ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯದಿಂದ ಗಿರಿಜನ ವ್ಯಕ್ತಿ ಸಾವು ಆರ್‍ಎಫ್‍ಓ, ಡಿಆರ್‍ಎಫ್‍ಓ ಸೇರಿ 17 ಮಂದಿ ವಿರುದ್ಧ ಕೇಸ್
ಮೈಸೂರು

ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯದಿಂದ ಗಿರಿಜನ ವ್ಯಕ್ತಿ ಸಾವು ಆರ್‍ಎಫ್‍ಓ, ಡಿಆರ್‍ಎಫ್‍ಓ ಸೇರಿ 17 ಮಂದಿ ವಿರುದ್ಧ ಕೇಸ್

October 13, 2022

ಹೆಚ್.ಡಿ.ಕೋಟೆ, ಅ.12-ಅರಣ್ಯ ಇಲಾಖಾ ಸಿಬ್ಬಂದಿ ವಶದಲ್ಲಿದ್ದ ಗಿರಿಜನ ವ್ಯಕ್ತಿ ಸಾವನ್ನಪ್ಪಿದ್ದು, ಗುಂಡ್ರೆ ಅರಣ್ಯ ವಲಯದ ಆರ್‍ಎಫ್‍ಓ, ಡಿಆರ್‍ಎಫ್‍ಓ ಸೇರಿದಂತೆ 17 ಮಂದಿ ಅರಣ್ಯ ಸಿಬ್ಬಂದಿ ವಿರುದ್ಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಅಕ್ರಮ ಬಂಧನ ಪ್ರಕರಣ ದಾಖ ಲಾಗಿದೆ. ಗುಂಡ್ರೆ ಅರಣ್ಯ ವಲಯದ ಆರ್‍ಎಫ್‍ಓ ಅಮೃತೇಶ್, ಡಿಆರ್‍ಎಫ್‍ಓ ಕಾರ್ತಿಕ್ ಯಾದವ್, ಸಿಬ್ಬಂದಿಗಳಾದ ಆನಂದ್, ಬಾಹುಬಲಿ, ರಾಮು, ಶೇಖರಯ್ಯ, ಸದಾಶಿವ, ಮಂಜು, ಉಮೇಶ್, ಸಂಜಯ್, ರಾಜಾನಾಯಕ್, ಸುಷ್ಮಾ, ಮಹ ದೇವಿ, ಅಯ್ಯಪ್ಪ, ಸೋಮಶೇಖರ್, ತಂಗಮಣಿ, ಸಿದ್ದಿಕ್ ಪಾಷಾ ಕೊಲೆ ಆರೋಪಕ್ಕೆ ಗುರಿಯಾ ಗಿರುವವರು. ಜಿಂಕೆ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ರೆ ಅರಣ್ಯ ವಲಯದ ಹೊಸಹಳ್ಳಿ ಹಾಡಿ ನಿವಾಸಿ ಕರಿಯಪ್ಪ(41) ಎಂಬಾ ತನನ್ನು ಸೋಮವಾರ ಮಧ್ಯಾಹ್ನ ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದು, ಅಕ್ರಮ ಬಂಧನ ದಲ್ಲಿಟ್ಟುಕೊಂಡು ಹಲ್ಲೆ ನಡೆಸಿದ ಪರಿಣಾಮ ಆತ ತೀವ್ರವಾಗಿ ಅಸ್ವಸ್ಥಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳ ವಾರ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿತರಾಗಿರುವ ಎಲ್ಲಾ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಸೋಮವಾರ ಮಧ್ಯಾಹ್ನ 12.30ರಲ್ಲಿ ತಮ್ಮ ಮನೆಗೆ ಬಂದು ತನ್ನನ್ನು ಹಾಗೂ ತಂಗಿ ಕುಮಾರಿ ಎಂಬಾಕೆಯನ್ನು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ತಂದೆ ಎಲ್ಲಿ ತೋರಿಸಿ, ಇಲ್ಲದಿದ್ದರೆ ಕುಟುಂಬ ಸಮೇತ ನಿಮ್ಮೆಲ್ಲರಿಗೂ ಗುಂಡು ಹಾಕುವುದಾಗಿಯೂ, ಪೆಟ್ರೋಲ್ ಸುರಿದು ಮನೆಯನ್ನು ಸುಡುವುದಾಗಿಯೂ ಬೆದರಿಸಿದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮೃತ ಕರಿಯಪ್ಪನ ಮಗ ಸತೀಶ ತಿಳಿಸಿದ್ದಾನೆ. ಅದೇ ದಿನ ಮಧ್ಯಾಹ್ನ 2.30ರ ವೇಳೆಯಲ್ಲಿ ಬಹಿರ್ದೆಸೆಗೆ ಹೋಗಿದ್ದ ತಂದೆ ಕರಿಯಪ್ಪನನ್ನು ಅರಣ್ಯ ಇಲಾಖೆಯವರು ಎಳೆದೊಯ್ದಿದ್ದು, ಮಂಗಳವಾರ ಸಂಜೆ 6.30ರಲ್ಲಿ ಡಿಆರ್‍ಎಫ್‍ಓ ಕಾರ್ತಿಕ್ ಯಾದವ್ ಅವರು ತಮ್ಮ ಮೊಬೈಲ್ ಸಂಖ್ಯೆ 76761 23485ಯಿಂದ ತಮ್ಮ ಸಂಬಂಧಿಕರಿಂದ ರವಿ ಎಂಬುವರಿಗೆ ಕರೆ ಮಾಡಿ ಕರಿಯಪ್ಪನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ರವಿ ಅವರು ಹೋಗಿ ನೋಡಿದಾಗ ಅರಣ್ಯ ಇಲಾಖೆಯವರು ನೀಡಿದ ಚಿತ್ರಹಿಂಸೆಯಿಂದ ಕರಿಯಪ್ಪ ತೀವ್ರ ಅಸ್ವಸ್ಥಗೊಂಡಿದ್ದು, ನಡೆಯಲೂ ಆಗದಂತಹ ಪರಿಸ್ಥಿತಿಯಲ್ಲಿದ್ದುದರಿಂದ ಅವರನ್ನು ಮನೆಗೆ ಕರೆತರಲು ರವಿ ನಿರಾಕರಿಸಿದ್ದರು. ನಂತರ ಅರಣ್ಯ ಇಲಾಖೆಯವರೇ ಮೈಸೂರಿಗೆ ತನ್ನ ತಂದೆಯನ್ನು ಕರೆದೊಯ್ದರು ಎಂದು ದೂರಿನಲ್ಲಿ ಸತೀಶ ವಿವರಿಸಿದ್ದಾನೆ. ನಂತರ ಕೆ.ಆರ್.ಆಸ್ಪತ್ರೆಯಲ್ಲಿ ತಂದೆ ಕರಿಯಪ್ಪ ಸಾವನ್ನಪ್ಪಿದ್ದು, ಅರಣ್ಯ ಇಲಾಖೆಯವರು ನೀಡಿದ ಚಿತ್ರಹಿಂಸೆಯಿಂದ ತಂದೆ ಸಾವನ್ನಪ್ಪಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಂತರಸಂತೆ ಠಾಣೆ ಪೊಲೀಸರು ಇಂದು ರಾತ್ರಿ 17 ಮಂದಿ ಅರಣ್ಯ ಸಿಬ್ಬಂದಿ ವಿರುದ್ಧ ಭಾರತೀಯ ದಂಡ ಸಂಹಿತೆ 302 (ಕೊಲೆ) ಮತ್ತು 242(ಅಕ್ರಮ ಬಂಧನ)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಹಾಡಿಗಳ ಗಿರಿಜನರು ಹಾಗೂ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ರಾತ್ರಿ ವೇಳೆಗೆ ಪೊಲೀಸ್ ಠಾಣೆಯಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಾದ ನಂತರ ಪ್ರತಿಭಟನೆ ಹಿಂಪಡೆದರು. ಅರಣ್ಯ ಇಲಾಖೆ ಸಿಬ್ಬಂದಿ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿರುವ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಸಾಧ್ಯತೆ ಇದೆ.

ಮೈಸೂರು ವರದಿ: ಜಿಂಕೆ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದ ಗಿರಿಜನ ವ್ಯಕ್ತಿ ಕರಿಯಪ್ಪ ಸಾವನ್ನಪ್ಪಿರುವ ವಿಚಾರ ತಿಳಿಯುತ್ತಿದ್ದಂತೆಯೇ ಮಾನವ ಹಕ್ಕು ಹೋರಾಟಗಾರರು ಹಾಗೂ ಮೃತನ ಕುಟುಂಬದವರು ಮೈಸೂರಿನ ವೈದ್ಯಕೀಯ ಕಾಲೇಜಿನ ಶವಾಗಾರದ ಬಳಿ ಬಂದು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜನ ಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಶವಾಗಾರದ ಬಳಿ ಮಾಧ್ಯಮ ಗಳೊಂದಿಗೆ ಮಾತನಾಡಿ, ಅರಣ್ಯ ಇಲಾಖೆಯವರು ದೈಹಿಕ ದೌರ್ಜನ್ಯ ನಡೆಸಿದ ಪರಿಣಾಮ ಕರಿಯಪ್ಪ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಆತನನ್ನು ಕಳ್ಳಬೇಟೆ ತಡೆ ಶಿಬಿರದಲ್ಲಿಟ್ಟುಕೊಂಡು ದೈಹಿಕ ದೌರ್ಜನ್ಯ ನಡೆಸಿರುವ ಶಂಕೆ ಇದೆ. ಅಸ್ವಸ್ಥಗೊಂಡಿದ್ದ ಕರಿಯಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಯಾರೂ ಇಲ್ಲಿ ಇರದೇ ಇರುವುದು ದೌರ್ಜನ್ಯ ನಡೆದಿರುವುದಕ್ಕೆ ಪುಷ್ಠಿ ನೀಡಲಿದೆ ಎಂದು ತಿಳಿಸಿದರು. ಅಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹಲ್ಲೆಯಿಂದ ಸತ್ತಿದ್ದರೆ ಕ್ರಮ: ಅರಣ್ಯ ಇಲಾಖೆ ಸಿಬ್ಬಂದಿ ವಶದಲ್ಲಿದ್ದ ಗಿರಿಜನ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ತಹಸೀಲ್ದಾರ್ ರತ್ನಾಂಬಿಕಾ ಅವರು ಮೈಸೂರಿನ ಶವಾಗಾರಕ್ಕೆ ಆಗಮಿಸಿ ವಿವರ ಪಡೆದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನನಗಿಲ್ಲ. ಮೃತರ ಕುಟುಂಬದವರಿಗೆ ಸಾಂತ್ವನ ಹೇಳುವುದರ ಜೊತೆ ಘಟನೆಯ ಬಗ್ಗೆ ವಿವರ ಪಡೆಯಲು ಉಪ ವಿಭಾಗಾಧಿಕಾರಿಗಳ ಸೂಚನೆ ಮೇರೆಗೆ ಬಂದಿದ್ದೇನೆ. ಆದರೆ ಇಲ್ಲಿ ಮೃತನ ಕುಟುಂಬಸ್ಥರಾಗಲೀ, ಅರಣ್ಯ ಇಲಾಖೆಯವರಾಗಲೀ ಯಾರೂ ಇಲ್ಲ ಎಂದರು. ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಯಿಂದಲೇ ಕರಿಯಪ್ಪ ಸಾವನ್ನಪ್ಪಿರುವುದು ದೃಢಪಟ್ಟರೆ, ಕಾನೂನಿನಂತೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

Translate »