ಅಭ್ಯರ್ಥಿಗಳ ಚಪ್ಪಲಿ, ಶೂ ಹೊರಗಿರಿಸಿ ಮೈಸೂರಲ್ಲಿ ಕಟ್ಟೆಚ್ಚರದಿಂದ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆ
ಮೈಸೂರು

ಅಭ್ಯರ್ಥಿಗಳ ಚಪ್ಪಲಿ, ಶೂ ಹೊರಗಿರಿಸಿ ಮೈಸೂರಲ್ಲಿ ಕಟ್ಟೆಚ್ಚರದಿಂದ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆ

October 4, 2021

ಮೈಸೂರು,ಅ.೩(ಆರ್‌ಕೆ)-ಅಗತ್ಯ ಕಟ್ಟೆಚ್ಚರದೊಂದಿಗೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಗಾಗಿ ಮೈಸೂರಲ್ಲಿ ಭಾನುವಾರ ಪರೀಕ್ಷೆಗಳು ಯಶಸ್ವಿಯಾಗಿ ನಡೆದವು.
ವಿದ್ಯಾವರ್ಧಕ, ಮಹಾಜನ, ಮಹಾರಾಜ ಕಾಲೇಜು ಸೇರಿದಂತೆ ಮೈಸೂರಿನ ೧೧ ಕೇಂದ್ರಗಳಲ್ಲಿ ಬೆಳಗ್ಗೆ ೧೧ರಿಂದ ೧೨-೩೦ ಗಂಟೆ ಹಾಗೂ ಮಧ್ಯಾಹ್ನ ೩ ರಿಂದ ೪.೩೦ ಗಂಟೆವರೆಗೆ ಎರಡು ಪತ್ರಿಕೆಗಳ ಪರೀಕ್ಷೆಗಳು ಕೋವಿಡ್-೧೯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಯಾವುದೇ ಗೊಂದಲವಿಲ್ಲದೆ ಮುಕ್ತಾಯಗೊಂಡವು.
ದೈಹಿಕ ಕ್ರೀಡಾ ಸ್ಪರ್ಧೆಗಳಲ್ಲಿ ಅರ್ಹರಾಗಿದ್ದ ೫,೫೭೫ ಮಂದಿ ಪದವೀಧರ ಅಭ್ಯರ್ಥಿ ಗಳು ಇಂದಿನ ಲಿಖಿತ ಪರೀಕ್ಷೆಗೆ ನೋಂದಣ ಮಾಡಿಕೊಂಡಿದ್ದರು. ಪ್ರತೀ ಪರೀಕ್ಷಾ ಕೇಂದ್ರಗಳ ಪ್ರವೇಶದ್ವಾರದಲ್ಲಿ ಮೆಟಲ್ ಡೋರ್ ಡಿಟೆಕ್ಟರ್ ಉಪಕರಣ ಅಳವಡಿಸಲಾಗಿತ್ತು. ಅಲ್ಲದೆ ಹ್ಯಾಂಡ್ ಡಿಟೆಕ್ಷನ್ ಡಿವೈಸ್‌ನಿಂದಲೂ ಪ್ರತಿಯೊಬ್ಬ ಪರೀಕ್ಷಾರ್ಥಿಗಳನ್ನು ಪರಿಶೀಲಿಸಿ ಪ್ರವೇಶಾವಕಾಶ ಕಲ್ಪಿಸಲಾಯಿತು. ವಿಶೇಷವಾಗಿ ಇದೇ ಪ್ರಥಮ ಬಾರಿ ಅಭ್ಯರ್ಥಿಗಳ ಚಪ್ಪಲಿ, ಶೂಗಳನ್ನೂ ಹೊರಗಿರಿಸಿ ಕೊಠಡಿಗಳಿಗೆ ಕಳುಹಿಸಲಾಗುತ್ತಿತ್ತು. ಬ್ಲೂಟೂತ್ ಆನ್‌ಮಾಡಿಕೊಂಡು ಚಿಪ್ ಅನ್ನು ಶೂ, ಚಪ್ಪಲಿಯಲ್ಲಿ ಬಚ್ಚಿಟ್ಟು ಪರೀಕ್ಷಾ ಅಕ್ರಮವೆಸಗಿ ಸಿಕ್ಕಿಬಿದ್ದ ಪ್ರಕರಣಗಳು ಬೇರೆ ಪರೀಕ್ಷೆಗಳಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಪರೀಕ್ಷೆಗೆ ಚಪ್ಪಲಿ, ಶೂ ಧರಿಸಿಕೊಂಡು ಕೊಠಡಿ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು ಎಂದು ನಗರ ಪೊಲೀಸ್ ಕಮೀಷ್ನರ್ ಡಾ.ಚಂದ್ರಗುಪ್ತ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

 

Translate »