ಮೈಸೂರು,ಜೂ.10(ಆರ್‍ಕೆ)-ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಯುವತಿ ದುರ್ಮರಣಕ್ಕೀಡಾಗಿದ್ದಾರೆ.
ಮೈಸೂರಿನ ಗಾಯತ್ರಿಪುರಂ ನಿವಾಸಿ ಮೇರಿ ಜೆನಿಫರ್ (23) ಸಾವನ್ನಪ್ಪಿದವರು. ಸೋಮವಾರ ತಮ್ಮ ಸಂಬಂಧಿ ನೆಲ್ಸನ್ ರೊಂದಿಗೆ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಯಲ್ಲಿ ಕಿವಿ ತಪಾಸಣೆಗೆಂದು ಟಿವಿಎಸ್ ವಿಕ್ಟರ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ಮಾರುತಿ ಬ್ರೆಜ್ಜಾ ಕಾರು ಬೋಗಾದಿ ಮುಖ್ಯ ರಸ್ತೆಯಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಡಿಕ್ಕಿ ಹೊಡೆದಿದೆ.
ಪರಿಣಾಮ, ಬೈಕ್‍ನ ಹಿಂಬದಿ ಕುಳಿತಿದ್ದ ಮೇರಿ ಜೆನಿಫರ್ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕಾಮಾಕ್ಷಿ ಆಸ್ಪತ್ರೆಗೆ ಕರೆ ದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬನ್ನಿಮಂಟಪದಲ್ಲಿ ರುವ ಸೇಂಟ್ ಜೋಸೆಫ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಮೇರಿ ಜೆನಿಫರ್ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಜಗದೀಶ್ ಅವರು, ಕಾರು ಹಾಗೂ ಅದರ ಚಾಲಕ ವರುಣಾ ಗ್ರಾಮದ ಸತೀಶ್‍ನನ್ನು ವಶಕ್ಕೆ ಪಡೆದಿದ್ದಾರೆ.
ಕಡ್ಡಾಯ ಹೆಲ್ಮೆಟ್ ಧರಿಸಿ: ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮತ್ತು ಸವಾರಿ ಮಾಡಬೇಡಿ ಎಂದು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಸಂದೇಶ್‍ಕುಮಾರ್ ಸಲಹೆ ನೀಡಿದ್ದಾರೆ.
ಮೈಸೂರಿನ ಬೋಗಾದಿ ರಸ್ತೆಯಲ್ಲಿ ಸೋಮವಾರ ನಡೆದ ಅಪ ಘಾತದಲ್ಲಿ ತಲೆಗೆ ತೀವ್ರತರ ಗಾಯವಾಗಿದ್ದ ಮೇರಿ ಜೆನಿಫರ್, ಇಂದು ಸಾವನ್ನಪ್ಪಿರುವ ಘಟನೆಯನ್ನು ಉಲ್ಲೇಖಿಸಿದ ಅವರು, ಆಕೆ ಹೆಲ್ಮೆಟ್ ಧರಿಸಿದ್ದರೆ ಪ್ರಾಣ ಉಳಿಯುತ್ತಿತ್ತು ಎಂದಿದ್ದಾರೆ.
ಕೋವಿಡ್ ಲಾಕ್‍ಡೌನ್‍ನಿಂದಾಗಿ ಪೊಲೀಸರು ಮಾರ್ಗಸೂಚಿ ಗಳ ಪಾಲಿಸುವಂತೆ ಸಾರ್ವಜನಿಕರ ಮೇಲೆ ನಿಗಾ ವಹಿಸುವ ಭರ ದಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಲಿಲ್ಲ. ಲಾಕ್‍ಡೌನ್ ಸಡಿಲಗೊಂಡ ನಂತರವೂ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂಬ ಮಾನವೀಯ ದೃಷ್ಟಿಯಿಂದ ಟ್ರಾಫಿಕ್ ಸಂಬಂಧಿತ ಕೇಸ್‍ಗಳನ್ನು ಹಾಕಿ, ದಂಡ ಶುಲ್ಕ ವಸೂಲಿ ಮಾಡು ತ್ತಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡು ಸಂಚಾರ ನಿಯಮ ಉಲ್ಲಂಘಿಸುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೇ ಓಡಾಡುವುದು, 3 ಮಂದಿ ಸವಾರಿ, ಸಿಗ್ನಲ್ ಲೈಟ್ ಜಂಪ್ ಮಾಡುವುದು, ಏಕಮುಖ ಸಂಚಾರದ ವಿರುದ್ಧ ಚಾಲನೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಸೀಟ್ ಬೆಲ್ಟ್ ಹಾಕದೇ ಕಾರು ಚಾಲನೆ ಮೂಲಕ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದು ಮೈಸೂರು ನಗರ ದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ಕೇವಲ ಪೊಲೀಸರು ತಪಾಸಣೆ ಮಾಡುತ್ತಿಲ್ಲ ಎಂದು ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡಿದರೆ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಸಂದೇಶ್‍ಕುಮಾರ್, ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ ಹಾಗೂ ಇತರ ಅಮಾಯಕರ ಸಾವಿಗೂ ಕಾರಣ ರಾಗುವುದನ್ನು ತಪ್ಪಿಸಿ ಎಂದು ಸಲಹೆ ನೀಡಿದ್ದಾರೆ