ಮೈಸೂರು ಅರಮನೆ ಮುಂದೆ ಯೋಗ ಸರಪಳಿಯಲ್ಲಿ ಸಾವಿರಾರು ಮಂದಿ ಭಾಗಿ
ಮೈಸೂರು

ಮೈಸೂರು ಅರಮನೆ ಮುಂದೆ ಯೋಗ ಸರಪಳಿಯಲ್ಲಿ ಸಾವಿರಾರು ಮಂದಿ ಭಾಗಿ

October 1, 2022

ಮೈಸೂರು, ಸೆ.30(ಎಂಟಿವೈ)- ನಾಡಹಬ್ಬ ದಸರಾ ಅಂಗವಾಗಿ ಯೋಗ ದಸರಾ ಉಪ ಸಮಿತಿಯು ಶುಕ್ರವಾರ ಮೈಸೂರಿನ ಅರಮನೆ ಮುಂಭಾಗ ಆಯೋಜಿಸಿದ್ದ ಯೋಗ ಸರಪಳಿ ಕಾರ್ಯಕ್ರಮದಲ್ಲಿ ಸಾವಿರಾರು ಯೋಗಪಟುಗಳು ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಯೋಗ ದಸರಾ ಉಪಸಮಿತಿಯ ಐದನೇ ದಿನದ ಕಾರ್ಯ ಕ್ರಮದಲ್ಲಿ ಯೋಗಪಟುಗಳು ಒಬ್ಬರನ್ನೊಬ್ಬರು ಕೈ ಹಿಡಿದು ಯೋಗ ಸರಪಳಿಯಲ್ಲಿ ಯೋಗಾಸನ ಪ್ರದರ್ಶಿಸಿದರು. ಮೂರು ಪ್ರಮುಖ ವಿಭಾಗದಲ್ಲಿ ಯೋಗ ಸರಪಳಿ ನಡೆಸಲಾಯಿತು. ತ್ರಿಕೋನಾಕಾರದಲ್ಲಿ ಯೋಗ ಪ್ರದರ್ಶನ, ಕುಳಿತುಕೊಂಡು ಮಾಡುವ ಯೋಗಾಸನ ಹಾಗೂ ಒಬ್ಬರನ್ನೊಬ್ಬರ ಕೈ ಹಿಡಿದು ಮಾಡುವ ಯೋಗ ಪ್ರದರ್ಶಿಸಲಾಯಿತು. 45 ನಿಮಿಷ ನಡೆದ ಯೋಗ ಸರಪಳಿಯಲ್ಲಿ ನಿಂತಿರುವ ಭಂಗಿಯಲ್ಲಿ 8 ಆಸನ, ಕುಳಿತುಕೊಂಡು ಮಾಡುವ 2 ಆಸನವನ್ನು ಪ್ರದರ್ಶಿಸಿದರು.

ಇದಕ್ಕೂ ಮುನ್ನ ಸಂಸದ ಪ್ರತಾಪ ಸಿಂಹ ಯೋಗ ಸರಪಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತರಾಗಿ ರಲು ಯೋಗ ಮಹತ್ವದ ಪಾತ್ರವಹಿಸುತ್ತದೆ. ದಸರಾ ಮಹೋ ತ್ಸವದಲ್ಲಿ ಯೋಗ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬರುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನವಾದ ಜೂ.21ರಂದು ಒಂದೇ ದಿನಕ್ಕೆ ಸೀಮಿತವಾಗದೇ ಪ್ರತಿದಿನವೂ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆ ಮೂಲಕ ಯೋಗವನ್ನು ದೈನಂದಿನ ಜೀವನದ ಒಂದು ಭಾಗವಾಗಿದೆ ಎಂದರು.

ಜಿಎಸ್‍ಎಸ್ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ ಮಾತನಾಡಿ, ಯೋಗ ಕಾರ್ಯಕ್ರಮವನ್ನು 2015ರಿಂದ ನಡೆಸಲಾಗುತ್ತಿದೆ. ಮತ್ತಷ್ಟು ಪ್ರಚಾರ ಮಾಡುವ ಮೂಲಕ ಯೋಗಾಭ್ಯಾಸ ಮಾಡುವವರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಮೈಸೂರಲ್ಲಿ ಯೋಗ ಕಲಿಸಲು ಹೆಚ್ಚು ಯೋಗ ಶಾಲೆಗಳನ್ನು ತೆರೆಯುವ ಅಗತ್ಯವಿದೆ. ಮೈಸೂರಿನ ಪ್ರತಿ ಶಾಲೆಯಲ್ಲಿ ಯೋಗ ಕಲಿಸಲು ಕ್ರಮಕೈಗೊಳ್ಳÀಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳಾದ ಡಾ.ಪುಷ್ಪ, ದಸರಾ ಯೋಗಾ ಉಪಸಮಿತಿ ಉಪ ವಿಶೇಷಾಧಿಕಾರಿ ಸೀಮಂತಿನಿ, ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷರಾದ ಈಶ್ವರ್, ಯೋಗೇಶ್ ಕುಮಾರ್, ಕೆ.ವೈ.ಮಂಜು, ಅರುಣ್‍ಕುಮಾರ್, ಯೋಗ ಸಂಸ್ಥೆಗಳ ಮುಖ್ಯಸ್ಥರಾದ ಗಣೇಶ್‍ಕುಮಾರ್, ಜಲೇಂದ್ರಕುಮಾರ್, ಶಶಿ ಕುಮಾರ್, ಬಿ.ಪಿ.ಮೂರ್ತಿ, ರಮೇಶ್ ಕುಮಾರ್, ವಿರೂಪಾಕ್ಷ ಬೆಳವಾಡಿ, ಕೆ.ವೈ.ಮಂಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »