ದುಷ್ಕರ್ಮಿಗಳಿಂದ ಬ್ಲಾಕ್‌ಮೇಲ್: ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆ
ಮೈಸೂರು

ದುಷ್ಕರ್ಮಿಗಳಿಂದ ಬ್ಲಾಕ್‌ಮೇಲ್: ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆ

August 27, 2021

ಮೈಸೂರು, ಆ.೨೬(ಎಂಟಿವೈ)- ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸ ಗಿದ ಕಿರಾತಕರು ಅತ್ಯಾಚಾರದ ದೃಶ್ಯ ವನ್ನು ವಿಡಿಯೋ ಚಿತ್ರೀಕರಣ ಮಾಡಿ ಕೊಂಡು, ೩ ಲಕ್ಷ ರೂ. ನೀಡುವಂತೆಯೂ, ಇಲ್ಲದಿದ್ದರೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿಯೂ ಬೆದರಿಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ನಿರ್ಜನ ಪ್ರದೇಶದಲ್ಲಿ ಬಂಡೆ ಮೇಲೆ ಕುಳಿತಿದ್ದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಜೊತೆ ಮೊದಲಿಗೆ ಜಗಳ ಮಾಡಿದ ಅತ್ಯಾಚಾರಿಗಳು ನಂತರ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ವಿದ್ಯಾರ್ಥಿನಿಯನ್ನು ಅನತಿ ದೂರ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿ, ಆ ದುಷ್ಕೃತ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂತರ ತಮಗೆ ೩ ಲಕ್ಷ ರೂ. ಯಾರಿಂದ ಲಾದರೂ ತರಿಸಿ ಕೊಡುವಂತೆ ಯುವಕನನ್ನು ಪೀಡಿಸಿದ ಕಿರಾತಕರು, ಹಣ ಕೊಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಅತ್ಯಾಚಾರದ ನಂತರ ಸುಮಾರು ೧ ಗಂಟೆ ಕಾಲ ಯುವಕ ಮತ್ತು ಯುವತಿಯನ್ನು ಕಾಡಿದ ಅತ್ಯಾಚಾರಿಗಳು ಹಣ ದೊರೆಯುವುದಿಲ್ಲವೆಂಬುದು ಮನವರಿಕೆಯಾಗುತ್ತಿದ್ದಂತೆಯೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ವಿಡಿಯೋ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಲ್ಲದೇ ಅವರ ಬಳಿ ಇದ್ದ ಮೊಬೈಲ್‌ಗಳನ್ನು ಕಸಿದುಕೊಂಡು ಜಾಗ ಖಾಲಿ ಮಾಡಿದ್ದಾರೆ ಎನ್ನಲಾಗಿದೆ. ಆ ನಂತರ ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ಯುವಕ ತನ್ನ ಬೈಕ್‌ನಲ್ಲೇ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ, ಅಪರಿಚಿತರು ಹಲ್ಲೆ ನಡೆಸಿದರು ಎಂದು ತಿಳಿಸಿದ್ದಾನೆ ಎನ್ನಲಾಗಿದ್ದು, ಆಸ್ಪತ್ರೆಯಿಂದ ಪೊಲೀಸ್ ಠಾಣೆಗೆ ಎಂಎಲ್‌ಸಿ ವರದಿ ತಲುಪಿ, ಪೊಲೀಸರು ಆಗಮಿಸಿದಾಗ ಆತ ಸಾಮೂಹಿಕ ಅತ್ಯಾಚಾರದ ಬಗ್ಗೆ ತಿಳಿಸಿ ದೂರು ನೀಡಿದನೆಂದು ಮೂಲಗಳು ಹೇಳಿವೆ.

 

Translate »