ಇಂದು ಉಪ ಸಮರ
ಮೈಸೂರು

ಇಂದು ಉಪ ಸಮರ

November 10, 2020

ಬೆಂಗಳೂರು, ನ. 9(ಕೆಎಂಶಿ)-ಬಿ.ಎಸ್.ಯಡಿಯೂರಪ್ಪ ತಮ್ಮ ಕುರ್ಚಿ ಭದ್ರತೆ ರಾಜರಾಜೇಶ್ವರಿನಗರ, ಶಿರಾ ವಿಧಾನಸಭಾ ಕ್ಷೇತ್ರ ಗಳ ಉಪಚುನಾವಣೆಯ ಫಲಿತಾಂಶದ ಮೇಲೆ ನಿಂತಿದೆ.

ಉಪಚುನಾವಣೆಯ ಫಲಿತಾಂಶ, ಯಾವುದೇ ರಾಜಕೀಯ ಪಕ್ಷಗಳ ಮೇಲೆ ಪರಿ ಣಾಮ ಬೀರುವುದಿಲ್ಲ. ಆದರೆ ನಾಯಕತ್ವದ ಬಗ್ಗೆ ಬಿಜೆಪಿಯಲ್ಲೇ ಅಪಸ್ವರಗಳು ಕೇಳಿ ಬಂದಿರುವುದರಿಂದ ಯಡಿಯೂರಪ್ಪ ಅವ ರಿಗೆ ಈ ಎರಡೂ ಕ್ಷೇತ್ರ ಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿ ಇದೆ. ಆರ್‍ಆರ್ ನಗರ, ಶಿರಾ ಜೊತೆಗೆ ನಾಲ್ಕು ವಿಧಾನಪರಿಷತ್ ಕ್ಷೇತ್ರ ಗಳ ಮತ ಎಣಿಕೆ ನಾಳೆ ನಡೆಯಲಿದೆ. ಮಧ್ಯಾಹ್ನದ ವೇಳೆಗೆ ವಿಧಾನಸಭಾ ಕ್ಷೇತ್ರಗಳ ಫಲಿ ತಾಂಶ ಹೊರ ಬಿದ್ದರೆ, ಪರಿಷತ್ ಕ್ಷೇತ್ರಗಳಿಗೆ ನಡೆದಿರುವ ಚುನಾ ವಣೆಗಳ ಫಲಿತಾಂಶ ತಡರಾತ್ರಿ ವೇಳೆಗೆ ಹೊರಬೀಳುವ ಸಾಧ್ಯತೆ ಇದೆ. ಎರಡೂ ಫಲಿತಾಂಶಗಳಿಗೂ ಬಿಜೆಪಿ ಅದರಲ್ಲೂ ಯಡಿ ಯೂರಪ್ಪನವರು ಮಹತ್ವ ನೀಡಿದ್ದಾರೆ.

ಅಷ್ಟೇ ಅಲ್ಲದೆ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕಾರ್ಯತಂತ್ರ ರೂಪಿಸಿ, ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಚುನಾವಣಾ ಉಸ್ತುವಾರಿ ಹೊಣೆ ವಹಿಸಿದ್ದರು. ವಿಧಾನಸಭೆ ಚುನಾವಣಾ ಫಲಿ ತಾಂಶದಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ತಮ್ಮ ನಾಯಕತ್ವ ಉಳಿಸಿಕೊಂಡು ದೆಹಲಿಯ ವರಿಷ್ಠರಿಗೆ ತಮ್ಮ ಬಲ ತೋರಿಸಲು ಗೆಲುವು ಅನಿವಾರ್ಯವಾಗಿದೆ. ಇದೇ ಉದ್ದೇಶದಿಂದಲೇ ಅವರು ಉಪಚುನಾವಣೆಯನ್ನು ಗಂಭೀರವಾಗಿ ತೆಗೆದು ಕೊಂಡಿದ್ದರು. ಮತ್ತೊಂದೆಡೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಚುನಾವಣೆಯಾದ ಡಿ.ಕೆ.ಶಿವಕುಮಾರ್‍ಗೂ ಉಪಚುನಾವಣೆ ಪ್ರತಿಷ್ಠೆಯಾಗಿದೆ. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯ ಮಂತ್ರಿಯಾಗಲು ಹೊರಟಿರುವ ಶಿವ ಕುಮಾರ್‍ಗೆ ಉಪಚುನಾವಣೆಯಲ್ಲಿ ಗೆದ್ದರೆ, ಆನೆ ಬಲ ಬಂದಂತಾಗುತ್ತದೆ. ಅಷ್ಟೇ ಅಲ್ಲ ಪಕ್ಷದ ಮೇಲೆ ಹಿಡಿತವನ್ನು ಸಾಧಿಸಬಹುದಾಗಿದೆ. ಇದೇ ಉದ್ದೇಶಕ್ಕಾಗಿ ಶಿವಕುಮಾರ್, ಯಡಿಯೂರಪ್ಪನವರು ತೆಗೆದುಕೊಂಡಂತೆ ಚುನಾ ವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಎಲ್ಲಾ ನಾಯಕರನ್ನು ಜೊತೆಗಿರಿಸಿಕೊಂಡು, ಸರ್ಕಾರದ ವಿರುದ್ಧ ಬೆಂಕಿ ಉಂಡೆಯನ್ನು ಉದುರಿಸಿ, ಚುನಾವಣೆಯಲ್ಲಿ ಮತ ಕೇಳಿದ್ದರು. ಮತ್ತೊಂದೆಡೆ ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿದೆ ಎಂಬುದನ್ನು ಸಾಬೀತುಪಡಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕನಿಷ್ಠ ಶಿರಾ ಕ್ಷೇತ್ರವನ್ನಾದರೂ ಉಳಿಸಿ ಕೊಳ್ಳಬೇಕಾಗಿದೆ. ಇದಕ್ಕಾಗಿ ಅವರು ಸಹ ಹೋರಾಟ ನಡೆಸಿದ್ದರು. ಈ ಮೂವರು ನಾಯಕರಲ್ಲಿ ಯಾರಿಗೆ ಮತದಾರರು ಮನ್ನಣೆ ನೀಡಲಿದ್ದಾರೆ ಎಂಬುದು ನಾಳೆ ಮಧ್ಯಾಹ್ನದ ವೇಳೆಗೆ ಬಹಿರಂಗಗೊಳ್ಳಲಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಈ ಚುನಾ ವಣೆಯ ಫಲಿತಾಂಶದಿಂದ ಬಲಾಬಲ ವ್ಯತ್ಯಾಸವಾಗಲಿದೆ. ಎಲ್ಲದಕ್ಕೂ ಮಿಗಿಲಾಗಿ ಪರಿಷತ್ತಿನಲ್ಲಿ ಆಡಳಿತ ಪಕ್ಷ ಮೇಲುಗೈ ಸಾಧಿಸಲು ನಾಲ್ಕು ಸ್ಥಾನಗಳಲ್ಲಿ ಕನಿಷ್ಠ ಮೂರು ಸ್ಥಾನಗಳ ನ್ನಾದರೂ ಗೆಲ್ಲಲೇಬೇಕಾಗಿದೆ. ಒಟ್ಟಾರೆ ಉಪ ಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಷ್ಟೇ ಅಲ್ಲದೆ, ಬಿ.ವೈ. ವಿಜಯೇಂದ್ರ ಅವರಿಗೂ ಇದು ಸವಾಲಾಗಿದೆ. ಒಂದು ವೇಳೆ ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದರೆ, ಅದರ ಶ್ರೇಯಸ್ಸು ವಿಜಯೇಂದ್ರ ಅವರಿಗೆ ಸಲ್ಲುತ್ತದೆ. ಅವರು ಚುನಾವಣಾ ಸಂದರ್ಭದಲ್ಲಿ ಶಿರಾದಲ್ಲೇ ಉಳಿದು, ಪಕ್ಷದ ಗೆಲುವಿಗೆ ಹೋರಾಟ ಮಾಡಿದ್ದಾರೆ.

Translate »