ಮೈಸೂರಲ್ಲಿ ಸಿಕ್ಕಿಬಿದ್ರು ಹತ್ತು ಮಂದಿ ಕುಖ್ಯಾತ ಸರಗಳ್ಳರು
ಮೈಸೂರು

ಮೈಸೂರಲ್ಲಿ ಸಿಕ್ಕಿಬಿದ್ರು ಹತ್ತು ಮಂದಿ ಕುಖ್ಯಾತ ಸರಗಳ್ಳರು

October 1, 2022

ಮೈಸೂರು, ಸೆ.30(ಆರ್‍ಕೆ)- ಹತ್ತು ಮಂದಿ ಕುಖ್ಯಾತ ಸರಗಳ್ಳರ ಬಂಧಿಸಿರುವ ಮೈಸೂರಿನ ಸಿಸಿಬಿ ಪೊಲೀಸರು, 50 ಲಕ್ಷ ರೂ. ಮೌಲ್ಯದ 1 ಕೆಜಿ ಸರಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರಿನ ನಜರ್‍ಬಾದ್‍ನಲ್ಲಿರುವ ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಸರಗಳ್ಳತನ, ಮನೆ ಕಳವು ಸೇರಿ ಒಟ್ಟು 25 ಪ್ರಕರಣ ಗಳನ್ನು ಭೇದಿಸಿರುವ ಬಗ್ಗೆ ಮಾಹಿತಿ ನೀಡಿದರು. ಚಾಮರಾಜನಗರದ ಮಂಜು ಅಲಿಯಾಸ್ ಕಳ್ಳ ಮಂಜ(35), ಮೈಸೂ ರಿನ ಕುಂಬಾರಕೊಪ್ಪಲು ನಿವಾಸಿ ಚಂದನ್ (21), ಚಾಮರಾಜನಗರ ಜಿಲ್ಲೆ, ಸಾಗಡೆ ಗ್ರಾಮದ ಗೋಪಾಲ(40), ರಮೇಶ(50), ಮೇಗಲಹುಂಡಿ ಗ್ರಾಮದ ಸುರೇಶ್(25), ರಂಗಸ್ವಾಮಿ(24), ಎಸ್. ಹೃತಿಕ್(27), ಚಾಟಿಪುರ ಗ್ರಾಮದ ಮನು(23) ಹಾಗೂ ಸೈಯದ್ ಮೌಲಾನ(30) ಬಂಧಿತ ಖದೀಮರು.
ಆರೋಪಿಗಳಿಂದ 50 ಲಕ್ಷ ರೂ. ಮೌಲ್ಯದ 1 ಕೆಜಿ ಆಭರಣಗಳು, ಕೃತ್ಯಕ್ಕೆ ಬಳಸಿದ್ದ 5 ದ್ವಿಚಕ್ರ ವಾಹನ, ಕಳವು ಮಾಡಿದ್ದ 2 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದು, ಉಳಿದ 8 ಮಂದಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಮೈಸೂರಿನ ನಜರ್ ಬಾದ್ ಠಾಣೆ ವ್ಯಾಪ್ತಿ 2, ಕುವೆಂಪುನಗರದ 4, ವಿವಿಪುರಂನ 2, ಎನ್‍ಆರ್‍ನ 1, ಸರಸ್ವತಿ ಪುರಂನ 4, ಅಶೋಕಪುರಂನ 1, ಕೆಆರ್‍ನ 1, ಆಲನಹಳ್ಳಿ 2, ವಿಜಯನಗರ 3, ಲಕ್ಷ್ಮೀ ಪುರಂ 1, ಹೆಬ್ಬಾಳು ಠಾಣೆಯ 2 ಸರಗಳವು, ಮನೆಗಳವು ಪ್ರಕರಣ ಪತ್ತೆಯಾದಂತಾಗಿದೆ.

ಅಲ್ಲದೆ ನಂಜನಗೂಡು ತಾಲೂಕಿನ ಕವ ಲಂದೆ ಮತ್ತು ಚಾಮರಾಜನಗರ ಗ್ರಾಮಾಂ ತರ ಠಾಣೆಯ ತಲಾ 1 ಪ್ರಕರಣಗಳನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಆರೋಪಿತರ ಪೈಕಿ ಮಂಜು ಅಲಿಯಾಸ್ ಕಳ್ಳಮಂಜ ಮತ್ತು ಚಂದನ್ ವೃತ್ತಿನಿರತ ಸರಗಳ್ಳರಾಗಿದ್ದು, ಜೈಲುವಾಸ ಅನುಭವಿಸಿ ಬಂದ ನಂತರವೂ ತಮ್ಮ ಹಳೇ ಚಾಳಿ ಮುಂದುವರೆಸಿದ್ದರು.

ಮಂಜು ಈವರೆಗೆ ಒಟ್ಟು 27 ಸರ ಅಪ ಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಚಂದನ್ 4 ಪ್ರಕರಣಗಳಲ್ಲಿ ಆರೋಪಿ ಯಾಗಿದ್ದ. ಉಳಿದಂತೆ ಗೋಪಾಲ, ರಮೇಶ, ಸುರೇಶ, ರಂಗಸ್ವಾಮಿ, ಮನು ಮತ್ತು ಹೃತಿಕ್ ಎಲ್ಲರೂ ರಕ್ತ ಸಂಬಂಧಿಗಳಾಗಿದ್ದು, ಗಾರೆ ಕೆಲಸ, ಛತ್ರಗಳಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಆಗಾಗ ಮೈಸೂರು ನಗರ ದಲ್ಲಿ ಸರಗಳವು ಮಾಡುವಲ್ಲಿ ನಿರತರಾಗಿ ದ್ದರು. ಚಾಳಿಗೆ ಬಿದ್ದ ಆರೋಪಿ ಮಂಜನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದರು.

ಅದೇ ರೀತಿ ಹಳೇ ಕಳ್ಳನಾದ ಸೈಯದ್ ಮೌಲಾನ ಎಂಬುವನು ಮನೆಗಳ್ಳತನದಲ್ಲಿ ಕದ್ದ ಚಿನ್ನದ ಪದಾರ್ಥಗಳನ್ನು ಮಾರಾಟ ಮಾಡಲೆತ್ನಿಸಿದಾಗ ಆತನನ್ನು ವಶಕ್ಕೆ ಪಡೆದು 70 ಗ್ರಾಂ ಆಭರಣವನ್ನು ಎನ್‍ಆರ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳ ತನ ಮಾಡಿದ ಚಿನ್ನಾಭರಣಗಳನ್ನು ಗಿರವಿ ಅಂಗಡಿ, ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಒತ್ತೆ ಇಟ್ಟು ಹಣ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರು. ಕಳವು ಮಾಲು ಸ್ವೀಕರಿಸಿದವರನ್ನೂ ವಿಚಾರಣೆಗೊಳಪಡಿ ಸಿದ್ದು, ಕದ್ದ ಮಾಲು ಎಂದು ತಿಳಿದೂ ಪಡೆ ದಿರುವುದು ದೃಢಪಟ್ಟಲ್ಲಿ ಅವರ ವಿರು ದ್ಧವೂ ಪ್ರಕರಣ ದಾಖಲಿಸಲು ಕ್ರಮ ವಹಿಸು ತ್ತೇವೆ ಎಂದು ತಿಳಿಸಿದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್. ಗೀತಾ ಪ್ರಸನ್ನ, ಸಿಸಿಬಿ ಎಸಿಪಿ ಸಿ.ಕೆ.ಅಶ್ವಥ ನಾರಾಯಣ ಮಾರ್ಗದರ್ಶನದ ಕಾರ್ಯಾ ಚರಣೆಯಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಜಿ.ಶೇಖರ್, ಸಿಬ್ಬಂದಿಗಳಾದ ಉಮೇಶ್, ಅಸ್ಗರ್‍ಖಾನ್, ಸಲೀಂಖಾನ್, ರಾಮಸ್ವಾಮಿ, ಯಾಕೂಬ್ ಷರೀಫ್, ಎಂ.ಆರ್.ಗಣೇಶ್, ಸಿ.ಚಿಕ್ಕಣ್ಣ, ಉಮಾ ಮಹೇಶ್, ಪಿ.ಎನ್.ಲಕ್ಷ್ಮೀಕಾಂತ, ಆನಂದ, ಟಿ.ಪ್ರಕಾಶ್, ಸಿ.ಎನ್.ಶಿವರಾಜು, ಚಂದ್ರಶೇಖರ್, ಗೋವಿಂದ, ಸಿ.ಎಲ್. ಮಧು ಸೂದನ್, ಮೋಹನಾರಾಧ್ಯ, ಕೆ. ಮಹೇಶ್, ನರಸಿಂಹರಾಜು, ನಬೀಪಟೇಲ್, ಮಾರುತಿ ಪವನ್, ಮಮತಾ, ರಮ್ಯ, ಚಾಲಕರಾದ ಗೌತಮ್, ಶಿವಕುಮಾರ್ ಭಾಗವಹಿಸಿದ್ದರು.

Translate »