ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಗಾನ ಮೋಡಿಗೆ ಕುಣಿದು ಕುಪ್ಪಳಿಸಿದ ಯುವ ಪಡೆ!
ಮೈಸೂರು

ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಗಾನ ಮೋಡಿಗೆ ಕುಣಿದು ಕುಪ್ಪಳಿಸಿದ ಯುವ ಪಡೆ!

September 30, 2022

ಮೈಸೂರು, ಸೆ.29(ಜಿಎ)- ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಕನ್ನಿಕಾ ಕಪೂರ್ ಗಾಯನ ಮೋಡಿಗೆ ಮೈಸೂರಿನ ಯುವ ಸಮೂಹ ಕುಣಿದು ಕುಪ್ಪಳಿಸಿತು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪ ಡಿಸಿರುವ ‘ಯುವ ದಸರಾ’ದಲ್ಲಿ 2ನೇ ದಿನವಾದ ಗುರುವಾರ ಬಾಲಿವುಡ್‍ನ ಕನ್ನಿಕಾ ಕಪೂರ್ ಸುಮಧುರವಾಗಿ ಮಸ್ತ್ ಕಲಂದರ್, ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರದ ಹಿಂದಿ ಅವರಣಿಕೆಯ ‘ಹೂ ಬೋಲೆಗಾ ಹೂಹು ಬೋಲೇಗಾ’ ಸೇರಿದಂತೆ ಬಾಲಿವುಡ್ ಚಿತ್ರಗಳ ಹಲವು ಹಾಡುಗಳನ್ನು ಹಾಡುವುದರ ಜೊತೆಗೆ ನರ್ತಿಸಿದರೆ, ಪಡ್ಡೆ ಹುಡುಗರು ಹುಚ್ಚೆದು ಕುಣಿದು ಕುಪ್ಪಳಿಸಿದರು.

ಇದಕ್ಕೂ ಮೊದಲು ನವದುರ್ಗೆಯರ ದರ್ಶನ, ವಿಘ್ನ ನಿವಾರಕನ ಆರಾಧನೆ, ಶಿವನ ಸ್ಮರಣೆಯ ಮೂಲಕ ಯುವ ದಸರಾದಲ್ಲಿ ನೆರೆದಿದ್ದ ಜನರನ್ನು ವಿವಿಧ ಕಲಾತಂಡಗಳು ತಮ್ಮ ನೃತ್ಯ ರೂಪಕದ ಮೂಲಕ ಮೋಡಿ ಮಾಡಿದವು. ನೃತ್ಯ ರೂಪಕದ ಮೂಲಕ ಕೊಳ್ಳೆಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನವಶಕ್ತಿ ವೈಭವ ಪ್ರದರ್ಶಸಿದರು. ಪಾರ್ವತಿ ದೇವಿ ಕಾಳಿಯ ರೂಪತಾಳಿ ರಕ್ತಬೀಜಾಸುರನ ಸಂಹಾರ, ಚಾಮುಂಡೇಶ್ವರಿಯಿಂದ ಮಹಿಷನ ವಧೆ ಪ್ರಸಂಗವನ್ನು ನೃತ್ಯ ರೂಪಕದ ಮೂಲಕ ಪ್ರದರ್ಶಿಸಿ, ನವಶಕ್ತಿಯ ಅವತಾರವನ್ನು ಕಣ್ಣಿಗೆ ಕಟ್ಟಿಕೊಡುವ ಮೂಲಕ ಭಕ್ತಿ ಸುಧೆ ಹರಿಸಿದರು.

ರಾಷ್ಟ್ರಿಯ ಐಕ್ಯತೆ ಕುರಿತು ಪಂಜಾಬಿಗಳ ನೃತ್ಯ, ದಕ್ಷಿಣ ಕನ್ನಡದ ಯಕ್ಷಗಾನ, ಭರತನಾಟ್ಯ, ಲಂಬಾಣಿ ನೃತ್ಯ, ಕೇರಳದ ಮೋಹಿಯಾಟ್ಟಂ ಸೇರಿದಂತೆ ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಮೈಸೂರಿನ ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರಾಕಾರದ ಮೂಲಕ ಸಾರಿದರು. ನಂತರ ಮೈಸೂರು ನೃತ್ಯಗಾರ ಸಂಘದ ಕಲಾವಿದರು 1990ರಿಂದ ಇತ್ತೀಚಿನವರೆಗೂ ತೆರೆಕಂಡ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿ ಭಾರತ ಚಿತ್ರರಂಗದ ವಿಶೇಷತೆಯನ್ನು ಮೆರೆದರು. ಪಾಪ್ ಲೋಕದ ದೊರೆ ಮೈಕಲ್ ಜಾಕ್ಸನ್ ಗೀತೆ ಮತ್ತು ಮೂನ್ ವಾಕ್‍ಗೆ ಬಾರೀ ಕರತಾಡನ, ಶಿಳ್ಳೆಗಳು ಮೇಳೈಸಿದವು.

ಆಪ್ತಮಿತ್ರ ಖ್ಯಾತಿಯ ಶ್ರೀಧರ್ ಜೈನ್ ಮತ್ತು ತಂಡವು ‘ಸತ್ಯ ಹರಿಶ್ಚಂದ್ರ’ ಚಿತ್ರದ ಮತದಲ್ಲಿ ಕೀಳ್ಯಾವುದೋ ಹುಚ್ಚಪ್ಪ… ರಘು ದೀüಕ್ಷಿತ್ ಅವರ ಲೋಕದ ಕಾಳಜಿ ಮಾಡುತಿನಂತಿ…. ಹಾಡಿಗೆ ಮನಮೋಹಕ ನೃತ್ಯ ನೆರೆದಿದ್ದ ಸಭಿಕರನ್ನು ತಲೆದೂಗುವಂತೆ ಮಾಡಿದರೆ, ಜೀ ಕನ್ನಡ ವಾಹಿನಿಯ ‘ಡಾನ್ಸ್ ಕರ್ನಾಟಕ ಡಾನ್ಸ್’ ಖ್ಯಾತಿಯ ನೃತ್ಯ ನಿರ್ದೇಶಕರಾದ ಪವನ್ ಮತ್ತು ರುದ್ರ ತಂಡವು ಪುನೀತ್ ನಟಿಸಿರುವ ರಾಜಕುಮಾರ್ ಚಿತ್ರದ ಟ್ವಿಂಕಲ್ ಲಿಟಲ್ ಸ್ಟಾರ್… ದರ್ಶನ್ ಅಭಿನಯದ ಯಜಮಾನ ಚಿತ್ರದ ಒಂದು ಮುಂಜಾನೆ… ಮತ್ತು ಸುದೀಪ್ ಚಿತ್ರದ ರಾ..ರಾ.. ರಕ್ಕಮ್ಮ… ಹಾಡಿಗೆ ಹೆಜ್ಜೆ ಹಾಕಿದರು. ನೆಚ್ಚಿನ ನಟನ ಗೀತೆಗಳ ಕೇಳಿದ ತಕ್ಷಣ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಮಂಗಳೂರಿನ ವಿಯಾನ್ಸ್ ತಂಡವು ಕರಾವಳಿ ನಾಡಿನ ಕಲೆ ಮತ್ತು ಸಂಸ್ಕøತಿಯನ್ನು ನೃತ್ಯ ಪ್ರಾಕಾರದ ಮೂಲಕ ಪ್ರಸ್ತುತಪಡಿಸಿದರು. ಹುಲಿ ಕುಣಿತ ಮತ್ತು ಸಾಹಸ ನೃತ್ಯವು ಹುಬ್ಬೆರಿಸುವಂತೆ ಮಾಡಿತು.

Translate »