ಮೈಸೂರು ನಾಗರಿಕ ವೇದಿಕೆಯಿಂದ ನಂ.ಗೂಡಲ್ಲಿ ದಿನಸಿ ಕಿಟ್ ವಿತರಿಸಿದ ಸುತ್ತೂರು ಶ್ರೀಗಳು
ಮೈಸೂರು ಗ್ರಾಮಾಂತರ

ಮೈಸೂರು ನಾಗರಿಕ ವೇದಿಕೆಯಿಂದ ನಂ.ಗೂಡಲ್ಲಿ ದಿನಸಿ ಕಿಟ್ ವಿತರಿಸಿದ ಸುತ್ತೂರು ಶ್ರೀಗಳು

May 19, 2020

ನಂಜನಗೂಡು, ಮೇ 18 (ರವಿ)-ಮೈಸೂರು ನಾಗರಿಕ ವೇದಿಕೆಯಿಂದ ಶ್ರೀಕ್ಷೇತ್ರ ಸುತ್ತೂರು ಮಠÀದ ಶ್ರೀ ದೇಶಿಕೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವ ನಗರದ 500 ಮಂದಿ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಲಾಯಿತು.

ಇಲ್ಲಿನ ಶ್ರೀಕಂಠೇಶ್ವರ ದೇಗುಲದ ಮುಂಭಾಗ ಕಿಟ್ ವಿತರಣೆ ಚಾಲನೆ ನೀಡಿದ ಆಶೀರ್ವಚನ ನೀಡಿದ ಸುತ್ತೂರು ಶ್ರೀಗಳು, ಮೈಸೂರು ನಾಗರಿಕ ವೇದಿಕೆ ಅತಿವೃಷ್ಟಿ ಸೇರಿದಂತೆ ದೇಶದ ಇನ್ನಿತರ ಸಂಕಷ್ಟದಲ್ಲಿ ಸಹಾಯಹಸ್ತ ಚಾಚುತ್ತಾ ಬಂದಿದೆ. ಮನುಷ್ಯನಿಗೆ ಜೀವ ಮುಖ್ಯ, ನಂತರ ಜೀವನ. ಜೀವವನ್ನು ಕಾಪಾಡಲು ಎಲ್ಲರೂ ಎಚ್ಚರ ವಹಿಸಬೇಕು. ಮೈಸೂರು ಜಿಲ್ಲೆ ಎಲ್ಲರ ಶ್ರಮದಿಂದ ಕೊರೊನಾ ಮುಕ್ತವಾಗಿದೆ. ಉದಾಸೀನ ಮಾಡದೆ ಜಾಗ್ರತೆÀ ವಹಿಸಿದಾಗ ಮಾತ್ರ ಕೊರೊನಾ ಹೋಗಲಾಡಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಇತ್ತೀಚೆಗೆ ಮೈಸೂರಿನಲ್ಲಿ ಶ್ರೀಗಳನ್ನು ಭೇಟಿ ಮಾಡಿ ನಮ್ಮ ಕ್ಷೇತ್ರಕ್ಕೂ ನಾಗರಿಕ ವೇದಿಕೆಯಿಂದ ದಿನಸಿ ಕಿಟ್ ವಿತರಿಸಲು ಕಾರ್ಯಕ್ರಮ ರೂಪಿಸಬೇಕೆಂಬ ಮನವಿ ಮೇರೆಗೆ ಇಂದು ಬಳಗದಿಂದ 500ಕ್ಕೂ ಹೆಚ್ಚು ಮಂದಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಆಟೋ ಚಾಲಕರ ಹೆಸರನ್ನು ಪಟ್ಟಿ ಮಾಡಲಾಗಿದ್ದು, ಎಲ್ಲರಿಗೂ ಪಡಿತರ ಕಿಟ್ ತಲುಪಲಿದೆ ಎಂದು ತಿಳಿಸಿದರು.

ಮೈಸೂರು ನಾಗರಿಕ ವೇದಿಕೆಯ ವಾಸುದೇವ ಭಟ್ ಮಾತನಾಡಿ, ಹಲವು ವರ್ಷಗಳ ಹಿಂದೆ ಪ್ರಾರಂಭವಾದ ನಾಗರಿಕ ವೇದಿಕೆ ಸುನಾಮಿಯಲ್ಲಿ ನೊಂದ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಮನೆ ಕಳೆದು ಕೊಂಡವರಿಗೆ 1,250 ಮನೆಗಳನ್ನು ಶ್ರೀಗಳ ಅನುಗ್ರಹದಿಂದ ಕಲ್ಪಿಸಲಾಗಿದೆ. 2019 ಉತ್ತರ ಕರ್ನಾಟಕ ಪ್ರವಾಹ ಬಂದಾಗ ವೇದಿಕೆಯಿಂದ ಮುಖ್ಯಮಂತ್ರಿ ನಿಧಿಗೆ 1 ಕೋಟಿ ರೂ. ನೀಡಲಾಯಿತು. ಈ ಬಾರಿ ಕೊರೊನಾ ಸೋಂಕು ಪರಿಣಾಮ ಲಾಕ್‍ಡೌನ್‍ಗೆ ಸಿಲುಕಿ ಸಂಕಷ್ಟದಲ್ಲಿದ್ದ ಬಡಕುಟುಂಬಗಳನ್ನು ಗುರುತಿಸಿ 550 ಪಡಿತರ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗಳನ್ನು ಗೌರವಿಸಲಾಯಿತು. ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಕುಂಬ್ರಹಳ್ಳಿ ಸುಬ್ಬಣ್ಣ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಂ.ಕೆಂಪಣ್ಣ, ಜಿಪಂ ಸದಸ್ಯ ಸದಾನಂದ, ಸಮಾಜ ಸೇವಕ ಯು.ಎನ್.ಪದ್ಮನಾಭರಾವ್, ದೇಗುಲ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಇಂಧನ್ ಬಾಬು, ತಾಲೂಕು ಬಿಜೆಪಿ ಅಧ್ಯಕ್ಷ ಹೂರಳವಾಡಿ ಮಹೇಶ್, ಬಿಜೆಪಿ ಮುಖಂಡರಾದ ಸಿ.ಚಿಕ್ಕರಂಗನಾಯಕ, ಮಾಜಿ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಬಿಜೆಪಿ ಘಟಕ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಮುಖಂಡರಾದ ವಿನಯ್‍ಕುಮಾರ್, ಇಲಿಯಾಸ್ ಅಹಮದ್, ವಕೀಲ ನಂಜುಂಡಸ್ವಾಮಿ, ದೇಗುಲ ಇಓ ಶಿವಕುಮಾರಯ್ಯ, ದೇಗುಲದ ವ್ಯವಸ್ಥಾಪಕ ಸಮಿತಿ ಸದಸ್ಯರಾದ ಗಿರೀಶ್, ಎಂ.ಶ್ರೀಧರ್, ಮಂಜುಳಾ ಮಧು, ಶಶಿರೇಖಾ, ನಗರಸಭಾ ಸದಸ್ಯರಾದ ಮಹದೇವಸ್ವಾಮಿ, ಸಿದ್ದರಾಜು, ಶಂಕರಪ್ಪ, ಉದ್ಯಮಿ ರವಿ, ಜಿ.ಬಸವರಾಜು, ತಹಸೀಲ್ದಾರ್ ಕೆ.ಎಂ.ಮಹೇಶ್‍ಕುಮಾರ್, ನಗರಸಭಾ ಆಯುಕ್ತ ಕರಿಬಸವಯ್ಯ ಇದ್ದರು.

Translate »