ಹುಣಸೂರು: ಬಿರುಗಾಳಿ-ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಮೈಸೂರು ಗ್ರಾಮಾಂತರ

ಹುಣಸೂರು: ಬಿರುಗಾಳಿ-ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ

May 19, 2020

ಹುಣಸೂರು, ಮೇ 18(ಕೆಕೆ)-ತಾಲೂಕಿನ ಹನಗೋಡು ಹೋಬಳಿಯ ದೊಡ್ಡ ಹೆಜ್ಜೂರಿನಲ್ಲಿ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದು, ಬಾಳೆ ಬೆಳೆ ನಷ್ಟವಾಗಿದೆ.

ಗ್ರಾಮದಲ್ಲಿ ಸಂಜೆ ಆರಂಭವಾದ ಮಳೆ ರಾತ್ರಿ ವೇಳೆ ಜೋರಾಯಿತು. ಅಲ್ಲದೆ ಭಾರೀ ಬಿರುಗಾಳಿಯಿಂದ ಗ್ರಾಮದ ನಿವಾಸಿಗಳಾದ ಸಿದ್ದಪ್ಪಾಜಿ, ಮಂಜುಳಾ, ಚೇತನ್, ಸಣ್ಣಮ್ಮ, ನರಿಯಯ್ಯ, ಮರಲಿಂಗಮ್ಮ, ಪುಟ್ಟಲಕ್ಷ್ಮಮ್ಮ, ಚೆಲುವಮ್ಮ, ರವಿಕುಮಾರ್, ಸುಕನ್ಯಾ, ವೆಂಕಟರಮಣ, ಶೇಖರ್, ಮಹದೇವ್, ಪ್ರಸನ್ನ ಸೇರಿದಂತೆ ಇನ್ನಿತರರ ಮನೆಗಳು ಹಾನಿಗೀಡಾಗಿವೆ. ಕೆಲ ಮನೆಗಳ ಹೆಂಚು ಹಾರಿಹೋಗಿದ್ದರೆ, ಹಲವು ಮನೆಗಳಲ್ಲಿ ಕಲ್ನಾರ್ ಶೀಟ್ ಹಾರಿಹೋಗಿದೆ. ಗ್ರಾಮದ ರೈತ ನಾಗಣ್ಣ ಅವರ ಮನೆ ಮೇಲೆ ತೆಂಗಿನ ಮರ ಉರುಳಿ ಮನೆ ಹಾನಿಯಾಗಿದೆ. ಕೃಷ್ಣೇಗೌಡರಿಗೆ ಸೇರಿದ ಬಾಳೆ ಬೆಳೆ ನೆಲಕಚ್ಚಿದ್ದು, ಐದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಅಧಿಕಾರಿಗಳ ಭೇಟಿ: ತಹಸೀಲ್ದಾರ್ ಬಸವರಾಜ್, ರಾಜಸ್ವನಿರೀಕ್ಷಕ ರಾಜ್‍ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ, ಮಳೆ ಹಾನಿ ಪರಿಶೀಲಿಸಿದರು. ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ಗ್ರಾಪಂ ಸದಸ್ಯರಾದ ನಾಗೇಶ್, ಸುಭಾಷ್ ಹಾಜರಿದ್ದರು.

Translate »