ಶಿವಸೇನೆ ರೆಬೆಲ್ ಸ್ಟಾರ್ ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ
News

ಶಿವಸೇನೆ ರೆಬೆಲ್ ಸ್ಟಾರ್ ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ

July 1, 2022

ಮುಂಬೈ, ಜೂ.30- ಮಹಾರಾಷ್ಟ್ರ ದಲ್ಲಿ ಕಳೆದ ಎರಡು ವಾರಗಳಿಂದ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಅಂತ್ಯಗೊಂಡಿದೆ. ಬಿಜೆಪಿ ವರಿಷ್ಠರು ಶಿವಸೇನೆ ಬಂಡಾಯದಲ್ಲಿ ಭವಿಷ್ಯದ ರಾಜಕೀಯ ಸೌಧ ಕಟ್ಟಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ 31 ತಿಂಗಳ ಮಹಾ ಆಘಾಡಿ ಸರ್ಕಾರ ಪತನವಾಗಿ ಶಿವಸೇನೆ ಬಂಡಾಯ ನಾಯಕ ಏಕ ನಾಥ್ ಶಿಂಧೆ ನೇತೃತ್ವದಲ್ಲಿನ ನೂತನ ಶಿವಸೇನೆ-ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ರಾಜಭವನದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಏಕನಾಥ್ ಶಿಂಧೆ ನೂತನ ಮುಖ್ಯಮಂತ್ರಿಯಾಗಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ಒಂದು ಕಾಲದಲ್ಲಿ ಆಟೋ ಡ್ರೈವರ್ ಆಗಿದ್ದ ಏಕನಾಥ್ ಶಿಂಧೆ, ಶಿವಸೇನಾ ಮುಖ್ಯಸ್ಥ ಹಾಗೂ ತನ್ನ ಗುರು ಉದ್ಧವ್ ಠಾಕ್ರೆಯನ್ನು ರಾಜಕಾರಣದಲ್ಲಿ ಹಿಂದಿಕ್ಕಿ ಇದೀಗ ಮಹಾರಾಷ್ಟ್ರದ ಸಿಎಂ ಆಗಿ ಹೊರ ಹೊಮ್ಮಿದ್ದಾರೆ. ನಾಲ್ಕು ಬಾರಿ ಶಾಸಕರು, ಎರಡು ಬಾರಿ ಸಚಿವರಾಗಿದ್ದ ಶಿಂಧೆ, ಜನ ಹಾಗೂ ಕಾರ್ಯಕ್ರಮ ಸಂಘಟಿ ಸುವ ಕೌಶಲ್ಯದೊಂದಿಗೆ ಹಂತ ಹಂತವಾಗಿ ರಾಜಕೀಯದಲ್ಲಿ ಉನ್ನತ ಹುದ್ದೆಗೇರುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ ಮಧ್ಯಾಹ್ನ ಶಿಂಧೆ ಮತ್ತು ಫಡ್ನವಿಸ್ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಫಡ್ನವಿಸ್, ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು 2019ರಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆ ಕೈಜೋಡಿಸುವ ಮೂಲಕ ಶಿವಸೇನಾ ಸಾರ್ವಜನಿಕ ಜನಾದೇಶವನ್ನು ಅವಮಾನಿಸಿದೆ. ಮಹಾ ವಿಕಾಸ್ ಅಘಾಡಿ ಸರ್ಕಾರದ ಆಳ್ವಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅದರ ಪರಿಣಾಮ ಇಬ್ಬರು ನಾಯಕರು ಜೈಲಿನಲ್ಲಿದ್ದಾರೆ. ಶಿಂಧೆ ನೇತೃತ್ವದ ಸರ್ಕಾರದ ಭಾಗವಾಗುವುದಿಲ್ಲ, ಆದರೆ ಹೊರಗಿನಿಂದ ಎಲ್ಲಾ ಬೆಂಬಲವನ್ನು ನೀಡುವುದಾಗಿ ಫಡ್ನವೀಸ್ ಹೇಳಿದ್ದರು. ಫಡ್ನವೀಸ್ ಅವರು ಹೀಗೆ ಹೇಳಿದ ಬೆನ್ನ ಹಿಂದೆಯೇ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಫಡ್ನವೀಸ್ ಮಹಾ ಸರ್ಕಾರದ ಭಾಗವಾಗಬೇಕೆಂದು ಬಿಜೆಪಿ ವರಿಷ್ಠ ಮಂಡಳಿ ಬಯಸಿದೆ. ನಾವು ಅವರಲ್ಲಿ ವೈಯಕ್ತಿಕ ಮನವಿ ಮಾಡಿದ್ದೇವೆ ಎಂದು ಹೇಳಿದ್ದರು. ಅಮಿತ್ ಶಾ, ನಡ್ಡಾ ಮನವಿಗೆ ಫಡ್ನವೀಸ್ ಒಪ್ಪಿದ್ದಾರೆ. ಅವರು ಸರ್ಕಾರದ ಭಾಗವಾಗುವುದಾಗಿ ಟ್ವೀಟ್ ಮಾಡಿದ್ದರು. ಇದು ಬಾಳಾಸಾಹೇಬ್ ಠಾಕ್ರೆ ಮತ್ತು ಧರ್ಮವೀರ ಆನಂದ್ ದಿಘೆ ಅವರ ಸಿದ್ಧಾಂತದ ವಿಜಯವಾಗಿದೆ. ನಮ್ಮ ಸರ್ಕಾರ ಸಾಮಾನ್ಯ ಜನರ ಹಿತಾಸಕ್ತಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ ಎಂದು ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಹೇಳಿದರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ ಮತ್ತು ಫಡ್ನವಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ್ ಶಿಂಧೆಜೀ ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ತಳಮಟ್ಟದ ನಾಯಕ, ಅವರ ಶ್ರೀಮಂತ ರಾಜಕೀಯ, ಶಾಸಕಾಂಗ ಮತ್ತು ಆಡಳಿತಾತ್ಮಕ ಅನುಭವವನ್ನು ತಮ್ಮೊಂದಿಗೆ ತರುತ್ತಾರೆ. ಮಹಾರಾಷ್ಟ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Translate »