ಕಾರು ಡಿಕ್ಕಿ: ಕಲ್ಲಿನ ಬ್ಯಾರಿಕೇಡ್‍ಗೆ ಹಾನಿ
ಮೈಸೂರು

ಕಾರು ಡಿಕ್ಕಿ: ಕಲ್ಲಿನ ಬ್ಯಾರಿಕೇಡ್‍ಗೆ ಹಾನಿ

November 13, 2018

ಮೈಸೂರು: ಮಾರುತಿ ಸ್ವಿಫ್ಟ್ ಡಿಸೈರ್ ಕಾರೊಂದು ಡಿಕ್ಕಿ ಹೊಡೆದು, ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಕಾವೇರಿ ಎಂಪೋರಿಯಂ ಎದುರಿನ ಕಲ್ಲಿನ ಬ್ಯಾರಿಕೇಡ್ ಮುರಿದು ಬಿದ್ದಿದೆ. ಈ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ಕಡೆಯಿಂದ ಬಂದ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನ ಚಾಲಕ ಪಾರ್ಕಿಂಗ್ ಮಾಡಲು ಹೋಗಿ ಕಾವೇರಿ ಎಂಪೋರಿಯಂ ಎದುರಿನಲ್ಲಿ ಪಾಲಿಕೆಯಿಂದ ಅಳವಡಿಸಿರುವ ಕಲ್ಲಿನ ಬ್ಯಾರಿಕೇಡ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಂಬವೊಂದು ಮುರಿದು ಬಿದ್ದಿದೆ.

ಅದನ್ನು ಕಂಡ ಕಾರು ಚಾಲಕ ವಾಹನ ಪಾರ್ಕ್ ಮಾಡದೇ ಜಾಗ ಖಾಲಿ ಮಾಡಿದರು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಘಟನೆಯನ್ನು ಕೆಲವರು ಮೊಬೈಲ್‍ನಲ್ಲಿ ಫೋಟೋ ತೆಗೆದಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅರಮನೆ ಪೂರ್ವಭಾಗದ ಬಳಿ ಎಲೆಕ್ಟ್ರಿಕ್ ಗುತ್ತಿಗೆದಾರನ ವಾಹನವೊಂದು ಇತ್ತೀಚೆಗೆ ಕಲ್ಲಿನ ಬ್ಯಾರಿಕೇಡ್ ಅನ್ನು ಜಖಂಗೊಳಿಸಿದ್ದು, ಹೈವೇ ಸರ್ಕಲ್‍ನಲ್ಲಿರುವ ಆನೆ ಪ್ರತಿಮೆ ಸುತ್ತ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಅನ್ನು ಕಾರೊಂದು ಡಿಕ್ಕಿ ಹೊಡೆದು ಮುರಿದು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »