ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬಿಎಸ್‍ಪಿ ಪ್ರತಿಭಟನೆ
ಮೈಸೂರು

ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬಿಎಸ್‍ಪಿ ಪ್ರತಿಭಟನೆ

July 16, 2020

ಮೈಸೂರು, ಜು.15(ಆರ್‍ಕೆಬಿ)- ಮುಂಬೈನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮನೆ ಮೇಲೆ ನಡೆದ ದುಷ್ಕರ್ಮಿ ಗಳ ದಾಂಧಲೆ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸಿರುವುದು, ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾ ಚಾರ ಆಡಳಿತ ಮತ್ತು ಆನ್‍ಲೈನ್ ಶಿಕ್ಷಣ ನೀತಿ ಖಂಡಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಿವಾಸದಲ್ಲಿ ದಾಂಧಲೆ ನಡೆಸಿ ವಸ್ತುಗಳನ್ನು ನಾಶಪಡಿಸಿದ ದುಷ್ಕರ್ಮಿ ಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಕೋವಿಡ್-19 ನಿಯಂತ್ರಣಕ್ಕೆ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಔಷಧಿ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದ ಪ್ರತಿಭಟನಾ ಕಾರರು, ಈ ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು, ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಆನ್‍ಲೈನ್ ಶಿಕ್ಷಣ ಜಾರಿ ಮೂಲಕ ಶ್ರೀಮಂತ ಖಾಸಗಿ ಶಾಲಾ-ಕಾಲೇಜುಗಳ ಉದ್ಧಾರಕ್ಕೆ ನಿಂತಿದೆ. ಇದು ಬಡ ವಿದ್ಯಾರ್ಥಿಗಳನ್ನು ವಂಚಿಸುವ ನೀತಿ. ಕೂಡಲೇ ಆನ್‍ಲೈನ್ ಶಿಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನು ದಿನೇ ದಿನೆ ಹೆಚ್ಚಳ ಮಾಡಿ ಬಡವರು, ರೈತರಿಗೆ ತೊಂದರೆ ನೀಡಿದೆ. ಕೂಡಲೇ ಪೆಟ್ರೋಲ್, ಡೀಸೆಲ್ ದರ ಇಳಿಸ ಬೇಕು ಎಂದು ಆಗ್ರಹಿಸಿದರು. ಬಿಎಸ್‍ಪಿ ಜಿಲ್ಲಾಧ್ಯಕ್ಷ ಬಿ.ಆರ್. ಪುಟ್ಟಸ್ವಾಮಿ, ನಗರಾಧ್ಯಕ್ಷ ಸಿ.ಶ್ರೀನಿವಾಸಪ್ರಸಾದ್, ಪದಾ ಧಿಕಾರಿಗಳಾದ ಶಿವಮಹದೇವ,, ಜೈಶಂಕರ್ ಶ್ಯಾಂ, ಜೆ.ಶಿವಕುಮಾರ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

Translate »