ಅಂತಾರಾಷ್ಟ್ರೀಯ ಕಾಫಿ ದಿನ ಆಚರಣೆ
ಕೊಡಗು

ಅಂತಾರಾಷ್ಟ್ರೀಯ ಕಾಫಿ ದಿನ ಆಚರಣೆ

October 2, 2022

ಮಡಿಕೇರಿ,ಅ.1- ಕೊಡಗು ಮಹಿಳಾ ಕಾಫಿ ಜಾಗೃತಿ ವೇದಿಕೆ ವತಿಯಿಂದ ಅಂತಾ ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಯಿತು. ಕಾರಗುಂದ ಗ್ರಾಮದ ಕುಮಾರೀಸ್ ಕಿಚನ್ ಸಭಾಂಗಣದಲ್ಲಿ ನಡೆದ ಅಂತರ್‍ರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮವನ್ನು ಕಾಫಿ ಬೆಳೆಗಾರ, ಉದ್ಯಮಿ ತೇಲಪಂಡ ಪ್ರದೀಪ್ ಪೂವಯ್ಯ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ತೇಲಪಂಡ ಪ್ರದೀಪ್ ಪೂವಯ್ಯ, ಮಾನವನ ದೈಹಿಕ ಆರೋಗ್ಯ ಕಾಪಾಡಲು ನಿಗದಿತ ಪ್ರಮಾಣದ ಕಾಫಿ ಸೇವನೆ ಅತ್ಯಗತ್ಯವಾಗಿದೆ. ಯುರೋಪಿಯನ್ ದೇಶಗಳಲ್ಲಿ ಕಾಫಿ ಸೇವಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅವರು ದೈಹಿಕವಾಗಿ ಆರೋಗ್ಯವಂತರಾಗಿದ್ದಾರೆ ಎಂದು ಹೇಳಿದರು.
ರಾಜ್ಯಗಳಲ್ಲಿ ಹಸಿರು ಪರಿಸರದ ನೆರಳಲ್ಲಿ ಕಾಫಿ ಬೆಳೆಸಲಾಗುತ್ತಿದೆ. ಈ ಕಾಫಿಯ ಗುಣಮಟ್ಟ ಉತ್ಕøಷ್ಟತೆಯೊಂದಿಗೆ ಉತ್ತಮ ಸ್ವಾದವನ್ನು ಹೊಂದಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿ ಸಿದರು. ಕಾಫಿ ಬೆಳೆಯುವ ಸಂದರ್ಭ ಹೆಚ್ಚಿನ ರಾಸಾಯನಿಕಗಳನ್ನು ಬಳಸದೇ ಸುಸ್ಥಿರವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದ ಪ್ರದೀಪ್ ಪೂವಯ್ಯ, ಕಾಫಿ ಬೀಜ ಮತ್ತು ಕಾಫಿಯನ್ನು ಯಾವುದೇ ಕಾರಣಕ್ಕೂ ಗೊಬ್ಬರದ ಚೀಲಗಳಲ್ಲಿ ಸಂಗ್ರಹಿಸಬಾರದು. ಇದರಿಂದ ಕಾಫಿ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಬೆಳೆಗಾರರು ಇದನ್ನು ಗಮನದಲ್ಲಿಟ್ಟು ಕೊಳ್ಳುವಂತೆ ಸಲಹೆ ನೀಡಿದರು.

ಇದೀಗ ಸರಕಾರ 10 ಹೆಚ್.ಪಿ.ವರೆಗಿನ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ನೀಡಲು ಮುಂದಾಗಿದೆ. ಇದರಿಂದಾಗಿ ಮಲೆನಾಡು ಭಾಗದ ಕಾಫಿ ಬೆಳೆಗಾರರಿಗೆ ಪ್ರಯೋಜನ ವಾಗಲಿದೆ. 10 ಹೆಚ್.ಪಿ.ವರೆಗೆ ಪಂಪ್‍ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದಲ್ಲಿ ಅದು 20 ಹೆಚ್.ಪಿ.ವರೆಗೆ ಬಳಕೆಯಾಗುವ ಮೋಟಾರ್ ಯಂತ್ರದ ಆರ್ಥಿಕ ವೆಚ್ಚವನ್ನು ಕಡಿತಗೊಳಿಸುತ್ತದೆ ಎಂದು ಹೇಳಿದರು. ಮಹಿಳಾ ಕಾಫಿ ಬೆಳೆಗಾರರು ಸರಕಾರದ ಸಬ್ಸಿಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಲ ಯೋಜನೆ, ಕಾಫಿ ಮಂಡಳಿಯ ವಿವಿಧ ಸೌಲಭ್ಯಗಳು ಹಾಗೂ ಗುಣಮಟ್ಟದ ಕಾಫಿ ಉತ್ಪಾದನೆಯ ಬಗ್ಗೆ ಜಾಗೃತಿ ಮೂಡಿಸ ಬೇಕೆಂದು ಕಿವಿಮಾತು ಹೇಳಿದರು.

ಕಾಫಿ ಬೆಳೆಗೆ ಬಳಸಬೇಕಿರುವ ಗೊಬ್ಬರಗಳು, ಕಾಫಿ ಉದುರುವುದನ್ನು ತಡೆಗಟ್ಟುವ ವಿಧಾನ, ಕ್ರಿಮಿ ಹಾಗೂ ಕೀಟ ನಾಶಕಗಳ ಬಳಕೆಯ ಪ್ರಮಾಣ, ತೋಟ ನಿರ್ವಹಣೆ, ಕಾಫಿ ಔಟ್‍ಟರ್ನ್ ಮತ್ತಿತರ ವಿಚಾರಗಳ ಕುರಿತು ವೇದಿಕೆ ಸದಸ್ಯರ ಪ್ರಶ್ನೆಗಳಿಗೆ ಪ್ರದೀಪ್ ಪೂವಯ್ಯ ಉತ್ತರಿಸಿದರು.
ಇದೇ ಸಂದರ್ಭ ವಿಶ್ವ ಕಾಫಿ ದಿನಾಚರಣೆ ಅಂಗವಾಗಿ ಕೊಡಗು ಮಹಿಳಾ ಕಾಫಿ ಜಾಗೃತಿ ವೇದಿಕೆ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಗುಣಮಟ್ಟದ ಸ್ವಾದಿಷ್ಟ ಕಾಫಿ ಯನ್ನು ವಿತರಿಸಲಾಯಿತು. ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ಕಾಫಿ ಸೇವಿಸಿ ಸ್ವಾದದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಉಪಸ್ಥಿತರಿದ್ದರು. ಸದಸ್ಯೆ ಶರಿನ್ ನಂಜಪ್ಪ ಪ್ರಾರ್ಥಿಸಿದರೆ, ಖಜಾಂಚಿ ಕುಮಾರಿ ಕುಂಞಪ್ಪ, ಕಾರ್ಯಕ್ರಮ ಮೇಲ್ವಿಚಾರಣೆ ನಡೆಸಿದರು. ಸದಸ್ಯೆ ಅನಿತಾ ಗಣಪತಿ ವಂದಿಸಿದರು. ಕಾರ್ಯದರ್ಶಿ ಅನಿತಾನಂದ ಇತರರಿದ್ದರು.

Translate »