ಕೇಂದ್ರದಲ್ಲಿ ಮತ್ತೆ ಎನ್‍ಡಿಎ ಅಧಿಕಾರಕ್ಕೆ ಸಿ ವೋಟರ್ ಸಮೀಕ್ಷೆ
ಮೈಸೂರು

ಕೇಂದ್ರದಲ್ಲಿ ಮತ್ತೆ ಎನ್‍ಡಿಎ ಅಧಿಕಾರಕ್ಕೆ ಸಿ ವೋಟರ್ ಸಮೀಕ್ಷೆ

October 5, 2018

ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಇದೆ. ಕೇಂದ್ರ ಹಾಗೂ ವಿಪಕ್ಷಗಳ ನಡುವೆ ಈಗಾಗಲೇ ಜಿದ್ದಾಜಿದ್ದಿ ತಾರಕಕ್ಕೇರುತ್ತಿದೆ. ಜನರಿಗೆ ಕೊಟ್ಟ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ ಎಂದು ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಹರಿ ಹಾಯುತ್ತಿವೆ. ಹಿಂದಿನ ಸರಕಾರ ಮಾಡಿದ ಪಾಪ ಕರ್ಮಗಳನ್ನು ತೊಳೆದು, ಹೊಸ ಮನ್ವಂತರ ಶುರು ಮಾಡಿದ್ದೇವೆಂದು ಮೋದಿ ಸರಕಾರ ಹೇಳಿಕೊಳ್ಳುತ್ತಿದೆ.

ಈ ನಡುವೆ ಮುಂದಿನ ಬಾರಿ ಜನರು ಯಾರಿಗೆ ಗದ್ದುಗೆ ಕೊಡುತ್ತಾರೆ ಎಂಬ ಲೆಕ್ಕಾಚಾರ ದಿನನಿತ್ಯ ನಡೆಯುತ್ತಲೇ ಇದೆ. ದೇಶದ ಅಗ್ರಗಣ್ಯ ಸಮೀಕ್ಷೆ ಸಂಸ್ಥೆಗಳ ಪೈಕಿ ಒಂದಾದ ಸಿ ವೋಟರ್‍ನ ಸಮೀಕ್ಷೆಯ ಪ್ರಕಾರ ಈಗ ಲೋಕಸಭೆ ಚುನಾವಣೆ ನಡೆದರೆ ಎನ್‍ಡಿಎ ಮೈತ್ರಿ ಕೂಟವೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಆದರೆ, ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳು ದಕ್ಕುತ್ತವೆ. ತೀರಾ ಅಲ್ಪ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಅದರ ಪ್ರಕಾರ ಎನ್‍ಡಿಎ 276, ಯುಪಿಎ 115 ಹಾಗೂ ಇತರರು 151 ಸ್ಥಾನ ಗಳಿಸಲಿದ್ದಾರೆ. 2014ರಲ್ಲಿ ಎನ್‍ಡಿಎ 334, ಯುಪಿಎ 60 ಹಾಗೂ ಇತರರು 151 ಸ್ಥಾನ ಗಳಿಸಿದರು. ಇವುಗಳಲ್ಲಿ ಈ ಬಾರಿ ಎನ್‍ಡಿಎ 58 ಸ್ಥಾನ ಕಳೆದುಕೊಂಡರೆ ಯುಪಿಎ 55 ಸ್ಥಾನ ಗಳಿಸಿಕೊಳ್ಳಲಿದೆ. ಪಕ್ಷೇತರರು ಯಥಾ ಪ್ರಕಾರ 151 ಸ್ಥಾನ ಗಳಿಸಲಿದ್ದಾರೆ. ಕರ್ನಾಟಕದಲ್ಲಿ 2014ರಲ್ಲಿ 17 ಸಂಸದರನ್ನು ಹೊಂದಿದ್ದ ಬಿಜೆಪಿ ಈ ಬಾರಿ ಅದಕ್ಕಿಂತಲೂ ಸ್ವಲ್ಪ ಹೆಚ್ಚು ಸ್ಥಾನ ಅಂದರೆ 18 ರಿಂದ 20 ಸ್ಥಾನ ಗೆಲ್ಲಬಹುದು, ಕಾಂಗ್ರೆಸ್ 7 ಹಾಗೂ ಜೆಡಿಎಸ್ 3 ಸ್ಥಾನ ಗಳಿಸಬಹುದು ಎಂದು ಈ ಸಮೀಕ್ಷೆ ಹೇಳಿದೆ. ಇದು ಈಗಿರುವ ಮೈತ್ರಿಕೂಟ ವ್ಯವಸ್ಥೆಯಲ್ಲೇ ಚುನಾವಣೆಗೆ ಸ್ಪರ್ಧಿಸಿದರೆ ಸಿಗಬಹುದಾದ ಫಲಿತಾಂಶವಾಗಿದೆ.

ಒಂದು ವೇಳೆ, ಕಾಂಗ್ರೆಸ್ ಉದ್ದೇಶಿಸಿರುವಂತೆ ಮಹಾಮೈತ್ರಿಕೂಟ ರಚನೆಯಾದರೆ ಎನ್‍ಡಿಎಗೆ ಅಧಿಕಾರ ಹಿಡಿಯುವ ಸಾಧ್ಯತೆ ಕ್ಷೀಣಿಸುತ್ತದಂತೆ. ಉತ್ತರ ಪ್ರದೇಶದಲ್ಲಿ ಬಹುತೇಕ ಸ್ವೀಪ್ ಮಾಡಿದ್ದ ಬಿಜೆಪಿಯ ವಿರುದ್ಧ ಎಸ್‍ಪಿ-ಬಿಎಸ್‍ಪಿ ಒಂದಾದರೆ ಬಹಳಷ್ಟು ಸೀಟುಗಳನ್ನು ಗೆಲ್ಲಲು ಸಾಧ್ಯವಿದೆ ಎನ್ನುತ್ತದೆ ಸಿವೋಟರ್ ಸಮೀಕ್ಷೆ. ಅಂಥ ಸಂದರ್ಭದಲ್ಲಿ ಬಿಜೆಪಿಗೆ ದಕ್ಕುವುದು ಗರಿಷ್ಠ 24 ಸ್ಥಾನ ಮಾತ್ರವಾಗುತ್ತದೆಯಂತೆ.

Translate »