಡಿಗಳಾಗಿದ್ದು, ಈಗಾಗಲೇ ಜಲಾಶಯದಲ್ಲಿ 2855.48 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಜಲಾಶಯಕ್ಕೆ 5785 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, ನದಿಗೆ 651 ಕ್ಯೂಸೆಕ್ ಹಾಗೂ ನಾಲೆಗೆ 20 ಕ್ಯೂಸೆಕ್ ನೀರನ್ನು ಹರಿಯ ಬಿಡಲಾಗಿದೆ.

Translate »