ಆರ್‍ಆರ್ ನಗರ, ಶಿರಾದಲ್ಲಿ ಬಿಜೆಪಿಗೆ ಬಂಪರ್ ಗೆಲುವು
ಮೈಸೂರು

ಆರ್‍ಆರ್ ನಗರ, ಶಿರಾದಲ್ಲಿ ಬಿಜೆಪಿಗೆ ಬಂಪರ್ ಗೆಲುವು

November 11, 2020

ಬೆಂಗಳೂರು, ನ.10(ಕೆಎಂಶಿ)-ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರ ಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಈ ಫಲಿತಾಂಶಗಳು ಭಾರೀ ಮುಖಭಂಗವುಂಟುಮಾಡಿದೆ.

ರಾಜರಾಜೇಶ್ವರಿನಗರದಲ್ಲಿ ಮುನಿರತ್ನ ನಾಯ್ಡು 3ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರೆ, ಶಿರಾ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಸಿ.ಎಂ.ರಾಜೇಶ್‍ಗೌಡ ಮೊದಲ ಬಾರಿ ವಿಧಾನಸಭೆಯ ಮೆಟ್ಟಿಲು ಹತ್ತಿದ್ದಾರೆ. ಉಪಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎರಡೂ ಕ್ಷೇತ್ರಗಳಲ್ಲೂ ಮಂಗಳವಾರ ಬೆಳಿಗ್ಗೆ ಮತ ಎಣಿಕೆ ಆರಂಭದ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಬಿಜೆಪಿ ಅಭ್ಯರ್ಥಿಗಳೇ ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‍ಗಿಂತ ಮುನ್ನಡೆ ಸಾಧಿಸಿ, ಬಹಳ ಅಂತರದಿಂದ ಗೆಲುವು ಸಾಧಿಸಿದರು. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ನಾಯ್ಡು 1 ಲಕ್ಷದ 25 ಸಾವಿರದ 734 ಮತ ಪಡೆದು, ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‍ನ ಕುಸುಮಾ ಅವರನ್ನು 57936 ಮತಗಳ ಅಂತರದಿಂದ ಸೋಲಿಸಿದರು.

ಕುಸುಮಾ ಅವರಿಗೆ 67798 ಮತಗಳು ಲಭ್ಯವಾದರೆ, ಜೆಡಿಎಸ್‍ನ ಕೃಷ್ಣಮೂರ್ತಿ ಅವರಿಗೆ 10251 ಮತಗಳು ಲಭ್ಯವಾಗಿವೆ.
ಇನ್ನು ಶಿರಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ಗೌಡ 74522 ಮತಗಳನ್ನು ಪಡೆದು, ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‍ನ ಟಿ.ಬಿ. ಜಯ ಚಂದ್ರ ಅವರನ್ನು 12949 ಮತಗಳಿಂದ ಪರಾಭವಗೊಳಿಸಿ, ಜಯಶೀಲರಾದರು.

ಜಯಚಂದ್ರ ಅವರಿಗೆ 61573 ಮತಗಳು ಲಭ್ಯವಾದರೆ, ಜೆಡಿಎಸ್‍ನ ಅಮ್ಮಾಜಮ್ಮ ಅವ ರಿಗೆ 35982 ಮತಗಳು ಲಭ್ಯವಾಗಿವೆ. ತನ್ನ ದಲ್ಲದ ಎರಡೂ ಕ್ಷೇತ್ರಗಳನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಂಡು ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರ್‍ಆರ್ ನಗರ ಕ್ಷೇತ್ರದಲ್ಲಿ ಮುನಿರತ್ನ ನಾಯ್ಡು ಕಾಂಗ್ರೆಸ್‍ನಿಂದ ಆಯ್ಕೆ ಗೊಂಡಿದ್ದರು. ಶಿರಾದಲ್ಲಿ ಜೆಡಿಎಸ್‍ನ ಸತ್ಯನಾರಾಯಣ ಆಯ್ಕೆಗೊಂಡಿದ್ದರು. ಅವರ ಅಕಾಲಿಕ ಮರಣದಿಂದ ಇಲ್ಲಿ ಉಪಚುನಾವಣೆ ನಡೆದಿತ್ತು.
ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ತನ್ನ 4 ಕ್ಷೇತ್ರ ಕಳೆದುಕೊಂಡರೆ, ಕಾಂಗ್ರೆಸ್ 14 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಕೆಪಿ ಸಿಸಿ ಅಧ್ಯಕ್ಷರಾದ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು. ಎರಡೂ ಕ್ಷೇತ್ರ ಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಪಕ್ಷದ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ ಅವರ ನಾಯಕತ್ವಕ್ಕೆ ಗೆಲುವು ಲಭ್ಯವಾಗಿಲ್ಲ. ಇನ್ನು ಜೆಡಿಎಸ್‍ನ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗಂತೂ ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲೂ ಸೋಲಿನ ಕಹಿಯನ್ನೇ ಕಾಣುತ್ತಿದ್ದಾರೆ. ಜೆಡಿಎಸ್ ಬಲವಾಗಿ ಬೇರೂರಿರುವ ಕ್ಷೇತ್ರಗಳಲ್ಲೇ ಕೇಸರಿ ಬಾವುಟ ಹಾರಿಸಿದೆ. ಮಂಡ್ಯದ ಕೆ.ಆರ್. ಪೇಟೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯು ಜಯಭೇರಿ ಭಾರಿಸಿ, ಜೆಡಿಎಸ್‍ನ ನೆಲೆಯಲ್ಲೇ ಕೇಸರಿ ಬಾವುಟ ಹಾರಿಸಿದರು. ಇದೀಗ ಶಿರಾ ಕ್ಷೇತ್ರದಲ್ಲಿ ಎಂದೂ ಬಿಜೆಪಿ ಗೆಲುವು ಕಂಡಿರಲಿಲ್ಲ. ಗೆಲುವಿನ ಸಮೀಪಕ್ಕೂ ಬಂದಿರಲಿಲ್ಲ. ಆದರೆ ಈ ಬಾರಿ ಜೆಡಿಎಸ್‍ನಿಂದ ಈ ಕ್ಷೇತ್ರವನ್ನು ಬಿಜೆಪಿ ಕಸಿದುಕೊಂಡಿದೆ.

ಇದರ ಗೆಲುವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ್ ಕಾರಣರಾಗಿದ್ದಾರೆ. ಈ ಹಿಂದೆ ಕೆ.ಆರ್. ಪೇಟೆಯಲ್ಲೂ ವಿಜಯೇಂದ್ರ ತನ್ನ ಚಾಣಾಕ್ಷತನವನ್ನು ಮೆರೆದಿದ್ದರು. ಅದನ್ನೇ ಶಿರಾದಲ್ಲೇ ಮುಂದುವರೆಸಿ, ಪಕ್ಷಕ್ಕೆ ಗೆಲುವು ತಂದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಶಿರಾ ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ಹರಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳ ಭರವಸೆ, ಈ ಗೆಲುವಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲದೆ ಬಿಜೆಪಿ ಈ ಬಾರಿ ಸಣ್ಣಪುಟ್ಟ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶಿರಾದಲ್ಲಿ ಪಕ್ಷದ ಕೇಸರಿ ಬಾವುಟ ಹಾರಿಸಲು ಕಾರಣವಾಯಿತು.

ವಿಜಯೇಂದ್ರ ಎಫೆಕ್ಟ್: ಜೆಡಿಎಸ್ ಮತ್ತು ಕಾಂಗ್ರೆಸ್ ಇಲ್ಲಿ ಪರಂಪರಾಗತ ಎದು ರಾಳಿಗಳಾಗಿದ್ದವು. ಉಪಚುನಾವಣೆ ಆರಂಭದಲ್ಲಿಯೇ ಬಿಜೆಪಿ ಕ್ಷೇತ್ರದ ಮೇಲೆ ತೀವ್ರ ಗಮನವಿರಿಸಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದರು. ಅಧಿಕಾರ ಮತ್ತು ಸಂಪನ್ಮೂಲವನ್ನು ಬಿಜೆಪಿ ಸಮರ್ಥವಾಗಿ ಬಳಸಿ ಕೊಂಡು ಗೆಲುವಿನ ದಡ ಸೇರಿದೆ. ಶಿರಾದ ಮದಲೂರು ಕೆರೆಗೆ ನೀರು ಹರಿಸುವುದಾಗಿ ಬಿಜೆಪಿ ಭರವಸೆ ನೀಡಿದ್ದು ಆ ಪಕ್ಷ ಆ ಭಾಗದಲ್ಲಿ ಹೆಚ್ಚು ಮತ ಸೆಳೆಯಲು ಕಾರಣ ವಾಯಿತು. ಸಣ್ಣ ಪುಟ್ಟ ಜಾತಿಗಳ ಸಭೆ ನಡೆಸಿದ ಬಿಜೆಪಿ ಆ ಪಕ್ಷಕ್ಕೆ ಮತಗಳನ್ನು ಖಾತ್ರಿ ಮಾಡಿಕೊಂಡಿತು. ಜಾತಿವಾರು ಸಭೆಗಳಿಗೆ ಆದ್ಯತೆ ನೀಡಿತು. ಮದ್ದಕನಹಳ್ಳಿಯಲ್ಲಿ ಕಲ್ಲುಗಣಿ ಗಾರಿಕೆ ಬಂಡೆ ವಿಚಾರದಲ್ಲಿ ಜಯಚಂದ್ರ ಅವರು ನಡೆದುಕೊಂಡ ರೀತಿ ಭೋವಿ ಸಮುದಾಯದ ಮತಗಳು ಬಿಜೆಪಿಯತ್ತ ತಿರುಗಿದವು. ಪರಿಶಿಷ್ಟರ ಎಡಗೈ ಮತಗಳನ್ನು ಬಿಜೆಪಿ ಒಟ್ಟುಗೂಡಿಸಿತು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅಭಿವೃದ್ಧಿಯ ನಿರೀಕ್ಷೆಗಳನ್ನು ಸಹ ಬಿಜೆಪಿ ಹೆಚ್ಚು ಮಾಡಿದೆ. ಪ್ರಮುಖವಾಗಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ ಆ ಸಮುದಾಯವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈ ರೀತಿಯಲ್ಲಿ ತನ್ನ ಪಾಲಿಗೆ ಬಂದ ಎಲ್ಲ ಅವಕಾಶ ಗಳನ್ನು ಸಮರ್ಥವಾಗಿ ಬಿಜೆಪಿ ಬಳಸಿಕೊಂಡು ಗೆಲುವಿನ ನಗೆ ಬೀರಿದೆ.
¸

Translate »