ವರಕೋಡು ಶ್ರೀ ಬೀರೇಶ್ವರಸ್ವಾಮಿ ದೇಗುಲ ಮರುನಿರ್ಮಾಣಕ್ಕೆ ಸಿದ್ದರಾಮಯ್ಯ ಗುದ್ದಲಿ ಪೂಜೆ
ಮೈಸೂರು

ವರಕೋಡು ಶ್ರೀ ಬೀರೇಶ್ವರಸ್ವಾಮಿ ದೇಗುಲ ಮರುನಿರ್ಮಾಣಕ್ಕೆ ಸಿದ್ದರಾಮಯ್ಯ ಗುದ್ದಲಿ ಪೂಜೆ

June 11, 2020

ಮೈಸೂರು, ಜೂ.10(ಎಂಟಿವೈ)- ಮೈಸೂರು ತಾಲೂಕಿನ ವರಕೋಡು ಗ್ರಾಮದ ಶ್ರೀ ಬೀರೇಶ್ವರಸ್ವಾಮಿ ದೇವಾ ಲಯ ಪುನರ್ ನಿರ್ಮಾಣ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧ ವಾರ ಗುದ್ದಲಿ ಪೂಜೆ ನೆರವೇರಿಸಿದರು.

ದಶಕಗಳ ಹಿಂದಿನ ಶ್ರೀ ಬೀರೇಶ್ವರ ಸ್ವಾಮಿ ದೇವಾಲಯ ಶಿಥಿಲಗೊಂಡಿದ್ದರಿಂದ ದೇವಾಲಯದ ಒಕ್ಕಲು ಕುಟುಂಬ ಹಾಗೂ ಗಡಿಗ್ರಾಮಗಳಿಂದ ಚಂದಾ ಸಂಗ್ರಹಿಸಿ, 4 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ವನ್ನು ಪುನರ್ ನಿರ್ಮಿಸಲಾಗುತ್ತಿದೆ.

ಬುಧವಾರ ಮಧ್ಯಾಹ್ನ ವರಕೋಡು ಗ್ರಾಮಕ್ಕೆ ಆಗಮಿಸಿದ ವಿಪಕ್ಷ ನಾಯಕ ಸಿದ್ದ ರಾಮಯ್ಯ ಸಭೆಯಲ್ಲಿ ಮಾತನಾಡಿ, ಎಲ್ಲಾ ಜಾತಿ ಜನಾಂಗಗಳ ಜನರು ದೇವರನ್ನು ಆರಾಧಿಸುತ್ತಾರೆ. ಗುಡಿ ಕಟ್ಟಿ, ಮೂರ್ತಿ ಇಟ್ಟು ಪೂಜಿಸುತ್ತಾರೆ. ದೇವರು ದೇವಾಲಯಕ್ಕೆ ಸೀಮಿತವಾಗಿರದೆ ಸರ್ವಾಂತಯಾಮಿ ಯಾಗಿದ್ದಾನೆ ಎಂದು ವಿವರಿಸಿದರು.

ಕಳೆದ ವಾರ ಮೈಸೂರಿಗೆ ನಾನು ಬಂದಿ ದ್ದಾಗ ವರಕೋಡು ಗಡಿ ಗ್ರಾಮದ ಯಜ ಮಾನರು ನನ್ನನ್ನು ಭೇಟಿ ಮಾಡಿ ದೇವಾ ಲಯ ಮರು ನಿರ್ಮಾಣದ ಗುದ್ದಲಿಪೂಜೆ ನೆರವೇರಿಸುವಂತೆ ಮನವಿ ಮಾಡಿದರು. ಬಡಗಲಹುಂಡಿ, ಮೂಡಲಹುಂಡಿ, ಕೆಂಪೇ ಗೌಡನಹುಂಡಿ, ಹೊಸ ಹುಂಡಿ, ವರಕೋಡು ದೇವಾಲಯದ ಕುಲಕ್ಕೆ ಸೇರಿದ ಕುಟುಂಬ ಗಳಿಂದ 1.50 ಕೋಟಿ `ವರಿ’ (ದೇಣಿಗೆ) ಸಂಗ್ರಹಿಸುತ್ತಿರುವುದಾಗಿ ಹೇಳಿದರು.

ಗಡಿ ಗ್ರಾಮದವರು ಬಡವರೇ ಆಗಿ ದ್ದರೂ `ವರಿ ಎತ್ತಲು(ಸಂಗ್ರಹಿಸಲು) ಬಡತನ ಇಲ್ಲ’ ಎಂಬ ಗಾದೆಯಂತೆ ಹಿಂದಿನಿಂದಲೂ ವಿವಿಧ ಧಾರ್ಮಿಕ ಕಾರ್ಯಗಳಿಗೆ ಗ್ರಾಮ ಸ್ಥರು ಆರ್ಥಿಕ ನೆರವು ನೀಡುತ್ತಾ ಬಂದಿ ದ್ದಾರೆ. ಆದರೆ ಯಾರಿಗೆ ದೇಣಿಗೆ ಕೊಡಲು ಅಸಾಧ್ಯವೋ ಅಂತಹವರಿಂದ ಬಲವಂತ ವಾಗಿ ಹಣ ಪಡೆಯಬಾರದು ಎಂದರು.

ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರದಿಂದ ನೆರವು ಕೊಡಿಸುವೆ. ವೈಯಕ್ತಿಕವಾಗಿಯೂ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.

ಉಳ್ಳವರು ಶಿವಾಲಯ ಮಾಡುವರು: ದೇವರು ಸರ್ವಾಂತಯಾಮಿ ಎಂಬುದನ್ನು ಅರಿತಿದ್ದ ಬಸವಣ್ಣನವರು 12ನೇ ಶತಮಾನ ದಲ್ಲಿಯೇ `ಉಳ್ಳವರು ಶಿವಾಲಯ ಮಾಡು ವರು, ನಾನೇನ ಮಾಡಲಿ ಬಡವನಯ್ಯ. ಎನ್ನ ಕಾಲೇ ಕಂಬ ದೇಹವೇ ದೇಗಲ, ಶಿರವೇ ಹೊನ್ನ ಕಳಸವಯ್ಯಾ ಕೂಡಲ ಸಂಗಮ ದೇವ’ ಎಂದಿದ್ದರು. ದೇವಾಲಯ ನಿರ್ಮಾಣಕ್ಕೆ ಹಣವಂತರು ದೇಣಿಗೆ ನೀಡಬೇಕು. ಮನುಷ್ಯ ಬರುವಾಗ ಬೆತ್ತಲೇ, ಹೋಗುವಾಗ ಬೆತ್ತಲೇ. ಎಷ್ಟು ದಿನ ಇರುತ್ತೇವೋ ಅಷ್ಟು ಉತ್ತಮ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಶಕ್ತಿ ಇದ್ದ ವರು, ಉಳ್ಳವರು ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ನೀಡುವಂತೆ ಕೋರಿದರು.

ಲೆಕ್ಕ ಸರಿಯಾಗಿರಲಿ: ಎಷ್ಟು ದೇಣಿಗೆ ಸಂಗ್ರಹವಾಯಿತು? ಎಷ್ಟು ಖರ್ಚಾಯಿತು? ಎಂಬ ಲೆಕ್ಕ ಸರಿಯಾಗಿರಬೇಕು. ಅನವ ಶ್ಯಕವಾಗಿ ಹಣ ಪೋಲು ಮಾಡಬಾರದು. ಗ್ರಾಮಸ್ಥರೂ ಶ್ರಮದಾನಕ್ಕೆ ಮುಂದಾಗ ಬೇಕು. ಕೃಷಿ ಚಟುವಟಿಕೆ ಇಲ್ಲದೇ ಇದ್ದಾಗ ದೇವಾಲಯ ನಿರ್ಮಾಣ ಕೆಲಸದಲ್ಲಿ ಗ್ರಾಮಸ್ಥರು ತೊಡಗಿಸಿಕೊಂಡರೆ ಕೂಲಿ ನೀಡುವುದು ತಪ್ಪುತ್ತದೆ. ಸಾಧ್ಯವಾದಷ್ಟು ಸಾಮಗ್ರಿಗಳಿಗಷ್ಟೇ ಹಣ ಬಳಸಿ, ಕೂಲಿ ಹಣ ಕಡಿಮೆಯಾಗುವಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ದೇವಾಲಯ ನಂಟು: ಸಿದ್ದರಾಮನ ಹುಂಡಿಯ ಶ್ರೀ ಸಿದ್ದರಾಮೇಶ್ವರ ದೇವಾ ಲಯ ಹಾಗೂ ವರಕೋಡುವಿನ ಶ್ರೀ ಬೀರೇ ಶ್ವರಸ್ವಾಮಿ ದೇವಾಲಯಕ್ಕೂ ಜಾತ್ರೆ ನಂಟಿದೆ. 4 ವರ್ಷಕ್ಕೊಮ್ಮೆ ಮಹಾಲಯ ಅಮಾವಾಸ್ಯೆ ವೇಳೆ ಐದಾರು ದಿನ ವರಕೋಡು ಬೀರೇ ಶ್ವರಸ್ವಾಮಿ, ಬಡಗಲಹುಂಡಿ ಶ್ರೀ ಬನ್ನಿಮಹಾ ಕಾಳೇಶ್ವರಿ ಜಾತ್ರಾ ಮಹೋತ್ಸವ ವಿಜೃಂಭಣೆ ಯಿಂದ ನಡೆಯುತ್ತದೆ. ರಾಜ್ಯದ ಹಲವು ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚು ಭಕ್ತರು, ಕುಲ ದೇವರ ಆರಾಧಕರು ಪಾಲ್ಗೊಳ್ಳುತ್ತಾರೆ. ವೀರ ಮಕ್ಕಳ ಕುಣಿತ ತಂಡದಲ್ಲಿದ್ದ ಸಿದ್ದರಾಮಯ್ಯ ಡಿಸಿಎಂ ಆಗಿದ್ದ ವೇಳೆಯೂ ಬೀರೇಶ್ವರ ಸ್ವಾಮಿ ಜಾತ್ರೆಯಲ್ಲಿ ಪಾಲ್ಗೊಂಡು ವೀರ ಮಕ್ಕಳ ಕುಣಿತ ಪ್ರದರ್ಶಿಸುತ್ತಿದ್ದರು. ಈ ಹಿನ್ನೆಲೆ ಯಲ್ಲಿ ಬೀರೇಶ್ವರಸ್ವಾಮಿ ದೇವಾಲಯ ಸುತ್ತಲ ಗ್ರಾಮಗಳ ಜನರೊಂದಿಗೆ ಉತ್ತಮ ಒಡ ನಾಟ ಹೊಂದಿರುವ ಅವರು ದೇವಾಲಯದ ಪುನರ್ ನಿರ್ಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು. ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಜಿ.ಪಂ ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಅಪ್ಪಾಜಿ ಗೌಡ, ಕೆಂಪೀರಯ್ಯ, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಂ.ಟಿ. ರವಿಕುಮಾರ್, ತಾ.ಪಂ ಸದಸ್ಯ ಮುದ್ದ ರಾಮೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ತಾ.ಪಂ ಸದಸ್ಯ ಸಿದ್ದ ರಾಮೇಗೌಡ, ಎಪಿಎಂಸಿ ಸದಸ್ಯ ಬಸವ ರಾಜು, ಮುಖಂಡರಾದ ನಾಡನಹಳ್ಳಿ ರವಿ, ವರಕೋಡು ದೊಡ್ಡೇಗೌಡ, ಗ್ರಾ.ಪಂ ಅಧ್ಯಕ್ಷೆ ಭವಾನಿ ಹಾಗೂ ಗಡಿಗ್ರಾಮದ ಯಜ ಮಾನರು ಉಪಸ್ಥಿತರಿದ್ದರು.

Translate »