ಆರ್‍ಆರ್ ನಗರದಲ್ಲಿ ಮುನಿರತ್ನ, ಶಿರಾಗೆ ರಾಜೇಶ್‍ಗೌಡ ಬಿಜೆಪಿ ಅಭ್ಯರ್ಥಿ
ಮೈಸೂರು

ಆರ್‍ಆರ್ ನಗರದಲ್ಲಿ ಮುನಿರತ್ನ, ಶಿರಾಗೆ ರಾಜೇಶ್‍ಗೌಡ ಬಿಜೆಪಿ ಅಭ್ಯರ್ಥಿ

October 14, 2020

ಬೆಂಗಳೂರು, ಅ. 13- ವಿಧಾನಸಭೆ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ, ತನ್ನ ಅಭ್ಯರ್ಥಿ ಗಳ ಹೆಸರನ್ನು ಘೋಷಣೆ ಮಾಡಿದೆ. ಆರ್‍ಆರ್ ನಗರ (ರಾಜ ರಾಜೇಶ್ವರಿನಗರ)ಕ್ಕೆ ಮುನಿರತ್ನ ಹಾಗೂ ಶಿರಾ ಕ್ಷೇತ್ರಕ್ಕೆ ರಾಜೇಶ್ ಗೌಡರಿಗೆ ಟಿಕೆಟ್ ಘೋಷಣೆ ಮಾಡಿದೆ. ಸುಪ್ರೀಂಕೋರ್ಟ್ ನಲ್ಲಿ ಮುನಿರತ್ನ ವಿರುದ್ಧದ ಚುನಾವಣೆಯಲ್ಲಿ ಅಕ್ರಮವೆಸಗಿ ಗೆಲುವು ಸಾಧಿಸಿದ ಪ್ರಕರಣ ಸಂಬಂಧ ಬಿಜೆಪಿ ಅಭ್ಯಥ್ರ್ಯಿ ತುಳಸಿ ಮುನಿರಾಜುಗೌಡ ಸಲ್ಲಿಸಿದ ಅರ್ಜಿ ವಜಾಗೊಂಡ ಬೆನ್ನಲ್ಲೇ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿ ಘೋಷಣೆ ಮಾಡಿದೆ. ಇತ್ತೀಚೆಗೆ ಬಿಜೆಪಿ ಸೇರಿದ್ದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಪುತ್ರ ಡಾ.ರಾಜೇಶ್‍ಗೌಡ ಅವರಿಗೆ ಶಿರಾದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ದೊರಕಿದೆ. ಹಾಗೆಯೇ ಆರ್.ಆರ್.ನಗರಕ್ಕೆ ಮುನಿರತ್ನಗೆ ಟಿಕೆಟ್ ನೀಡಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಇಂದು ಮುನಿರತ್ನ ನಾಮಪತ್ರ ಸಲ್ಲಿಕೆ: ನಾಳೆ (ಅ.14) ಬೆಳಗ್ಗೆ 11ಗಂಟೆಗೆ ಮುನಿರತ್ನ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಜೆಡಿಎಸ್‍ನಿಂದ ಕೃಷ್ಣಮೂರ್ತಿ ಕಣಕ್ಕೆ: ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ಜ್ಞಾನಭಾರತಿ ಘಟಕದ ಮುಖ್ಯಸ್ಥ ಕೃಷ್ಣಮೂರ್ತಿ ಹೆಸರನ್ನು ಅಂತಿಮಗೊಳಿಸಲಾಗಿದೆ. ಕಳೆದ ವಾರ ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್, ಆರ್‍ಆರ್ ನಗರ ಬ್ಲಾಕ್ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಮತ್ತು ಜ್ಞಾನ ಭಾರತಿ ಘಟಕದ ಮುಖ್ಯಸ್ಥ ಕೃಷ್ಣಮೂರ್ತಿ ಸೇರಿದಂತೆ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಅಂತಿಮವಾಗಿ ಆರ್‍ಆರ್ ನಗರಕ್ಕೆ ಕೃಷ್ಣಮೂರ್ತಿ ಹೆಸರು ಪ್ರಕಟಿಸಲಾಗಿದೆ. ಈಗಾಗಲೇ ಶಿರಾ ಕ್ಷೇತ್ರಕ್ಕೆ ದಿವಂಗತ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಲಾಗುತ್ತಿದೆ.

 

 

 

Translate »