ಬೋಗಾದಿ ಕೋವಿಡ್ ಕೇರ್ ಸೆಂಟರ್  ಸದ್ಯವೇ ಚಿಕಿತ್ಸಾ ಕಾರ್ಯದಿಂದ ಮುಕ್ತ
ಮೈಸೂರು

ಬೋಗಾದಿ ಕೋವಿಡ್ ಕೇರ್ ಸೆಂಟರ್ ಸದ್ಯವೇ ಚಿಕಿತ್ಸಾ ಕಾರ್ಯದಿಂದ ಮುಕ್ತ

July 15, 2021

ಮೈಸೂರು, ಜು.14(ಎಂಕೆ)- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೋಗಾದಿ 2ನೇ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿರುವ `ಪುರುಷ-ಮಹಿಳೆಯರ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್’ನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಅದು, ಸದ್ಯದಲ್ಲಿಯೇ ಸೋಂಕಿತರ ಶುಶ್ರೂಷೆ ಹೊಣೆಯಿಂದ ಮುಕ್ತವಾಗಲಿದೆ.

ಇಲ್ಲಿನ ಸರ್ಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜು ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯಗಳಲ್ಲಿ ಮೈಸೂರು ಮಹಾನಗರ ಪಾಲಿಕೆ ಸಹಕಾರದಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ಗೆ ಈವರೆಗೆ 362 ಸೋಂಕಿತರು ದಾಖಲಾಗಿದ್ದು, 348 ಮಂದಿ ಗುಣ ಕಂಡಿದ್ದಾರೆ. ಸದ್ಯ 2 ಕೋವಿಡ್ ಕೇರ್ ಸೆಂಟರ್‍ಗಳಿಂದ 6 ಮಹಿಳೆಯರು, 8 ಪುರುಷರು ಸೇರಿ 14 ಮಂದಿಯಷ್ಟೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯನಗರ 3-4ನೇ ಹಂತ, ಬೋಗಾದಿ ಗ್ರಾಮ, ಬೋಗಾದಿ 2ನೇ ಹಂತ, ರಾಮಕೃಷ್ಣ ನಗರ, ಇಲವಾಲ, ಹಿನಕಲ್, ವರಕೋಡು, ಕಡಕೊಳ ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಜತೆಗೆ ಊಟ, ವಸತಿ ನೀಡುವ ಮೂಲಕ ಮಾದರಿ ಸೇವೆ ನೀಡಲಾಗಿದೆ. ಬೆಳಗ್ಗೆ ತಿಂಡಿ, 11.30ಕ್ಕೆ ಕಷಾಯ, ಮಧ್ಯಾಹ್ನ ಮುದ್ದೆ, ಅನ್ನ, ಸಾಂಬಾರ್ ಜೊತೆಗೆ ಮೊಟ್ಟೆ, ಸಂಜೆ ಕಾಫಿ, ರಾತ್ರಿ ವೇಳೆ ಅನ್ನ-ತಿಳಿಸಾರು ವಿತರಿಸುತ್ತಿದ್ದು, ಸೋಂಕಿತರಿಗೆ ಮನೆ ವಾತಾವರಣವನ್ನೇ ಸೃಷ್ಟಿಸಲಾಗಿದೆ.

ನಿತ್ಯ 3 ಪಾಳಿಯಲ್ಲಿ ವೈದ್ಯಕೀಯ ಮತ್ತು ಸ್ವಚ್ಛತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕುಡಿಯುವ ನೀರಿನ ಪೂರೈಕೆ ಜೊತೆಗೆ ಸೋಂಕಿತರಿಗೆ ಅಗತ್ಯ ವಿರುವ ಔಷಧಿ-ಮಾತ್ರೆಗಳು ಕೊರತೆಯಾಗದಂತೆ ನಿರ್ವಹಿಸಲಾಗಿದೆ.

24 ಗಂಟೆ ಆಂಬ್ಯುಲೆನ್ಸ್: ಕೋವಿಡ್ ಕೇರ್ ಸೆಂಟರ್‍ನಲ್ಲಿ ದಿನದ 24 ಗಂಟೆಯೂ ಉಚಿತ ಆಬ್ಯುಲೆನ್ಸ್ ಸೇವೆ ಲಭ್ಯವಿದೆ. 200ಕ್ಕೂ ಹೆಚ್ಚು ಸೋಂಕಿತರನ್ನು ಕೇರ್ ಸೆಂಟರ್ ಹಾಗೂ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಆಂಬ್ಯುಲೆನ್ಸ್ ಚಾಲಕ ಯೋಗಿ ಮಾಹಿತಿ ನೀಡಿದರು. ವಿಜಯನಗರದ ಕೋವಿಡ್ ಮಿತ್ರ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 2 ಆಂಬ್ಯು ಲೆನ್ಸ್‍ಗಳಿವೆ. ನಿತ್ಯ 5-10 ಮಂದಿ ಸೋಂಕಿತರನ್ನು ಆಸ್ಪತ್ರೆಗಳಿಗೆ, ಕೋವಿಡ್ ಕೇರ್ ಸೆಂಟರ್‍ಗೆ ಕರೆತರುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆದ ಸೋಂಕಿ ತರು, ಸೋಂಕಿತ ಸಂಬಂಧಿಕರು ಹಾಗೂ ಸ್ಥಳೀಯ ನಿವಾಸಿ ಗಳಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.

Translate »