ಬೈಕ್‍ಗೆ ಕಾರು ಡಿಕ್ಕಿ: ನಗರಸಭಾ ಮಾಜಿ ಸದಸ್ಯ ದಂಪತಿ ಪುತ್ರ ದುರ್ಮರಣ
ಮೈಸೂರು ಗ್ರಾಮಾಂತರ

ಬೈಕ್‍ಗೆ ಕಾರು ಡಿಕ್ಕಿ: ನಗರಸಭಾ ಮಾಜಿ ಸದಸ್ಯ ದಂಪತಿ ಪುತ್ರ ದುರ್ಮರಣ

May 19, 2020

ನಂಜನಗೂಡು, ಮೇ 18-ಬೈಕ್‍ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡು-ಊಟಿ ರಾಷ್ಟ್ರೀಯ ಹೆದ್ದಾರಿಯ ಮಲ್ಲನಮೂಲೆ ಮಠದ ತಿರುವಿನಲ್ಲಿ ಸೋಮವಾರ ಸಂಜೆ ನಡೆದಿದೆ.
ನಗರದ ಶಿಕ್ಷಕರ ಕಾಲೋನಿ ನಿವಾಸಿ, ಮಾಜಿ ನಗರಸಭಾ ಸದಸ್ಯರಾದ ಕೆ.ಎಸ್.ಮಹೇಶ್ ಮತ್ತು ಸುಧಾ ಮಹೇಶ್ ದಂಪತಿ ಪುತ್ರ ಪ್ರವೀಣ್(29) ಅಪಘಾತದಲ್ಲಿ ಮೃತಪಟ್ಟವರು.

ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಲ್‍ಬರ್ಗ್ ಕಾರ್ಖಾನೆಯಲ್ಲಿ ಸೂಪರ್ ವೈಸರ್ ಆಗಿದ್ದ ಪ್ರವೀಣ್ ಕೆಲಸ ಮುಗಿಸಿ ಸೋಮವಾರ ಸಂಜೆ ತನ್ನ ರಾಯಲ್ ಎನ್‍ಫೀಲ್ಡ್ ಬೈಕ್(ಕೆಎ09 ಹೆಚ್‍ಕೆ7373)ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಮಲ್ಲನಮೂಲೆ ತಿರುವಿನಲ್ಲಿ ವೇಗವಾಗಿ ಬಂದ ಸ್ವಿಫ್ಟ್ ಕಾರು(ಕೆಎ 09 ಎಂಡಿ5216) ಹಿಂಬದಿಯಿಂದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರವೀಣ್ ತಲೆಗೆ ತೀವ್ರ ಪೆಟ್ಟು ಬಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಠಾಣೆ ಪಿಎಸ್‍ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಅಪಘಾತದ ಬಳಿಕ ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕಾರ್ಖಾನೆ ಇಂದಿನಿಂದ ಆರಂಭವಾಗಿದ್ದು, 2 ತಿಂಗಳಿನಿಂದ ಮನೆಯಲ್ಲೇ ಕಾಲ ಕಳೆದಿದ್ದ ಪ್ರವೀಣ್ ಇಂದು ಕೆಲಸಕ್ಕೆ ತೆರಳಿದ್ದರು. ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಆಸ್ಪತ್ರೆಗೆ ಧಾವಿಸಿ ಯುವಕನ ದುರಂತ ಸಾವಿಗೆ ಕಂಬನಿ ಮಿಡಿದಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಂಗಳವಾರ ಬೆಳಿಗ್ಗೆ ಕಪಿಲಾ ನದಿ ದಂಡೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲ ತಿಳಿಸಿವೆ.

Translate »