ಬೈಕ್‍ಗೆ ಕಾರು ಡಿಕ್ಕಿ: ಸಹೋದರರ ದುರ್ಮರಣ
ಮೈಸೂರು

ಬೈಕ್‍ಗೆ ಕಾರು ಡಿಕ್ಕಿ: ಸಹೋದರರ ದುರ್ಮರಣ

November 23, 2021

ಮೈಸೂರು, ನ. 22(ಆರ್‍ಕೆ)- ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸಹೋದರರಿಬ್ಬರು ದುರ್ಮರಣಕ್ಕೀಡಾದ ಘಟನೆ, ಮೈಸೂರು ತಾಲೂಕು ಹೊಸಕೋಟೆ ಸಮೀಪದ ಸಾಗರಕಟ್ಟೆ ಸೇತುವೆ ಮೇಲೆ ಭಾನುವಾರ ರಾತ್ರಿ ಸಂಭವಿಸಿದೆ.

ಮೈಸೂರು ತಾಲೂಕು, ಇಲವಾಲ ಹೋಬಳಿ, ಹೊಸಕೋಟೆ ಗ್ರಾಮದ ಮಹದೇವು ಅವರ ಪುತ್ರರಾದ ವಿಷ್ಣು(22) ಹಾಗೂ ವಿಶ್ವ(20) ಅಪಘಾತದಲ್ಲಿ ಸಾವನ್ನಪ್ಪಿದವರು. ಹೊಸಕೋಟೆಯಿಂದ ಕೆಆರ್ ನಗರ ಕಡೆಗೆ ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕ್‍ನಲ್ಲಿ ಸಹೋದರರು ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಹುಂಡೈ ಐ10 ಕಾರು, ಸಾಗರಕಟ್ಟೆ ಸೇತುವೆ ಮೇಲೆ ಭಾನುವಾರ ರಾತ್ರಿ ಸುಮಾರು 7.15 ಗಂಟೆ ವೇಳೆಗೆ ಡಿಕ್ಕಿ ಹೊಡೆದಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‍ನ ಹಿಂಭಾಗ ಕುಳಿತಿದ್ದ ವಿಶ್ವ ಸೇತುವೆ ಮೇಲಿಂದ ಕೆಆರ್‍ಎಸ್ ಹಿನ್ನೀರಿಗೆ ಹಾರಿದರೆ, ಬೈಕ್ ಚಾಲನೆ ಮಾಡುತ್ತಿದ್ದ ಅಣ್ಣ ವಿಷ್ಣು ತೀವ್ರವಾಗಿ ಗಾಯ ಗೊಂಡರು. ಆ ಮಾರ್ಗ ಸಂಚರಿಸುತ್ತಿದ್ದವರು ತೀವ್ರ ರಕ್ತಸ್ರಾವ ದಿಂದ ಒದ್ದಾಡುತ್ತಿದ್ದ ವಿಷ್ಣುವನ್ನು ಮೈಸೂರಿಗೆ ಕರೆತಂದು ಕೆಆರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಅತ್ತ ಬೈಕ್‍ಗೆ ಡಿಕ್ಕಿ ಹೊಡೆದ ಕಾರು ಚಾಲಕನಿಗೂ ಗಾಯ ವಾಗಿದ್ದು, ಅವರನ್ನು ಮೈಸೂರು ಅಪೊಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕಾಗಮಿಸಿದ ಇಲವಾಲ ಠಾಣೆ ಪೊಲೀ ಸರು, ಮಹಜರು ನಡೆಸಿ ಎರಡೂ ವಾಹನಗಳನ್ನೂ ವಶಕ್ಕೆ ಪಡೆದು ಕೊಂಡರು. ಕೆಆರ್‍ಎಸ್ ಹಿನ್ನೀರಿಗೆ ಬಿದ್ದಿದ್ದಾರೆನ್ನಲಾದ ವಿಶ್ವನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಈಜು ತಜ್ಞ ರಿಂದ ಕಾರ್ಯಾಚರಣೆ ನಡೆಸುತ್ತಿದ್ದರಾದರೂ, ಇಂದು ರಾತ್ರಿವರೆಗೂ ಮೃತದೇಹ ಪತ್ತೆಯಾಗಲಿಲ್ಲ. ಸ್ಥಳಕ್ಕೆ ಎಸ್ಪಿ ಆರ್.ಚೇತನ್, ಎಎಸ್ಪಿ ಶಿವಕುಮಾರ್ ಸಹ ಭೇಟಿ ನೀಡಿದ್ದರು. ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖ ಲಿಸಿಕೊಂಡಿದ್ದು, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಿಷ್ಣುವಿನ ದೇಹವನ್ನು ವಾರಸುದಾರರಿಗೆ ಒಪ್ಪಿಸಿದರು. ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡರು ಸಹ ಸೋಮವಾರ ಕೆಆರ್‍ಎಸ್ ಹಿನ್ನೀರಿಗೆ ಭೇಟಿ ನೀಡಿದ್ದರು.

Translate »