ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ

September 2, 2018

ಮೈಸೂರು: ಮೈಸೂರಿನ ಜೆ.ಪಿ.ನಗರ ಇ-ಬ್ಲಾಕ್ 10ನೇ ಮುಖ್ಯ ರಸ್ತೆಯಲ್ಲಿ ಮುಡಾಗೆ ಸೇರಿರುವ ಜಾಗವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ನಗರಾಭಿವೃದ್ಧಿ ಸಚಿವರು, ವಿರೋಧ ಪಕ್ಷದ ನಾಯಕರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ನಿವಾಸಿ ಗಳು ಜೆ.ಪಿ.ನಗರ 10ನೇ ಮುಖ್ಯ ರಸ್ತೆಯ ಸರ್ವೆ ನಂ.23/1ರಲ್ಲಿ 1 ಎಕರೆ 12 ಗುಂಟೆ ಮತ್ತು ಸರ್ವೆ ನಂ.23/2ರಲ್ಲಿ 4 ಎಕರೆ 20 ಗುಂಟೆ ಜಮೀನನ್ನು ಸಿಐಟಿಬಿ (ಹಾಲಿ ಮುಡಾ) ವಶಪಡಿಸಿಕೊಂಡಿದ್ದು, ಈ ಜಾಗವನ್ನು ಬಳಸದೇ ಅಥವಾ ಮಾರಾಟ ಮಾಡದೇ ಹಾಗೇ ಇದೆ. ಆರ್‍ಟಿಸಿಯಲ್ಲಿ ಕೂಡ `ಸಿಐಟಿಬಿಗೆ ಅಕ್ವೇರ್’ ಎಂದೇ ನಮೂದಾಗಿದೆ. ಆದರೆ, ಕೆಲವು ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ, ಈ ಜಾಗಕ್ಕೆ ತಂತಿ ಬೇಲಿ ನಿರ್ಮಿಸಿ ಮಾರಾಟ ಮಾಡುತ್ತಿದ್ದು, ಮತ್ತೆ ಕೆಲವರು ಕಟ್ಟಡ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಭಾವಿ ವ್ಯಕ್ತಿಗಳು ಮುಡಾ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿರುವುದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದ್ದು, ತಕ್ಷಣವೇ ಮುಡಾ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಆಸ್ತಿ ರಕ್ಷಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Translate »