ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮೊದಲ ಆಷಾಢ ಪೂಜೆ
ಮೈಸೂರು

ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮೊದಲ ಆಷಾಢ ಪೂಜೆ

July 1, 2022

ಮೈಸೂರು,ಜೂ.30(ಎಂಟಿವೈ)-ನಾಡದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ ವಿಶೇಷ ಪೂಜಾ ಕೈಂಕರ್ಯಕ್ಕೆ ಸರ್ವ ಸಿದ್ಧತೆಯಾಗಿದ್ದು, 2 ವರ್ಷಗಳ ನಂತರ ತಾಯಿ ದರ್ಶನಕ್ಕೆ ಭಕ್ತ ಸಮೂಹ ಕಾತುರವಾಗಿದೆ.

ಶುಕ್ರವಾರ ಮುಂಜಾನೆ 3.30ಕ್ಕೆ ಆಷಾಢಮಾಸದ ವಿಶೇಷ ಪೂಜೆ ಆರಂಭವಾಗಲಿದ್ದು, ವಿಶೇಷ ಲಕ್ಷ್ಮೀ ಅಲಂಕಾರದ ಚಾಮುಂಡೇಶ್ವರಿ ದೇವಿಯನ್ನು ಮಹಾನ್ಯಾಸಕ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿ ಕೈಂಕರ್ಯ ಗಳೊಂದಿಗೆ ಪೂಜಿಸಲಾಗುತ್ತದೆ. ಪೂಜೆಯ ಬಳಿಕ ಬೆಳಗ್ಗೆ 5.30ರಿಂದ ರಾತ್ರಿ 9.30ರವರೆಗೂ ಭಕ್ತರು ದೇವಿಯ ದರ್ಶನ ಪಡೆಯಬಹುದು. ಕೊರೊನಾ ಕಾರಣದಿಂದ ಕಳೆದ 2 ವರ್ಷ ಭಕ್ತರಿಗೆ ದರ್ಶನ ನಿರ್ಬಂಧಿಸಲಾಗಿತ್ತು. ಎಂದಿನಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತಾದರೂ ವಿಜೃಂಭಣೆ ಇರಲಿಲ್ಲ. ಆದರೆ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಆಷಾಢದ ಹಬ್ಬ ಕಳೆಗಟ್ಟಿದ್ದು, ವಿಶೇಷ ದಿನಗಳಲ್ಲಿ ತಾಯಿಯ ದರ್ಶನ ಪಡೆಯಲು ಲಕ್ಷಾಂತರ ಜನ ಸೇರುವ ಸಾಧ್ಯತೆ ಇದೆ.

ಸೂಕ್ತ ವ್ಯವಸ್ಥೆ: ಆಷಾಢ ಶುಕ್ರವಾರಗಳು ಹಾಗೂ ವರ್ಧಂತ್ಯೋ ತ್ಸವ ದಿನ ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದ್ದು, ಲಲಿತಮಹಲ್ ಹೋಟೆಲ್ ಬಳಿಯಿಂದ ಭಕ್ತರಿಗಾಗಿ ಉಚಿತ ಬಸ್ ವ್ಯವಸ್ಥೆ ಕಲ್ಪಿಸ ಲಾಗಿದೆ. ಶುಕ್ರವಾರ ಮುಂಜಾನೆ 5.30ರಿಂದ ದರ್ಶನಕ್ಕೆ ಅವಕಾಶವಿದ್ದರೂ ಮುಂಜಾನೆ 3 ಗಂಟೆಯಿಂದಲೇ ಬಸ್ ಸಂಚಾರ ಆರಂಭ ವಾಗಲಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದ ರಿಂದ ಸರತಿಯಲ್ಲಿ ಸಾಗಲು ಬ್ಯಾರಿಗೇಡ್, ಕುಡಿಯುವ ನೀರು, ಪ್ರಸಾದ ವ್ಯವಸ್ಥೆ ಸೇರಿದಂತೆ ಸಮರ್ಪಕ ನಿರ್ವಹಣೆಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ದರ್ಶನಕ್ಕೆ ಮೂರು ಸಾಲು: ದೇವಿಯ ದರ್ಶನಕ್ಕೆ ಎಂದಿನಂತೆ ಮೂರು ರೀತಿಯ ಪ್ರವೇಶಾವಕಾಶ ಕಲ್ಪಿಸಲಾಗಿದೆ. 300 ರೂ. ಹಾಗೂ 50 ರೂ. ವಿಶೇಷ ದರ್ಶನ ಟಿಕೆಟ್ ಪಡೆದವರು ಹಾಗೂ ಧರ್ಮ ದರ್ಶನಕ್ಕೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾದಾಗ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆಗೆ ವಾಟರ್ ಪ್ರೂಫ್ ಟೆಂಟ್ ಅಳವಡಿಸಲಾಗಿದೆ. ವಿಶೇಷ ದರ್ಶನದ ಟಿಕೆಟ್ ಖರೀದಿಸಲು ನಾಲ್ಕು ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

ಸಿಂಗಾರಗೊಂಡ ಗ್ರಾಮ: ಆಷಾಢ ಮಾಸದ ಮೊದಲ ಶುಕ್ರವಾರದ ವಿಶೇಷ ಪೂಜೆಗೆ ಚಾಮುಂಡೇಶ್ವರಿ ದೇವಾಲಯದ ಜೊತೆಗೆ ಇಡೀ ಗ್ರಾಮವೇ ಸಿಂಗಾರಗೊಂಡಿದ್ದು, ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ. ದೇವಾಲಯವನ್ನು ಬಣ್ಣ ಬಣ್ಣದ ಬಗೆ ಬಗೆಯ ಹೂಗಳಿಂದ ಅಲಂಕೃತಗೊಳಿಸಲಾಗಿದೆ. ಬೆಟ್ಟದ ಮುಖ್ಯರಸ್ತೆ, ದೇವಾಲಯದ ಸುತ್ತಮುತ್ತ, ನಂದಿ ವಿಗ್ರಹ ಬಹುತೇಕ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಕಣ್ಣು ಕೋರೈಸುವಂತಿದೆ. ವಿದ್ಯುತ್ ದೀಪಗಳ ಸ್ವಾಗತ ಕಮಾನು ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೊದಲ ಬಾರಿಗೆ ಎಲ್‍ಇಡಿ: ದೇವಿಯ ದರ್ಶನಕ್ಕೆ ಮಧ್ಯರಾತ್ರಿಯಿಂದಲೇ ಭಕ್ತರು ಕಾದು ನಿಲ್ಲುತ್ತಾರೆ. ಆ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಮೆರವಣಿಗೆ ಸಹಿತ ಭಕ್ತಿ ಗೀತೆಗಳ ಪ್ರಸಾರ ಮಾಡಿದರೆ ಭಕ್ತರ ದಣಿವು ನೀಗಬಹುದು ಎಂಬ ಕಾರಣಕ್ಕೆ ಮೊದಲ ಬಾರಿಗೆ ಸುಮಾರು 20 ಬೃಹತ್ ಎಲ್‍ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ದೇವಸ್ಥಾನದ ಎದುರಿನ ರಾಗ ರಾಗಿಣಿ ಮಂಟಪದಲ್ಲಿ ಬೆಳಗ್ಗೆ 6.30ರಿಂದ ರಾತ್ರಿ 8.30ರವರೆಗೆ ಕಲಾವಿದರಿಂದ ಭಕ್ತಿ ಗೀತೆಗಳ ಗಾಯನ ಸೇರಿದಂತೆ ವಿವಿಧ ಸಾಂಸ್ಕøತಿಕ ಇರಲಿದೆ.

ಪ್ರಸಾದ ವ್ಯವಸ್ಥೆ: ಈ ಬಾರಿ ತಾಯಿಯ ದರ್ಶನದ ಜೊತೆಗೆ ಪ್ರಸಾದ ಸ್ವೀಕರಿಸುವುದಕ್ಕೂ ಅವಕಾಶ ಕಲ್ಪಿತವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಷಾಸುರ ಪ್ರತಿಮೆ ಆವರಣದಲ್ಲಿ ದಾನಿಗಳಿಂದ ಬಾಳೆಲೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಏಕ ಕಾಲದಲ್ಲಿ ಸಾವಿರ ಜನರನ್ನು ಕೂರಿಸಿ ಅವರಿಗೆ ಪ್ರಸಾದ ನೀಡಬಹುದಾಗಿದೆ. ಅಲ್ಲದೆ ಸಮೀಪದ ಬಸ್ ನಿಲ್ದಾಣದ ಶೆಲ್ಟರ್‍ನಲ್ಲೂ 10 ಕೌಂಟರ್‍ಗಳಲ್ಲಿ ಪ್ರಸಾದ ವಿನಿಯೋಗಕ್ಕೂ ವ್ಯವಸ್ಥೆಗೊಳಿಸಲಾಗಿದೆ. ಪ್ರಸಾದ ವಿತರಿಸುವ ಭಕ್ತರು ನೋಂದಣಿ ಮಾಡಿಕೊಂಡು, ನಿಗದಿತ ಸ್ಥಳದಲ್ಲಿ ಭಕ್ತರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಬಿಗಿ ಭದ್ರತೆ; ಸಿಸಿ ಕ್ಯಾಮರಾ: ಚಾಮುಂಡಿ ಬೆಟ್ಟ ಪ್ರವೇಶ ಸ್ಥಳದಿಂದ ದೇವಾಲಯದೊಳಗೆ ದೇವಿಯ ದರ್ಶನ ಪಡೆಯುವ ಸ್ಥಳದವರೆಗೂ ಯಾವುದೇ ಗೊಂದಲವಾಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಉಚಿತ ಬಸ್ ವ್ಯವಸ್ಥೆ ಇರುವ ಲಲಿತಮಹಲ್ ಹೋಟೆಲ್ ಬಳಿಯ ಪ್ರದೇಶ, ಬೆಟ್ಟದ ಮೆಟ್ಟಿಲು ಹತ್ತುವ ಸ್ಥಳದಲ್ಲೂ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈಗಾಗಲೇ ಎಲ್ಲಾ ವ್ಯವಸ್ಥೆಯನ್ನೂ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಭದ್ರತೆ ಜೊತೆಗೆ ದೇವಾಲಯದ ಒಳ ಹಾಗೂ ಹೊರ ಆವರಣ, ಜನ ಸರತಿಯಲ್ಲಿ ಸಾಗುವ ಸ್ಥಳ, ಮೆಟ್ಟಿಲು ಮಾರ್ಗ ಸೇರಿದಂತೆ ಹಲವು ಕಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮೆಟ್ಟಿಲು ಮಾರ್ಗದಲ್ಲೂ ತಾತ್ಕಾಲಿಕ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚು ಸಂಖ್ಯೆಯ ಮೊಬೈಲ್ ಶೌಚಗೃಹದ ವ್ಯವಸ್ಥೆ ಮಾಡಲಾಗಿದೆ.

ಶಾಸಕರಿಂದ ಪರಿಶೀಲನೆ: ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ಸಿದ್ಧತೆಯನ್ನು ಗುರುವಾರ ಪರಿಶೀಲಿಸಿದ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ದೇವಿ ದರ್ಶನಕ್ಕೆ 3 ವಿಧವಾದ ಸಾಲು, ದರ್ಶನ ಪಡೆದವರಿಗೆ ಕುಂಕುಮ ಹಾಗೂ ಪ್ರಸಾದ ನೀಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದೇ ಸಮಯದಲ್ಲಿ ಸಾವಿರ ಜನಕ್ಕೆ ಬಾಳೆಲೆಯಲ್ಲಿ ಊಟ ಪ್ರಸಾದ ನೀಡುವಂತಹ ಕಾರ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದೆಡೆ ದೊನ್ನೆಯಲ್ಲೂ ಪ್ರಸಾದ ವಿತರಿಸಲಾಗುತ್ತದೆ. ಕೂಡಲೇ ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ತಿ.ನರಸೀಪುರ ರಸ್ತೆ ಹಾಗೂ ಎಂ.ಜಿ.ರಸ್ತೆಯ ಜಂP್ಷÀನ್‍ನಲ್ಲಿರುವ ಮೈದಾನದಲ್ಲಿ ಭಕ್ತರು ತಮ್ಮ ವಾಹನ ನಿಲ್ಲಿಸಿ, ಬಸ್‍ನಲ್ಲಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆಯಬಹುದು. ಇದಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Translate »