ಮೈಸೂರು, ಜೂ.10(ಪಿಎಂ)- ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಖಾನೆಯು ನಿಯಮ ಬಾಹಿರವಾಗಿ 40ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಆರೋಪಿಸಿ ಕಾರ್ಖಾನೆಯ ಕಾರ್ಮಿಕರು ಮೈಸೂರು ಡಿಸ್ಟ್ರಿಕ್ ಜನರಲ್ ಎಂಪ್ಲಾಯೀಸ್ ಯೂನಿಯನ್ ಆಶ್ರಯ ದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಿರುಪತಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ 40ಕ್ಕೂ ಹೆಚ್ಚು ಕಾರ್ಮಿಕರನ್ನು ಕೊರೊನಾ ಹಿನ್ನೆಲೆಯಲ್ಲಿ ಮೈಸೂರಿಗೆ ಕರೆಸಿಕೊಂಡು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಸರ್ಕಾರ ಈ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಹಿಂದೆ ಕಾರ್ಖಾನೆಯಲ್ಲಿ ಕಾರ್ಮಿಕರು ಸಂಘಟನೆ ಮಾಡಿಕೊಂಡಿದ್ದಕ್ಕೇ 90 ಕಾರ್ಮಿಕರನ್ನು ನೀರು, ಆಶ್ರಯ ಸರಿಯಾಗಿಲ್ಲದ ಹಾಗೂ ಇನ್ನೂ ಪೂರ್ಣ ಪ್ರಮಾಣ ದಲ್ಲಿ ಪ್ರಾರಂಭವೇ ಆಗದ ಆಂಧ್ರ ಪ್ರದೇಶದ ತಿರುಪತಿ ಬಳಿಯಿರುವ ವಿಕೃತಮಾಲ ಗ್ರಾಮದ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. 2018ರ ನವೆಂಬರ್‍ನಲ್ಲಿ ಈ ವರ್ಗಾವಣೆ ವಿರುದ್ಧ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆಗಿನ ಒಡಂಬಡಿಕೆ ಪ್ರಕಾರ 60 ಮಂದಿ ವಿಕೃತಮಾಲ ಘಟಕದಲ್ಲಿ 2 ವರ್ಷ ಕೆಲಸ ಮಾಡಬೇಕು. ಈ ಅವಧಿಯೊಳಗೆ ಹಂತ ಹಂತವಾಗಿ ಎಲ್ಲರನ್ನೂ ಮೈಸೂರಿನ ಕಾರ್ಖಾನೆಗೆ ಕರೆಸಿಕೊಳ್ಳುವುದಾಗಿತ್ತು. ಆದರೆ ಕಾರ್ಖಾನೆಯ ಆಡಳಿತ ಮಂಡಳಿ ಕಿರುಕುಳಕ್ಕೆ ನೊಂದು ಹಲವರು ಕೆಲಸ ಬಿಟ್ಟು ಮೈಸೂರಿಗೆ ಹಿಂತಿರುಗಿದರು ಎಂದರು.
ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯೀಸ್ ಯೂನಿಯನ್ ಪದಾಧಿಕಾರಿ ಮುರಳೀಧರ್ ಪೇಶ್ವ, ವಿನ್ಯಾಸ್ ಕಾರ್ಖಾನೆಯ ಎಂಪ್ಲಾಯೀಸ್ ಯೂನಿಯನ್‍ನ ಅಧ್ಯಕ್ಷ ಕೆ.ಎಂ.ಶಶಿಕುಮಾರ್, ಕಾರ್ಯದರ್ಶಿ ಅನಿಲ್, ಖಜಾಂಚಿ ಸತೀಶ್ ಸೇರಿದಂತೆ ಕೆಲಸ ಕಳೆದುಕೊಂಡ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.