ಮೈಸೂರು: ಚತುರತೆ ಹಾಗೂ ಕ್ಷೀಪ್ರಗತಿಯ ವಿಶ್ಲೇಷಣಾ ಮನೋಭಾವ ಆಪೇಕ್ಷಿಸುವ ಆಟವೆಂದೇ ಹೆಸರು ಮಾಡಿರುವ `ಬ್ರಿಡ್ಜ್ ಗೇಮ್’ನ `ರಾಷ್ಟ್ರ ಮಟ್ಟದ ಅಂತರ್ ರಾಜ್ಯ ಬ್ರಿಡ್ಜ್ ಚಾಂಪಿಯನ್‍ಷಿಪ್’ ಪಂದ್ಯಾವಳಿ ಸೆ.5ರಿಂದ 9ರವರೆಗೆ ಮೈಸೂರಿನಲ್ಲಿ ನಡೆಯಲಿದೆ ಎಂದು ಮೈಸೂರು ಜಿಲ್ಲಾ ಬ್ರಿಡ್ಜ್ ಅಸೋಸಿಯೇಷನ್‍ನ ಅಧ್ಯಕ್ಷ ಹೆಚ್.ಎನ್.ಜಯಪಾಲ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಡ್ಜ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಬ್ರಿಡ್ಜ್ ಅಸೋಸಿಯೇಷನ್ ಹಾಗೂ ಮೈಸೂರು ಜಿಲ್ಲಾ ಬ್ರಿಡ್ಜ್ ಅಸೋಸಿಯೇಷನ್‍ನ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‍ನಲ್ಲಿ ಪಂದ್ಯಾವಳಿ ನಡೆಯಲಿದ್ದು, ಸುಮಾರು 250 ಬ್ರಿಡ್ಜ್ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕಿರಿಯ ಮತ್ತು ಅತೀ ಕಿರಿಯ ತಂಡ, ಅಂತರರಾಜ್ಯ ತಂಡ, ಜೋಡಿ ಸ್ಪರ್ಧೆ, ಕಿರಿಯ ಮತ್ತು ಅತೀ ಕಿರಿಯ ಜೋಡಿ ಸ್ಪರ್ಧೆ, ಮಹಿಳಾ ಜೋಡಿ ಸ್ಪರ್ಧೆ, ಮಿಶ್ರ ಜೋಡಿ ಸ್ಪರ್ಧೆ ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ. ವಿಜೇತರಾದವರು 2019ರಲ್ಲಿ ನಡೆಯುವ `ಬರ್ಮುಡಾ ಬೌಲ್’ ಮತ್ತು ಇನ್ನಿತರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಲು ನಡೆಯುವ ಆಯ್ಕೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗುತ್ತಾರೆ ಎಂದರು.
ಸಂಘದ ಉಪಾಧ್ಯಕ್ಷ ಹಿರಣ್ಣಯ್ಯ ಮಾತನಾಡಿ, `ಬ್ರಿಡ್ಜ್ ಗೇಮ್’ ಚದುರಂಗ ಆಟದಂತೆ ಚತುರತೆ ಆಪೇಕ್ಷಿಸುತ್ತದೆ. ಇದು ಇಸ್ಪೀಟ್ ಎಲೆಗಳಿಂದ (ಜೋಕರ್ ಹೊರತುಪಡಿಸಿ 52 ಎಲೆಗಳು) ಆಡುವ ಆಟವಾಗಿದ್ದು, ಈ ಆಟಕ್ಕೆ ಕನಿಷ್ಠ ನಾಲ್ವರು ಅಗತ್ಯವಾಗಿ ಬೇಕಾಗುತ್ತಾರೆ. ಈ ಆಟವು ಭಾರತೀಯ ಒಲಂಪಿಕ್ ಅಸೋಸಿಯೇಷನ್‍ನಿಂದ ಇನ್ನಿತರ ಆಟಗಳಂತೆ ಮಾನ್ಯತೆ ಪಡೆದಿದೆ. ಜೊತೆಗೆ ಇದೀಗ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷಿಯನ್ ಗೇಮ್ಸ್‍ನಲ್ಲಿ ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಮತ್ತು ಕಾಲೇಜು ಪಠ್ಯಕ್ರಮದಲ್ಲಿ ಬ್ರಿಡ್ಜ್ ಆಟವನ್ನು ಸೇರ್ಪಡೆಗೊಳಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ ಎಂದು ವಿವರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಉಮಾಪತಿ ಹಿರೆವಡೆಯರ್, ಸಂಘದ ಪುಟ್ಟಬಸಪ್ಪ, ಪ್ರದೀಪ್ ಕುಲಕರ್ಣಿ ಮತ್ತಿತರರು ಗೋಷ್ಠಿಯಲ್ಲಿದ್ದರು.