ಮೈಸೂರು,ನ.12(ಎಂಟಿವೈ)-ಕೋವಿಡ್-19 ಹಿನ್ನೆಲೆ ಯಲ್ಲಿ ಕರ್ನಾಟಕ-ತಮಿಳುನಾಡು ನಡುವೆ ಸ್ಥಗಿತ ಗೊಂಡಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರ 8 ತಿಂಗಳ ಬಳಿಕ ಗುರುವಾರದಿಂದ ಪುನರಾರಂಭಗೊಂಡಿದೆ. ಮೈಸೂರಿನಿಂದ ಇಂದು ಕೊಯಮತ್ತೂರಿಗೆ 9, ಊಟಿಗೆ 6 ಮತ್ತು ತಿರುಪ್ಪೂರಿಗೆ ಒಂದು ಬಸ್ ಸಂಚರಿಸಿದ್ದು, ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಇನ್ನೂ ಹೆಚ್ಚಿನ ಬಸ್‍ಗಳನ್ನು ಓಡಿಸಲು ಕೆಎಸ್‍ಆರ್‍ಟಿಸಿ ತೀರ್ಮಾನಿ ಸಿದೆ. ನಾಳೆ (ಶುಕ್ರವಾರ)ಯಿಂದ ಕೊಯಮತ್ತೂರು, ತಿರುಪ್ಪೂರು, ಈರೋಡ್, ಚೆನ್ನೈ, ಊಟಿಗೆ ಸುವರ್ಣ ಸಾರಿಗೆ, ಓಲ್ವೋ ಹಾಗೂ ರಾಜಹಂಸ ಬಸ್‍ಗಳು ಸಂಚರಿಸಲಿವೆ. ಈ ಹಿಂದೆ ಮೈಸೂರಿನಿಂದ ತಮಿಳು ನಾಡಿನ ವಿವಿಧ ನಗರಗಳಿಗೆ 40 ಕೆಎಸ್‍ಆರ್‍ಟಿಸಿ ಬಸ್ ಗಳು ಸಂಚರಿಸುತ್ತಿದ್ದವು. ಹಾಗೂ ತಮಿಳುನಾಡು ಸಾರಿಗೆಯ 30 ಬಸ್‍ಗಳು ಮೈಸೂರಿಗೆ ಬರುತ್ತಿದ್ದವು. ಕೊರೊನಾ ಅನ್‍ಲಾಕ್ ಬಳಿಕವೂ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದ ಕಾರಣ ತಮಿಳುನಾಡು ಸರ್ಕಾರ ಬಸ್ ಸಂಚಾರಕ್ಕೆ ಅನುಮತಿ ನೀಡಿರಲಿಲ್ಲ. ತಮಿಳುನಾಡಿಗೆ ರೈಲು ಸಂಚಾ ರವೂ ಸ್ಥಗಿತಗೊಂಡಿತ್ತು. ಆದರೆ ಇತ್ತೀಚೆಗೆ ಮೈಸೂರು -ಚೆನ್ನೈ ನಡುವೆ ವಿಮಾನ ಹಾರಾಟ ಮಾತ್ರ ಇತ್ತು.
ಬಸ್ ಸಂಚಾರ ಸ್ಥಗಿತದಿಂದಾಗಿ ಉಭಯ ರಾಜ್ಯಗಳ ಬಡ ಮತ್ತು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ಹಲವಾರು ಕುಟುಂಬಗಳು ಊಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಲೆಸಿರುವುದರಿಂದ ಅವರನ್ನು ಭೇಟಿಯಾ ಗಲು ಅಥವಾ ಅವರು ತಮ್ಮ ಊರಿಗೆ ಬರಲು ಸಾಧ್ಯವಾಗದೇ ಸಂಕಷ್ಟಕ್ಕೀಡಾಗಿದ್ದರು. ಈ ನಡುವೆ ಕೇರಳದ ಮಣ ಪುರಂನಿಂದ ಮೈಸೂರಿಗೆ ಬರುತ್ತಿದ್ದ ಕೇರಳಾ ಸಾರಿಗೆ ಬಸ್ ತಮಿಳುನಾಡಿನ ಗೂಡನೂರು ಮಾರ್ಗ ಸಂಚರಿಸುತ್ತಿ ದ್ದರಿಂದ ಹಲವರು ಈ ಬಸ್‍ನಲ್ಲಿ ಗೂಡನೂರಿಗೆ ತೆರಳಿ ಅಲ್ಲಿಂದ ತಮಿಳುನಾಡು ಸಾರಿಗೆ ಬಸ್‍ಗಳ ಮೂಲಕ ಊಟಿಗೆ ತೆರಳುತ್ತಿದ್ದರು. ಇದೀಗ ಮೈಸೂರಿನಿಂದ ತಮಿಳುನಾಡಿಗೆ ಸಾರಿಗೆ ಬಸ್ ಸಂಚಾರ ಆರಂಭಿ ಸಿರುವುದು ಜನಸಾಮಾನ್ಯರಲ್ಲಿ ಸಂತಸವನ್ನುಂಟು ಮಾಡಿದೆ.