ವಿಜಯನಗರ, ವಿವಿ.ಪುರಂ ಠಾಣೆಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಮೈಸೂರು

ವಿಜಯನಗರ, ವಿವಿ.ಪುರಂ ಠಾಣೆಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

July 16, 2020

ಮೈಸೂರು, ಜು. 15(ಆರ್‍ಕೆ)- ಮೈಸೂರಿನ ವಿವಿಪುರಂ ಹಾಗೂ ವಿಜಯನಗರ ಠಾಣೆಗಳ ತಲಾ ಓರ್ವ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸೋಂಕು ತಗುಲಿರುವುದರಿಂದ ಅವರ ಪ್ರಾಥಮಿಕ ಸಂಪರ್ಕಿತ ಪೊಲೀಸ್ ಸಿಬ್ಬಂದಿ ಗಳನ್ನು ಹೋಂ ಕ್ವಾರಂಟೈನ್‍ನಲ್ಲಿರಿಸಲಾಗಿದ್ದು, ಸೋಂಕಿತ ಸಿಬ್ಬಂದಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕು ಹರಡುವುದನ್ನು ತಪ್ಪಿಸಲು ವಿವಿಪುರಂ ಮತ್ತು ವಿಜಯನಗರ ಠಾಣೆಗಳಿಗೆ ಡಿಸ್‍ಇನ್‍ಫೆಕ್ಟೆಂಟ್ ದ್ರಾವಣ ಸಿಂಪಡಿಸಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಮುಂಜಾಗ್ರತೆಯಾಗಿ ಎರಡೂ ಠಾಣೆಗಳ ಗೇಟ್‍ಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ, ತೀವ್ರ ಗಂಭೀರ ಸ್ವರೂಪದ ದೂರುಗಳನ್ನು ದ್ವಾರದ ಬಳಿ ಇರುವ ಕಿಯೋಸ್ಕ್‍ನಲ್ಲೇ ಸ್ವೀಕರಿಸಲಾಗುತ್ತಿದೆ. ಸಿಬ್ಬಂದಿಗೆ ಮಾತ್ರ ಮಾಸ್ಕ್, ಹ್ಯಾಂಡ್‍ಗ್ಲೌಸ್ ಧರಿಸಿ ಠಾಣೆಗಳಿಗೆ ಪ್ರವೇಶಿಸುವಂತೆ ತಿಳಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸಲು ನಿರ್ದೇಶಿಸಲಾಗಿದೆ.

ಮೈಸೂರಿನಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿದ್ದಂ ತೆಯೇ ಪೊಲೀಸ್ ಸಿಬ್ಬಂದಿಗೂ ಸೋಂಕು ಹರಡುತ್ತಿರುವುದು ಕಂಡುಬರುತ್ತಿದೆ. ಇತ್ತೀಚೆಗಷ್ಟೇ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಸಿಎ)ಯಲ್ಲಿ ಬುನಾದಿ ತರಬೇತಿ ಪಡೆಯುತ್ತಿರುವ ಡಿವೈಎಸ್ಪಿಯೊಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿತ್ತಲ್ಲದೆ, ಹಿರಿಯ ಐಪಿಎಸ್ ಅಧಿಕಾರಿಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೂ ಸೋಂಕು ತಗುಲಿರುವುದನ್ನು ಇಲ್ಲಿ ಸ್ಮರಿಸಬಹುದು.

Translate »