ರಾಜ್ಯದಲ್ಲಿ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆ ಆರಂಭ ಸಾವಿರಾರು ಮಂದಿ ಸಾಥ್
ಮೈಸೂರು

ರಾಜ್ಯದಲ್ಲಿ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆ ಆರಂಭ ಸಾವಿರಾರು ಮಂದಿ ಸಾಥ್

October 1, 2022

ಗುಂಡ್ಲುಪೇಟೆ, ಸೆ.30-ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್‍ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಗುಂಡ್ಲುಪೇಟೆಯಿಂದ ಶುಕ್ರವಾರ ಬೆಳಗ್ಗೆ ರಾಜ್ಯದಲ್ಲಿ ಆರಂಭವಾಗಿದ್ದು, ಈ ಯಾತ್ರೆ ಯಲ್ಲಿ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಅಭೂತಪೂರ್ವ ಬೆಂಬಲ ನೀಡಿದ್ದಾರೆ.

ಗುಂಡ್ಲುಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗವಿರುವ ಮೈದಾನದಲ್ಲಿ ಬಹಿರಂಗ ಸಭೆ ನಡೆಸಿದ ನಂತರ ಬೆಳಗ್ಗೆ 10.30ರಲ್ಲಿ ಆರಂಭ ವಾದ ಯಾತ್ರೆ ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿತು. ರಾಹುಲ್ ಗಾಂಧಿಯವರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಶಾಸಕರಾದ ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ್, ಕೆ.ಜೆ. ಜಾರ್ಜ್, ಹೆಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಸೇರಿದಂತೆ ನೂರಾರು ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದರು.

ದಾರಿಯುದ್ದಕ್ಕೂ ಆತಿಥ್ಯ: ಪಾದಯಾತ್ರೆ ಆರಂಭದ ಸ್ಥಳದಿಂದ ಅರ್ಧ ಕಿ.ಮೀ ದೂರ ಕ್ರಮಿಸುತ್ತಿದ್ದಂತೆ ಹೆದ್ದಾರಿಯ ಎರಡೂ ಬದಿಗಳಲ್ಲಿ ಪಕ್ಷದ ಸ್ಥಳೀಯ ಮುಖಂಡರು ಎಳನೀರು, ತಂಪು ಪಾನೀಯ, ಮಜ್ಜಿಗೆ, ಬ್ರೆಡ್, ಬಿಸ್ಕೇಟ್, ಬಾಟಲಿ ನೀರು ವ್ಯವಸ್ಥೆ ಮಾಡಿ ಬಿಸಿಲಿನಲ್ಲಿ ನಡೆದು ಬಂದ ಪಾದಯಾತ್ರಿಗಳ ದಣಿವು ನೀಗಿಸಿದರು.

ಕಲಾ ತಂಡಗಳ ಮೆರಗು: ಕಂಸಾಳೆ, ವೀರಗಾಸೆ, ವೀರಭದ್ರ ಕುಣಿತ, ಗೊರವ ಕುಣಿತ, ಬುಡಕಟ್ಟು ಹಾಡಿ ಜನರ ನೃತ್ಯ, ಡೋಲು ಸೇರಿದಂತೆ ಇನ್ನಿತರ ವಿವಿಧ ಬಗೆಯ ಕಲಾ ತಂಡಗಳು ಪಾದಯಾತ್ರೆಯ ಮೆರಗು ಹೆಚ್ಚಿಸಿದವು. ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ವೇದಿಕೆ ಮುಂಭಾಗ ನೃತ್ಯ ಪ್ರದರ್ಶಿಸಿ ಗಮನ ಸೆಳೆದವು.

ಫ್ಲೆಕ್ಸ್, ಬ್ಯಾನರ್ ರಂಗು: ರಾಹುಲ್ ಗಾಂಧಿ ಬಂಡೀಪುರ ಮಾರ್ಗವಾಗಿ ರಾಜ್ಯ ಪ್ರವೇಶಿಸುವ ಮಾರ್ಗ ಮಧ್ಯೆ ಹಂಗಳ ಗ್ರಾಮದಿಂದ ಅಳವಡಿಸಿದ್ದ ಫ್ಲೆಕ್ಸ್, ಬಂಟಿಂಗ್, ಬ್ಯಾನರ್, ಪಕ್ಷದ ಧ್ವಜಗಳು ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲೂ ರಾರಾಜಿಸುತ್ತಿದ್ದವು. ಸುಮಾರು 20 ಕಿ.ಮೀ. ಅಧಿಕ ದೂರ ಫ್ಲೆಕ್ಸ್, ಬ್ಯಾನರ್‍ಗಳನ್ನು ಅಳವಡಿಸಲಾಗಿತ್ತು. ಅಲ್ಲಲ್ಲಿ ಪಕ್ಷದ ನಾಯಕರ ಬೃಹತ್ ಪ್ಲೆಕ್ಸ್‍ಗಳು ಗಮನ ಸೆಳೆದವು.

ಮೊಳಗಿದ ಘೋಷಣೆ: ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಕಾರ್ಯಕರ್ತರು, ಅಭಿಮಾನಿಗಳು `ಮುಂದಿನ ಪ್ರಧಾನಿ ರಾಹುಲ್ ಗಾಂಧಿ’ ಘೋಷಣೆ ಮೊಳಗಿಸಿದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರವೂ ಘೋಷಣೆಗಳು ಕೇಳಿಬಂದವು.
ಇದಕ್ಕೂ ಮುನ್ನ ರಾಹುಲ್ ಗಾಂಧಿ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕ ದಂಡೇ ಬಂಡೀಪುರ ಕೆಕ್ಕನಹಳ್ಳ ಚೆಕ್‍ಪೋಸ್ಟ್‍ಗೆ ತೆರಳಿ, ಸ್ವಾಗತಿಸಿತು. ಈ ವೇಳೆ ಡಾ. ಹೆಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ, ವೀರಪ್ಪ ಮೊಯಿಲಿ, ಕೆ.ಜೆ.ಜಾರ್ಜ್ ಸೇರಿದಂತೆ ಹತ್ತು ಹಲವು ನಾಯಕರು ಹಾಜರಿದ್ದರು. ಸ್ವಾಗತದ ನಂತರ ರಾಹುಲ್ ಗಾಂಧಿ ಹಾಗೂ ಮುಖಂಡರು ಬಂಡೀಪುರ ಬಳಿಯ ವನಸಿರಿ ಖಾಸಗಿ ರೆಸಾರ್ಟ್‍ನಲ್ಲಿ ಉಪಹಾರ ಸೇವಿಸಿದರು.

ನಂತರ ಗುಂಡ್ಲುಪೇಟೆಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಅಂಬೇಡ್ಕರ್ ಭವನದ ಮುಂಭಾಗದ ವೇದಿಕೆಯ ಬಳಿ ಡಿ.ಕೆ.ಶಿವಕುಮಾರ್, ಇತರೆ ಮುಖಂಡರು ಸ್ವಾಗತಿಸಿ, ವೇದಿಕೆಗೆ ಕರೆದೊಯ್ದರು.

240 ಮಂದಿಗೆ ವೇದಿಕೆಯಲ್ಲಿ ಆಸನ ವ್ಯವಸ್ಥೆ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದ ಬೃಹತ್ ವೇದಿಕೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಪ್ರತಿಷಕ್ಷ ನಾಯಕ ಹರಿಪ್ರಸಾದ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ರಾಜ್ಯ ಇನ್ನಿತರ ಪ್ರಮುಖ ನಾಯಕರು, ಮುಖಂಡರು ಸೇರಿ 240 ಮಂದಿಗೆ ವೇದಿಕೆಯಲ್ಲಿ ಸ್ಥಾನ ಕಲ್ಪಿಸಲಾಗಿತ್ತು.
ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ನಗಾರಿ ಬಾರಿಸಿ ಗಿಡಕ್ಕೆ ನೀರೆರೆಯುವ ಮೂಲಕ ಬಹಿರಂಗ ಸಭೆಯನ್ನು ಉದ್ಘಾಟಿಸಿದರು. ಸಭೆಯ ನಂತರ ಪಾದಯಾತ್ರೆ ಆರಂಭವಾಯಿತು.

ತಿಂಡಿ-ಊಟದ ವ್ಯವಸ್ಥೆ: ಪಾದಯಾತ್ರೆಗೆ ಬೆಳಗ್ಗೆಯೇ ಆಗಮಿಸಿದ ಜನರಿಗೆ ಪಟ್ಟಣದ ಜೆಎಸ್‍ಎಸ್ ಕಲಾ ಮಂದಿರ, ಸೋಮೇಶ್ವರ ವಿದ್ಯಾರ್ಥಿನಿಲಯ, ಕನಕ ಭವನ ಸೇರಿದಂತೆ ಹಲವು ಕಡೆ ಸುಮಾರು 10 ಸಾವಿರ ಮಂದಿಗೆ ಉಪ್ಪಿಟ್ಟು-ಕೇಸರಿಬಾತ್ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಪಟ್ಟಣದ ಹೊರ ವಲಯದ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯದ ಬಳಿ ನಿರ್ಮಾಣ ಮಾಡಿದ್ದ ಬೃಹತ್ ಟೆಂಟ್‍ನಲ್ಲಿ ಸುಮಾರು 30 ಸಾವಿರ ಮಂದಿಗೆ ವೆಜ್ ಪಲಾವ್, ಅನ್ನ-ಸಾಂಬಾರ್, ಜಿಲೇಬಿ, ಹಪ್ಪಳ, ಉಪ್ಪಿನಕಾಯಿ ಹಾಗೂ ವಿವಿಐಪಿಗಳಿಗೆ ಇದರ ಜೊತೆ ಶಾವಿಗೆ ಪಾಯಸ, ಮುದ್ದೆ ಊಟ ವ್ಯವಸ್ಥೆ ಮಾಡಲಾಗಿತ್ತು.

ಸಂಚಾರ ವ್ಯತ್ಯಯ: ಭಾರತ ಐಕ್ಯತೆ ಪಾದಯಾತ್ರೆ ಹಿನ್ನೆಲೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಾಲೂಕಿನಾದ್ಯಂತ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಈ ಕಾರಣದಿಂದ ಕೇರಳ ಮತ್ತು ತಮಿಳುನಾಡಿನಿಂದ ಬರುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಿದವು. ಜೊತೆಗೆ ಗ್ರಾಮೀಣ ಪ್ರದೇಶಕ್ಕೆ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು. ಪಾದಯಾತ್ರೆ ಮುಂದೆ ಸಾಗಿದ ನಂತರ ಪಟ್ಟಣ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡಿದರು.

ಕಂಟೈನರ್ ವಾಸ್ತವ್ಯ: ರಾಹುಲ್ ಗಾಂಧಿ ಸೇರಿದಂತೆ ಪಾದಯಾತ್ರೆಯಲ್ಲಿ ಭಾಗವಹಿಸುವ ಗಣ್ಯ ಪಾದಯಾತ್ರಿಗಳಿಗೆ ರಾತ್ರಿ ವಾಸ್ತವ್ಯಕ್ಕೆ ಕಂಟೈನರ್ ಬಳಸಲಾಗುತ್ತಿದೆ. ಕೇರಳ ಮತ್ತು ತಮಿಳುನಾಡಿನಿಂದ ಗುಂಡ್ಲುಪೇಟೆ ಮೂಲಕ ಸಾಗಿದ 60 ಕಂಟೈನರ್‍ಗಳು ಸರತಿ ಸಾಲಿನಲ್ಲಿ ಬೇಗೂರಿನಲ್ಲಿ ವಾಸ್ತವ್ಯಕ್ಕೆ ನಿಗದಿಪಡಿಸಿದ ಜಾಗದಲ್ಲಿ ನಿಂತವು. ರಾಹುಲ್ ಗಾಂಧಿ ಅವರೊಂದಿಗೆ ಪ್ರತಿ ದಿನ ಹೆಜ್ಜೆ ಹಾಕುವ ಗಣ್ಯ ಪಾದಯಾತ್ರಿಗಳು ರಾತ್ರಿ ಈ ಕಂಟೈನರ್‍ಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಬೇಗೂರು ತಲುಪಿದ ಯಾತ್ರೆ: ಶುಕ್ರವಾರ ಮಧ್ಯಾಹ್ನದ ಭೋಜನ ವಿರಾಮದ ನಂತರ ಸಂಜೆ 4.20ಕ್ಕೆ ಮತ್ತೆ ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ ಹಾಗೂ ಇತರರು, ರಾತ್ರಿ 7.15ಕ್ಕೆ ಬೇಗೂರು ತಲುಪಿದರು. ಶನಿವಾರ ಬೆಳಗ್ಗೆ 6.30ಕ್ಕೆ ಮತ್ತೆ ಯಾತ್ರೆ ಹೊರಡಲಿದ್ದು, ನಂಜನಗೂಡು ಗಡಿ ಕಳಲೆ ಗೇಟ್‍ನತ್ತ ಸಾಗಲಿದೆ. ಮೈಸೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲಿದ್ದಾರೆ.

Translate »