ಪರಿಷತ್‍ಗೆ ಕಲಾವಿದರ ಕೋಟಾದಡಿ ಅವಕಾಶಕ್ಕೆ ಬಿ.ಪಿ.ಮಂಜುನಾಥ್ ಮನವಿ
ಮೈಸೂರು

ಪರಿಷತ್‍ಗೆ ಕಲಾವಿದರ ಕೋಟಾದಡಿ ಅವಕಾಶಕ್ಕೆ ಬಿ.ಪಿ.ಮಂಜುನಾಥ್ ಮನವಿ

June 14, 2020

ನಾಲ್ಕು ದಶಕದಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷನಿಷ್ಠೆ ಮೆರೆದ ದಾಖಲೆ
ಮೈಸೂರು,ಜೂ.13(ಎಸ್‍ಬಿಡಿ)-ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ. ಮಂಜುನಾಥ್, ವಿಧಾನ ಪರಿಷತ್ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಾಲ್ಕು ದಶಕಗಳಿಂದ ವಿವಿಧ ಹಂತಗಳಲ್ಲಿ ಪಕ್ಷ ಸಂಘಟನೆಗೆ ಶ್ರಮಿ ಸುತ್ತಿದ್ದು, ವಿಧಾನ ಪರಿಷತ್‍ಗೆ ನಾಮನಿರ್ದೇಶನ ಮಾಡಲು ಕಲಾವಿದರ ಕ್ಷೇತ್ರದಿಂದ ನನ್ನನ್ನು ಪರಿಗಣಿಸುವ ಮೂಲಕ ಮತ್ತಷ್ಟು ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಘಟನಾತ್ಮಕ ಹೋರಾಟ, ಜನಪರ ಕಾರ್ಯ ಕ್ರಮಗಳಿಂದ ಪ್ರೇರೇಪಿತನಾಗಿ, ಬಿ.ಎಲ್.ಸಂತೋಷ್, ದಿನೇಶ್ ಕಾಮತ್, ವೆಂಕಟರಾಮ್, ಪಾಠಕ್ ಅವರ ಮಾರ್ಗದರ್ಶನದಲ್ಲಿ ಸಂಘ ಪರಿವಾರ ಹಾಗೂ ಪಕ್ಷದ ಸೇವೆಯಲ್ಲಿ ಸಕ್ರಿಯನಾಗಿದ್ದೇನೆ. ವಾರ್ಡ್ ಅಧ್ಯಕ್ಷ, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ, ನಗರ ಯುವ ಮೋರ್ಚಾ ಅಧ್ಯಕ್ಷ, ನಗರ ಪ್ರಧಾನ ಕಾರ್ಯದರ್ಶಿ, ನಗರ ಜಿಲ್ಲಾ ಅಧ್ಯಕ್ಷ, ರಾಜ್ಯ ಸಾಂಸ್ಕøತಿಕ ವೇದಿಕೆ ಸಂಚಾಲಕ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಪ್ರಸ್ತುತ ರಾಷ್ಟ್ರೀಯ ಪರಿಷತ್ ಸದಸ್ಯನಾಗಿ ನಿಷ್ಠೆಯಿಂದ ಜವಾಬ್ದಾರಿ ಮುಂದುವರೆಸಿದ್ದೇನೆ. 7 ಲೋಕಸಭಾ ಚುನಾವಣೆ ಹಾಗೂ ಈವರೆಗಿನ ವಿಧಾನಸಭಾ ಚುನಾವಣೆಗಳಲ್ಲಿ ದುಡಿದಿದ್ದೇನೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರ ಬಿಜೆಪಿಗೆ ಪ್ರತಿಷ್ಠೆಯ ಕಣ. ಪಕ್ಷ ಸಂಘಟನೆ ಯೊಂದಿಗೆ ಕಾರ್ಯಕರ್ತರನ್ನು ಹುರಿದುಂಬಿಸಿ, ಚುನಾವಣೆಗೆ ಸಜ್ಜುಗೊಳಿಸುವುದು ಸವಾಲಿನ ವಿಷಯ. ಈ ಕ್ಷೇತ್ರದಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಜಯಗಳಿಸಿದೆ (ಮಾರುತಿರಾವ್ ಪವಾರ್). ಮತ್ತೆ ಬಿಜೆಪಿ ವಿಜಯ ಪತಾಕೆ ಹಾರಿಸಬೇಕೆಂಬ ನಿಟ್ಟಿನಲ್ಲಿ ನಾನೂ ಸೇರಿದಂತೆ ಎಲ್ಲಾ ಕಾರ್ಯಕರ್ತರ ಆಶಯವಾಗಿದೆ. 2002ರ ಉಪಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗಮನಾರ್ಹ ಮತ ಗಳಿಸಿದ್ದೆ. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸೇರಿದಂತೆ ಇಡೀ ಸರ್ಕಾರವೇ ನರಸಿಂಹರಾಜ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರೂ ತಾವು ಸ್ಪರ್ಧಿಸಿ, ಬಿಜೆಪಿಯ ಘನತೆ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಸತ್ವ ಪರೀಕ್ಷೆಯಾಗಿದ್ದ 2013ರ ಚುನಾವಣೆಯಲ್ಲೂ ಸ್ಪರ್ಧಿಸಿ, ಪಕ್ಷವನ್ನು ಮತ್ತಷ್ಟು ಸಂಘಟಿಸಿದೆ. ಗೆಲ್ಲುತ್ತೇನೆಂಬ ಭ್ರಮೆ ಯಿಂದ ಸ್ಪರ್ಧಿಸಲಿಲ್ಲ. ಆ ಮೂಲಕ ಪಕ್ಷಕ್ಕೆ ಶಕ್ತಿ ತುಂಬಲು ಪ್ರಯತ್ನಿಸಿದೆ.

ಸುಸಂಸ್ಕøತ ಕುಟುಂಬದ ಹಿನ್ನೆಲೆಯವನಾಗಿ ಸಂಗೀತ ಕ್ಷೇತ್ರದಲ್ಲೂ 5 ದಶಕಗಳ ಸೇವೆ ಸಲ್ಲಿಸಿದ್ದೇನೆ. ಆರ್ಕೆಸ್ಟ್ರಾ ತಂಡ ಕಟ್ಟಿ, ರಾಜ್ಯದೆಲ್ಲೆಡೆ ಕಲಾಪರಂಪರೆ ಸಾರುವ ಪ್ರಯತ್ನ ಮಾಡಿದ್ದೇನೆ. ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿದ್ದು, ಬಹುತೇಕರು ಕಲಾಸಾಧಕ ರಾಗಿದ್ದಾರೆ. ರಾಜ್ಯ ಸಾಂಸ್ಕøತಿಕ ವೇದಿಕೆ ಸಂಚಾಲಕನಾಗಿಯೂ ನೂರಾರು ಕಲಾವಿದರನ್ನು ಪಕ್ಷಕ್ಕೆ ಕರೆತಂದಿದ್ದೇನೆ. ಹೀಗೆ ಕುಟುಂಬದ ಹಿತಾಸಕ್ತಿ ಬದಿಗೊತ್ತಿ, ದೌರ್ಜನ್ಯ, ಆರ್ಥಿಕ ನಷ್ಟವನ್ನು ಸಹಿಸಿಕೊಂಡು, ಪಕ್ಷ ಸಂಘಟನೆಗೆ ಅವಿರತವಾಗಿ ಶ್ರಮಿಸುತ್ತಿದ್ದೇನೆ. 2014ರ ಲೋಕಸಭಾ ಚುನಾವಣೆಯಲ್ಲಿ ಹೊಸಮುಖವಾಗಿದ್ದ ಪ್ರತಾಪ್‍ಸಿಂಹ ಅವರಿಗೆ ಕ್ಷೇತ್ರದ 45 ಸಾವಿರ ಮತ ದೊರಕುವಲ್ಲಿ ನನ್ನ ಪಾತ್ರವೂ ಇದೆ. ವಯೋಮಾನದಲ್ಲಿ 60 ವರ್ಷ ದಾಟಿದ್ದೇನೆ. ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿಮೆ ಮುಂದುವರೆಸಿದ್ದೇನೆ. ಕಲಾವಿದರ ಕೋಟಾದಡಿ ನನ್ನನ್ನು ಪರಿಗಣಿಸಿದರೆ ಆರ್ಕೆಸ್ಟ್ರಾ ಕಲಾವಿದನಿಗೆ ಅವಕಾಶ ನೀಡಿದ ಹೆಗ್ಗಳಿಕೆ ಪಕ್ಷಕ್ಕೆ ಸಲ್ಲುತ್ತದೆ ಎಂದು ಬಿ.ಪಿ.ಮಂಜುನಾಥ್ ಒತ್ತಾಯಿಸಿದ್ದಾರೆ.

Translate »