ನಾಗರಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ
ಮೈಸೂರು

ನಾಗರಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ

October 28, 2021

ಮೈಸೂರು,ಅ.27(ಆರ್‍ಕೆಬಿ)-ಯುವಜನರು ಸ್ಥಳೀಯ ನಾಗರಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜವನ್ನು ಉತ್ತಮ ದಿಕ್ಕಿನೆಡೆಗೆ ಕೊಂಡೊ ಯ್ಯುವಂತೆ ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ.ಆರ್.ಶಿವಪ್ಪ ಕರೆ ನೀಡಿದ್ದಾರೆ.

ರೆಡ್‍ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಮೈಸೂರು ಜಿಲ್ಲಾ ಶಾಖೆಯು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬುಧ ವಾರ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಅರಿವು ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯುವ ಜನರು ಬೆಳೆಯುತ್ತಾ ಅವರ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುತ್ತದೆ. ಸ್ಥಳೀಯ ಸರ್ಕಾರದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮುಖ್ಯವಾಗುತ್ತದೆ. ನಾಗರಿಕ ಸೇವಾ ಸಂಸ್ಥೆಗಳ ಪಾತ್ರ ಸರ್ಕಾದ ಪಾತ್ರಕ್ಕಿಂತ ದೊಡ್ಡದು. ಹಾಗಾಗಿ, ಅದು ನಮ್ಮ ಕೆಲಸವಲ್ಲ ಎಂಬ ಭಾವನೆ ಬಿಟ್ಟು, ನಾಗರಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ನಾಗರಿಕ ಸೇವಾ ಸಂಸ್ಥೆಗಳು ಆಯಾ ಕಾಲ ಘಟ್ಟ ದಲ್ಲಿ ಬಹಳ ಸಂವೇದನಾಶೀಲ ಪಾತ್ರ ನಿರ್ವಹಿಸಿವೆ. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನಾಗರಿಕ ಸೇವಾ ಸಂಸ್ಥೆಗಳು ತೆಗೆದುಕೊಂಡ ನಿರ್ಧಾರಗಳು, ಅನುಷ್ಠಾನ ಗೊಳಿಸಿದ ಕಾರ್ಯಕ್ರಮಗಳು ಪರಿಣಾಮಕಾರಿಯಾಗು ತ್ತವೆ. ಪ್ರವಾಹ, ರಾಷ್ಟ್ರೀಯ ವಿಕೋಪ ಸಂದರ್ಭಗಳಲ್ಲಿ ಇಂತಹ ಸಂಸ್ಥೆಗಳು ಬಹಳಷ್ಟು ನೆರವಾಗಿವೆ ಎಂದು ಹೇಳಿದರು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜನರಿಂದ ನೆರವು ಪಡೆದು ಜನರಿಗೇ ನೀಡುತ್ತಾ ಬಂದಿದೆ. ಇನ್ನೊಬ್ಬರಿಗೆ ನೆರವಾಗುವ ಮನೋಭಾವದ ಜೊತೆಗೆ ಸಾಂಸ್ಥಿಕ ಜವಾ ಬ್ದಾರಿಯೂ ಬರಬೇಕು ಎಂದು ಯುವಜನರಿಗೆ ಕಿವಿ ಮಾತು ಹೇಳಿದರು. ರೆಡ್‍ಕ್ರಾಸ್ ಸಂಸ್ಥೆಯ ಮೈಸೂರು ಸಭಾಪತಿ ಡಾ.ಕೆ.ಬಿ.ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜು ಪ್ರಾಂಶುಪಾಲೆ ಪ್ರೊ.ಅನಿತ ವಿಮಲ ಬ್ರಾಗ್ಸ್ ಮುಖ್ಯ ಅತಿಥಿಯಾಗಿದ್ದರು. ಮೈಸೂರು ವಿವಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಂ.ಎಸ್.ಬಸವ ರಾಜ್, ಗೃಹ ರಕ್ಷಕ ದಳದ ನಿವೃತ್ತ ಉಪಸಮಾದೇಷ್ಠ ವಿ.ಪುರುಷೋತ್ತಮ್, ಯುವ ರೆಡ್‍ಕ್ರಾಸ್ ಘಟಕದ ಮೈಸೂರು ಜಿಲ್ಲಾ ಸಂಯೋಜಕ ಡಾ.ಕೆ.ಎಂ.ವೀರಯ್ಯ, ಕಾರ್ಯದರ್ಶಿ ಪ್ರೊ.ಎಂ.ಮಹದೇವಪ್ಪ, ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯ ಎಂ.ಎಸ್.ಶರತ್, ದಿವಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »