ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆಇಂದು ರಾಜ್ಯ ಪ್ರವೇಶ
ಮೈಸೂರು

ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆಇಂದು ರಾಜ್ಯ ಪ್ರವೇಶ

September 30, 2022

ಮೈಸೂರು, ಸೆ.29- ರಾಷ್ಟ್ರ ಮಟ್ಟದಲ್ಲಿ ಕುಸಿದಿರುವ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಮೇಲೆತ್ತಲು ಮತ್ತೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡಿರುವ `ಭಾರತ ಐಕ್ಯತಾ ಯಾತ್ರೆ’ ನಾಳೆ (ಸೆ.30) ಕೇರಳದಿಂದ ರಾಜ್ಯದ ಗಡಿ ತಾಲೂಕು ಗುಂಡ್ಲುಪೇಟೆ ಪ್ರವೇಶಿಸಲಿದೆ.

ರಾಜ್ಯದಲ್ಲಿ ಮೊದಲನೇ ದಿನದ ರಾಹುಲ್ ಗಾಂಧಿ ಅವರ ಪಾದಯಾತ್ರೆ ನಾಳೆ ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಮುಂಭಾಗದಿಂದ ಆರಂಭವಾಗಲಿದೆ. ರಾಜ್ಯಕ್ಕೆ ಆಗಮಿಸುವ ರಾಹುಲ್ ಗಾಂಧಿ ಅವರನ್ನು ಅದ್ಧೂರಿ ಯಾಗಿ ಬರಮಾಡಿಕೊಳ್ಳಲು ಕಾಂಗ್ರೆಸ್ ಮುಖಂಡರು ಸಜ್ಜಾಗಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಅಂಬೇಡ್ಕರ್ ಭವನದ ಮುಂಭಾಗ ಬಹಿರಂಗ ಸಭೆ ನಡೆಸಿದ ನಂತರ ರಾಹುಲ್ ಗಾಂಧಿ ಪಾದಯಾತ್ರೆಯನ್ನು ಆರಂಭಿಸಲಿದ್ದಾರೆ.
ಬಹಿರಂಗ ಸಭೆಗಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, 250 ಮಂದಿ ಆಸೀನರಾಗಲು ವೇದಿಕೆ ಮೇಲೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕಾರ್ಯಕರ್ತರಿಗಾಗಿ 30 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಅಂಬೇಡ್ಕರ್ ಭವನದ ಮುಂಭಾಗ ಆಕರ್ಷಕವಾಗಿ ತಾತ್ಕಾಲಿಕ ಕಮಾನು ನಿರ್ಮಿಸಲಾಗಿದೆ. ಬೆಳಗ್ಗೆ ಪಾದಯಾತ್ರೆಯು ಬೆಂಡಗಳ್ಳಿ ಮೈದಾನದಲ್ಲಿ ವಿಶ್ರಾಂತಿ ಪಡೆಯ ಲಿದೆ. ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದ ಬಳಿ 30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ನಂತರ ಸಂಜೆ 4 ಗಂಟೆಗೆ ಪಾದಯಾತ್ರೆ ಮುಂದುವರೆಯಲಿದ್ದು, ಬೇಗೂರಿನ ಪದವಿ ಪೂರ್ವ ಕಾಲೇಜು ಬಳಿ ಇರುವ ತ್ರಿಪುರ ಕನ್ವೆನ್ಷನ್ ಸೆಂಟರ್ ನಲ್ಲಿ ಮೊದಲ ದಿನದ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ.

ಸಂವಾದ: ಪಾದಯಾತ್ರೆ ಅಂಗವಾಗಿ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್ ಧ್ವಜ ಹಾಗೂ ಭಾರತ್ ಜೋಡೋ ಪಾದಯಾತ್ರೆಗೆ ಸಂಬಂಧಿಸಿದ ಪ್ಲೆಕ್ಸ್‍ಗಳನ್ನು ಅಳವಡಿಸಲಾಗಿದೆ. ಗುಂಡ್ಲುಪೇಟೆಯಲ್ಲಿ ಮಧ್ಯಾಹ್ನ ವಿಶ್ರಾಂತಿ ವೇಳೆ ರಾಹುಲ್ ಗಾಂಧಿ ಅವರು ಆದಿವಾಸಿಗಳು ಮತ್ತು ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರ ಜೊತೆ ಸಂವಾದ ನಡೆಸಲಿದ್ದಾರೆ. ನಾಳೆ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇ ವಾಲ, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮುಂತಾದ ನಾಯಕರು ಗುಂಡ್ಲುಪೇಟೆಗೆ ಆಗಮಿಸಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಭಾರತ್ ಜೋಡೋ ಪಾದಯಾತ್ರೆ ಅಂಗವಾಗಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಕುಮಾರ್ ಅವರು ಬಹಿರಂಗ ಸಭೆ ನಡೆ ಯುವ ಸ್ಥಳ, ಮಧ್ಯಾಹ್ನ ವಿಶ್ರಾಂತಿ ಪಡೆ ಯುವ ಸ್ಥಳ ಹಾಗೂ ರಾತ್ರಿ ವಾಸ್ತವ್ಯ ಸ್ಥಳದ ಪರಿಶೀಲನೆ
ನಡೆಸಿದರು. ಅಲ್ಲದೇ ಪೊಲೀಸ್ ಬಂದೋಬಸ್ತ್ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಮಾತ್ರವಲ್ಲದೇ ಪಾದಯಾತ್ರೆ ಸಾಗುವ ಮಾರ್ಗಮಧ್ಯೆ ಯಾವ ಯಾವ ಸ್ಥಳದಲ್ಲಿ ತೀವ್ರ ನಿಗಾ ವಹಿಸಬೇಕು ಎಂಬುದರ ಬಗ್ಗೆಯೂ ಸೂಚನೆಗಳನ್ನು ನೀಡಿದರು.

ಅ.1ರಂದು ಬೆಳಗ್ಗೆ 6.30ಕ್ಕೆ ಬೇಗೂರಿನಿಂದ 2ನೇ ದಿನದ ಪಾದಯಾತ್ರೆ ಆರಂಭ ವಾಗಿದ್ದು, ಕಳಲೆ ಗೇಟ್ ಬಳಿ ರಾಹುಲ್ ಗಾಂಧಿ ತಂಡ ಮಧ್ಯಾಹ್ನದ ಊಟ ನಂತರ ವಿಶ್ರಾಂತಿ ಪಡೆಯಲಿದೆ. ಈ ವೇಳೆ ರಾಹುಲ್ ಗಾಂದಿಯವರು ಕೈಗಾರಿಕೋದ್ಯಮಿಗಳು ಮತ್ತು ವಿವಿಧ ರಂಗದ ಮುಖಂಡರುಗಳ ಜೊತೆ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಪಾದಯಾತ್ರೆ ಮುಂದುವರೆದು ತಾಂಡವಪುರ ಬಸ್ ನಿಲ್ದಾಣದ ಬಳಿ ಮುಕ್ತಾಯಗೊಂಡ ನಂತರ ಅಲ್ಲಿನ ಕ್ರೈಸ್ಟ್ ಶಾಲೆಯ ಬಳಿ ಬಹಿರಂಗ ಸಭೆ ನಡೆಯಲಿದ್ದು ನಂತರ ಎಂಐಟಿ ಕಾಲೇಜಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ನಂಜನಗೂಡು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಯವರಿಗೆ ಅಭೂತಪೂರ್ವ ಸ್ವಾಗತ ನೀಡಲು ಸಕಲ ಸಿದ್ಧತೆ ನಡೆಸಿದ್ದಾರೆ. ತಾಲೂಕಿನ ಎಲಚಗೆರೆ ಬೋರೆಯ ಬಳಿ ಸ್ವಾಗತ ಕಮಾನು ನಿರ್ಮಿಸಿದ್ದು, ಸುಮಾರು 3ಸಾವಿರಕ್ಕೂ ಅಧಿಕ ಮಹಿಳೆ ಯರಿಂದ ಪೂರ್ಣಕುಂಭ ಸ್ವಾಗತ, ಕಲಾತಂಡಗಳ ಮೆರವಣಿಗೆಗೂ ಸಹ ಸಿದ್ಧತೆ ನಡೆಸಿದ್ದಾರೆ. ರಸ್ತೆ ಉದ್ದಕ್ಕೂ ಸಹ ಅಲ್ಲಲ್ಲಿ ವಿಶ್ರಾಂತಿ ತಾಣಗಳನ್ನು ನಿರ್ಮಿಸಿ ತಂಪು ಪಾನೀಯ, ಕಾಫಿ ಟೀ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. ರಾಹುಲ್ ಗಾಂಧಿ ಪಾದಯಾತ್ರೆ ನಡೆಸುವ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಬೃಹತ್ ಫ್ಲೆಕ್ಸ್ ಮತ್ತು ಬ್ಯಾನರ್‍ಗಳ ಅಳವಡಿಕೆ ಕಾರ್ಯ ಮುಂದುವರಿದಿದ್ದು, ರಸ್ತೆಗಳ ಸ್ವಚ್ಛತೆ ನಡೆಸಿ ಮದುವಣಗಿತ್ತಿಯಂತೆ ಶೃಂಗರಿ ಸಿದ್ದಾರೆ. ತಾಂಡವಪುರದ ಎಂಐಟಿ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.
ಅ.2ರಂದು ಗಾಂಧಿ ಜಯಂತಿ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ವಾಹನಗಳ ಮೂಲಕ ತೆರಳಲಿರುವ ರಾಹುಲ್ ಗಾಂಧಿ, ಅಲ್ಲಿ ಗಾಂಧಿ ಜಯಂತಿ ಯನ್ನು ಆಚರಿಸಲಿದ್ದಾರೆ. ನಂತರ ಮತ್ತೆ ನಂಜನಗೂಡಿಗೆ ಆಗಮಿಸಿ ಕಡಕೊಳ ಕೈಗಾರಿಕಾ ಪ್ರದೇಶದಿಂದ ಪಾದಯಾತ್ರೆಯನ್ನು ಮುಂದುವರೆಸಿ ಅಂದು ಸಂಜೆ ಮೈಸೂರು ಅರಮನೆ ಎದುರಿನ ವಸ್ತು ಪ್ರದರ್ಶನ ಪ್ರಾಧಿಕಾರ ಮೈದಾನ ತಲುಪಲಿದ್ದಾರೆ. ಅ.3ರಂದು ಮೈಸೂರಿ ನಿಂದ ಹೊರಡಲಿರುವ ಪಾದಯಾತ್ರೆಯು ಶ್ರೀರಂಗಪಟ್ಟಣ ಮೂಲಕ ಸಾಗಿ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ವನಜಾ ಸುಂದರ್ ಕನ್ವೆನ್ಷನ್ ಹಾಲ್‍ನಲ್ಲಿ ವಿಶ್ರಾಂತಿ ಪಡೆದ ನಂತರ ಸಂಜೆ 4 ಗಂಟೆಗೆ ಪಾದಯಾತ್ರೆ ಮುಂದುವರೆದು ಟಿ.ಎಸ್.ಛತ್ರ ಗ್ರಾಮದ ವೆಂಕಟರಮಣಸ್ವಾಮಿ ದೇವಸ್ಥಾನದ ಎದುರು ವಾಸ್ತವ್ಯ ಹೂಡಲಿದೆ. ಆಯುಧ ಪೂಜೆ ಹಾಗೂ ವಿಜಯ ದಶಮಿ ಅಂಗವಾಗಿ ಅ.4 ಮತ್ತು 5ರಂದು ಪಾದಯಾತ್ರೆಗೆ ವಿರಾಮ ನೀಡಲಾಗಿದ್ದು, ಅ.6ರಂದು ಮಹದೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿ ನಾಗಮಂಗಲ ತಾಲೂಕು ಚೌಡೇನಹಳ್ಳಿ ಗೇಟ್ ಬಳಿ ವಿಶ್ರಾಂತಿ ಪಡೆದು ಸಂಜೆ 4 ಗಂಟೆಗೆ ಪಾದಯಾತ್ರೆ ಮುಂದುವರೆದು ಬ್ರಹ್ಮದೇವನಹಳ್ಳಿಯ ಎಂ.ಹೊಸೂರು ಗೇಟ್ ಬಳಿ ವಾಸ್ತವ್ಯ ಹೂಡಲಿದೆ. ಅ.7ರಂದು ವಿಸ್ಡಮ್ ಪಬ್ಲಿಕ್ ಸ್ಕೂಲ್‍ನಿಂದ ಹೊರಡಲಿರುವ ಯಾತ್ರೆಯು ನಾಗಮಂಗಲ ತಾಲೂಕು ಅಂಚೆಚಿಟ್ಟನಹಳ್ಳಿಯಲ್ಲಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಯಾತ್ರೆ ಮುಂದುವರೆದು ಬೆಳ್ಳೂರು ಬಸ್ ನಿಲ್ದಾಣದ ಬಳಿ ಮುಕ್ತಾಯವಾದ ನಂತರ ಆದಿಚುಂಚನಗಿರಿ ಮಠದ ಬಳಿಯ ಮೈದಾನದಲ್ಲಿ ವಾಸ್ತವ್ಯ ಹೂಡಲಿದೆ.

ಅ.8ರಂದು ಅಲ್ಲಿಂದ ಆರಂಭವಾಗುವ ಯಾತ್ರೆ ತುರುವೇಕೆರೆ ತಾಲೂಕು ವಡವನಘಟ್ಟ ಗ್ರಾಮದಲ್ಲಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಪಾದಯಾತ್ರೆ ಮುಂದುವರೆದು ಮತ್ತಿಘಟ್ಟದ ಬನ್ನಿಹಟ್ಟಿಯಲ್ಲಿ ವಾಸ್ತವ್ಯ ಹೂಡಲಿದೆ. ಅ.9ರಂದು ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಯಾತ್ರೆ ಸಿದ್ದನಘಟ್ಟ ಪಬ್ಲಿಕ್ ಸ್ಕೂಲ್ ಬಳಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಮುಂದುವರೆದು ಸೋಮಲಾಪುರದ ಕೋಡಿಯಾಳದಲ್ಲಿ ವಾಸ್ತವ್ಯ ಹೂಡಲಿದೆ. ಅ.10ರಂದು ಅಲ್ಲಿಂದ ಹೊರಡುವ ಯಾತ್ರೆ ಅಂಕಸಂದ್ರ ಹಳ್ಳಿ ಮೈದಾನದಲ್ಲಿ ವಿಶ್ರಾಂತಿ ಪಡೆದು ಸಂಜೆ 4 ಗಂಟೆಗೆ ಮುಂದುವರೆದು ಕಳ್ಳಬೆಳ್ಳ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದೆ. ಅ.11ರಂದು ಬೆಳಗ್ಗೆ 11 ಅಲ್ಲಿಂದ ಹೊರಡುವ ಯಾತ್ರೆ ಸಿರಿಗಂಧ ಅರಮನೆ ಬಳಿ ವಿಶ್ರಾಂತಿ ಪಡೆದ ನಂತರ ತಾವರೆಕೆರೆಯ ಶನೇಶ್ವರ ದೇವಾಲಯದ ಬಳಿ ವಾಸ್ತವ್ಯ ಹೂಡಲಿದೆ. ಅ.12ರಂದು ಬೆಳಗ್ಗೆ 7 ಗಂಟೆಗೆ ಅಲ್ಲಿಂದ ಪ್ರಾರಂಭವಾಗುವ ಪಾದಯಾತ್ರೆ ಹಿರಿಯೂರು ಬೈಪಾಸ್‍ನಲ್ಲಿ ವಿಶ್ರಾಂತಿ ಪಡೆದು ಸಂಜೆ 4 ಗಂಟೆಗೆ ಮತ್ತೆ ಹೊರಟು ಚಿತ್ರದುರ್ಗ ಜಿಲ್ಲೆಯ ಹತ್ರಿಕೋಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದೆ. ಅ.14ರಂದು ಅಲ್ಲಿಂದ ಆರಂಭವಾಗುವ ಯಾತ್ರೆ ಸಾನಿಕೆರೆ ಬಳಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಮುಂದುವರೆದು ಚಳ್ಳೆಕೆರೆಯಲ್ಲಿ ವಾಸ್ತವ್ಯ ಹೂಡಲಿದೆ. ಅ.15ರಂದು ಬೆಳಗ್ಗೆ ಹೊರಡುವ ಪಾದಯಾತ್ರೆ ಗಿರಿಯಮ್ಮನಹಳ್ಳಿಯಲ್ಲಿ ವಿಶ್ರಾಂತಿ ಪಡೆದ ನಂತರ ಮುಂದುವರೆದು ಹಿರೇಹಳ್ಳಿ ಸ್ವಾಮಿ ವಿವೇಕಾನಂದ ಸ್ಕೂಲ್ ಬಳಿ ವಾಸ್ತವ್ಯ ಹೂಡಲಿದೆ. ಅ.16ರಂದು ಬೆಳಗ್ಗೆ ಅಲ್ಲಿಂದ ಹೊರಡುವ ಯಾತ್ರೆ ಕಣಸಾಗರಹಳ್ಳಿ ಮೈದಾನದಲ್ಲಿ ವಿಶ್ರಾಂತಿ ಪಡೆದ ನಂತರ ಮುಂದುವರೆದು ಮೆಳಕಾಲ್ಮೂರು ರಾಂಪುರ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದೆ. ಅ.17ರಂದು ಬೆಳಗ್ಗೆ ಅಲ್ಲಿಂದ ಹೊರಡುವ ಯಾತ್ರೆ ಮಾದೇನಹಳ್ಳಿ ಗ್ರಾಮದಲ್ಲಿ ವಿಶ್ರಾಂತಿ ಪಡೆದು ಮುಂದುವರೆದು ಬಳ್ಳಾರಿಯ ಹಾಲಕುಂದಿ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದೆ. ಮರುದಿನ ಅಲ್ಲಿಂದ ಮುಂದುವರೆಯುವ ಯಾತ್ರೆಯು ಸಂಗನಕಲ್ಲು ಗ್ರಾಮದಲ್ಲಿ ವಿಶ್ರಾಂತಿ ಪಡೆದ ನಂತರ ಮುಂದುವರೆದು ಬಳ್ಳಾರಿಯ ಹೊಸ ಮೋಕಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಮರುದಿನ ರಾಜ್ಯದಿಂದ ನಿರ್ಗಮಿಸಲಿದೆ.

ರಾಹುಲ್ ಗಾಂಧಿ ಅವರು ಈ ಪಾದಯಾತ್ರೆಯಲ್ಲಿ ಪ್ರತಿದಿನವೂ ಕೆಲವು ಮುಖಂಡರು ಭಾಗವಹಿಸಲು ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದೊಂದು ಗಂಟೆ ಕಾಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಭಾರತ್ ಜೋಡೋ ಪಾದಯಾತ್ರೆಯ ಉಸ್ತುವಾರಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್‍ದೀಪ್ ಸಿಂಗ್ ಸುರ್ಜೇವಾಲ ವಹಿಸಿಕೊಂಡಿದ್ದು, ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಾಥ್ ನೀಡಲಿದ್ದಾರೆ. ರಾಹುಲ್ ಗಾಂಧಿ ಅವರು ಪ್ರತಿದಿನ ವಿಶ್ರಾಂತಿ ವೇಳೆ ಯುವಕರು, ಉದ್ಯಮಿಗಳು, ಸಾಹಿತಿಗಳು, ಆದಿವಾಸಿಗಳು, ವಿವಿಧ ಸಂಘಟನೆಗಳ ಮುಖಂಡರು, ವಿವಿಧ ಜನಾಂಗಗಳ ಮುಖಂಡರೊಂದಿಗೆ ಸಂವಾದ ನಡೆಸಲು ನಿಗದಿಪಡಿಸಲಾಗಿದೆ.

Translate »