ಗ್ರಾಪಂ ಜನಪ್ರತಿನಿಧಿಗಳ ಅಧಿಕಾರ ಮೊಟಕು ತಿದ್ದುಪಡಿ ಕೈಬಿಡಲು ಸರ್ಕಾರ ನಿರ್ಧಾರ
ಮೈಸೂರು

ಗ್ರಾಪಂ ಜನಪ್ರತಿನಿಧಿಗಳ ಅಧಿಕಾರ ಮೊಟಕು ತಿದ್ದುಪಡಿ ಕೈಬಿಡಲು ಸರ್ಕಾರ ನಿರ್ಧಾರ

October 12, 2022

ಮೈಸೂರು,ಅ.11(ಪಿಎಂ)- ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಅಧಿಕಾರ ಮೊಟಕುಗೊಳಿಸದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ಸ್ಥಳೀಯ ಸಂಸ್ಥೆ ಗಳಿಂದ ವಿಧಾನಪರಿಷತ್ತಿಗೆ ಆಯ್ಕೆಗೊಂಡಿರುವ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ ಹಾಗೂ ದಿನೇಶ್‍ಗೂಳಿಗೌಡ ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ 5,963 ಗ್ರಾಮ ಪಂಚಾಯಿತಿಗಳಿವೆ. 91,500 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿದ್ದಾರೆ. ಅಭಿವೃದ್ಧಿಯ ದೃಷ್ಟಿ ಯಿಂದ ಗ್ರಾಪಂ ಸದಸ್ಯರು ಜನರಿಂದ, ಜನರಿಗೋಸ್ಕರ ಆಯ್ಕೆಯಾಗಿ ಸ್ಥಳೀಯವಾಗಿ ಜನರ ಸರ್ಕಾರವನ್ನು ರಚಿಸುತ್ತಾರೆ. ಇವರ ಅಧಿಕಾರ ಕಡಿತ ಮಾಡಿದರೆ ಪ್ರಜಾತಂತ್ರ ವ್ಯವಸ್ಥೆಯ ಭದ್ರ ಬುನಾದಿಗೆ ಧಕ್ಕೆ ತಂದಂತೆ. ಇಂತಹ ಪ್ರಯತ್ನ ತಡೆಹಿಡಿಯಬೇಕೆಂದು ಮುಖ್ಯಮಂತ್ರಿಗಳಲ್ಲಿ ತಾವು ಮನವಿ ಮಾಡಿದ್ದನ್ನು ಈ ಮೂವರು ಜನಪ್ರತಿನಿಧಿಗಳು ಸ್ಮರಿಸಿದರು.

ಮೈಸೂರು,ಅ.11(ಪಿಎಂ)-ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳ ಅಧಿಕಾರ ಮೊಟಕು ಗೊಳಿಸುವಂತಹ ತಿದ್ದುಪಡಿ ಕೈಬಿಡಲು ಸರ್ಕಾರ ತೀರ್ಮಾ ನಿಸಿದೆ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸದಸ್ಯರ ಯಾವುದೇ ಅಧಿಕಾರ ಕಡಿತಗೊಳಿಸುವುದಿಲ್ಲ ವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿ ರುವುದನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣಗಳಿಗೆ ತಿದ್ದುಪಡಿ ಮತ್ತು ಗ್ರಾಮ ಪಂಚಾಯಿತಿ ನೌಕರರ ಸೇವಾ ವಿಷಯಗಳ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಳೆದ ಆಗಸ್ಟ್‍ನಲ್ಲಿ ನಡೆದ ಸಭೆಯಲ್ಲಿ ನಡಾವಳಿಗಳನ್ನು ರೂಪಿಸಲಾಗಿತ್ತು. ನಡಾವಳಿ ಗಳ ಪೈಕಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ಸಭೆಯ ಅಧಿಕಾರಕ್ಕೆ ಕತ್ತರಿ ಪ್ರಯೋಗಿಸಿದ್ದ ಅಂಶಗಳ ವಿರುದ್ಧ ರಾಜ್ಯಾದ್ಯಂತ ಗ್ರಾಪಂ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ ಹಾಗೂ ದಿನೇಶ್‍ಗೂಳಿಗೌಡರು ಈ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿದ್ದರು. ಇದೀಗ ಮುಖ್ಯಮಂತ್ರಿಗಳ ಸ್ಪಷ್ಟನೆಯಿಂದ ಗ್ರಾಪಂ ಸದಸ್ಯರ ಅಧಿಕಾರ ಕೈತಪ್ಪುವ ಆತಂಕ ದೂರ ಮಾಡಿದಂತಾಗಿದೆ. ಪಂಚಾಯಿತಿ ವ್ಯಾಪ್ತಿಯ ಕಟ್ಟಡ, ಹೋಟೆಲ್, ಅಂಗಡಿ ಆರಂಭಕ್ಕೆ ಪರವಾನಗಿ ನೀಡಲು ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದ ವ್ಯವಸ್ಥೆ ಬದಲಿಸಿ, ಈ ಅಧಿಕಾವನ್ನೂ ಪಿಡಿಓಗಳಿಗೆ ನೀಡುವುದು ಸಭೆಯ ನಡಾವಳಿಯ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು. ಸದಸ್ಯರ ಸಭೆ ಸಕಾಲಕ್ಕೆ ನಡೆಯದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣ ನೀಡಿ, ಪಿಡಿಓಗಳಿಗೆ ಅಧಿಕಾರ ನೀಡುವ ನಡಾವಳಿ ರೂಪಿಸಲಾಗಿತ್ತು. ಇದೀಗ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಪಂಚಾಯಿತಿ ಹಣಕಾಸು ವ್ಯವಹಾರ ಸಂಬಂಧ ಚೆಕ್‍ಗಳಿಗೆ ಅಧ್ಯಕ್ಷರು ಹಾಗೂ ಪಿಡಿಓ ಸಹಿ ಹಾಕುವುದು ಕಡ್ಡಾಯವಾಗಿದ್ದ ನಿಯಮವನ್ನು ತಿದ್ದುಪಡಿ ಮೂಲಕ ಬದಲಿಸಿ, ಈ ಅಧಿಕಾರವನ್ನು ಪಿಡಿಓ ಮತ್ತು ದ್ವಿತೀಯ ದರ್ಜೆ ಸಹಾಯಕರು ಜಂಟಿ ಯಾಗಿ ನಿರ್ವಹಿಸಲು ನಡಾವಳಿ ಸಿದ್ಧಪಡಿಸಲಾಗಿತ್ತು. ಈ ಬಗ್ಗೆಯೂ ಗ್ರಾಪಂ ಸದಸ್ಯರಿಂದ ಇಡೀ ರಾಜ್ಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಗ್ರಾಪಂ ಜನಪ್ರತಿಧಿಗಳ ಯಾವುದೇ ಅಧಿಕಾರ ಮೊಟಕುಗೊಳಿಸಲು ಸರ್ಕಾರ ಮುಂದಾಗುವುದಿಲ್ಲ ಎಂದಿರುವುದು, ಗ್ರಾಪಂ ಸದಸ್ಯರಲ್ಲಿ ತಮ್ಮ ಅಧಿಕಾರ ಚಲಾವಣೆಯ ಹಕ್ಕು ಸಂರಕ್ಷಣೆಯಾದ ಸಮಾಧಾನ ಉಂಟಾಗಿದೆ.

Translate »