ಅಪ್ರಾಪ್ತ ಬಾಲಕಿ ವಿವಾಹ ಮಾಡಿಸಿದ ಆರೋಪ: ಪೂಜಾರಿ ಸೇರಿ 10 ಮಂದಿ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ಆದೇಶ
ಮಂಡ್ಯ

ಅಪ್ರಾಪ್ತ ಬಾಲಕಿ ವಿವಾಹ ಮಾಡಿಸಿದ ಆರೋಪ: ಪೂಜಾರಿ ಸೇರಿ 10 ಮಂದಿ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ಆದೇಶ

October 23, 2020

ಮಂಡ್ಯ, ಅ.22-ಅಪ್ರಾಪ್ತ ಬಾಲಕಿಯನ್ನು ಮದುವೆ ಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುವೆ ಮಾಡಿಸಿದ ಪೂಜಾರಿ ಸೇರಿದಂತೆ 10 ಮಂದಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಯಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಕೆರಗೋಡು ಠಾಣೆ ಸಬ್ ಇನ್ಸ್‍ಪೆಕ್ಟರ್ ಚಂದ್ರಹಾಸ ನಾಯಕ್ ಅವರಿಗೆ ಮಂಡ್ಯದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಹೆಗಡೆ ಅವರು ಆದೇಶ ನೀಡಿದ್ದಾರೆ.

ಅಪ್ರಾಪ್ತ ಬಾಲಕಿ ನಾಪತ್ತೆಯಾಗಿರುವ ಕುರಿತು ಅಪಹರಣ ಪ್ರಕರಣ ದಾಖಲಾಗಿದ್ದರೂ, ಆ ಬಾಲಕಿಯನ್ನು ವಿವಾಹ ವಾಗಿದ್ದ ಯುವಕನ ಜೊತೆ ಕಳುಹಿಸಿದ ಸಬ್ ಇನ್ಸ್‍ಪೆಕ್ಟರ್ ಚಂದ್ರಹಾಸ ನಾಯಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ಕಲ್ಯಾಣ ಸಮಿತಿಯು ಜಿಲ್ಲಾ ಎಸ್ಪಿ ಪರಶುರಾಂ ಅವರಿಗೆ ಶಿಫಾರಸು ಮಾಡಿದೆ.

ವಿವರ: ವ್ಯಕ್ತಿಯೋರ್ವರು ತನ್ನ ಪುತ್ರಿ ನಾಪತ್ತೆಯಾಗಿ ದ್ದಾಳೆ ಎಂದು ಆಗಸ್ಟ್ 28ರಂದು ಕೆರಗೋಡು ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಆಕೆಯನ್ನು ಕರೆದೊಯ್ದಿರುವವರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ ತಿಳಿಸಿದ್ದರು. ಈ ದೂರನ್ನು ಸಬ್ ಇನ್ಸ್‍ಪೆಕ್ಟರ್ ಚಂದ್ರಹಾಸ ನಾಯಕ್ ಭಾರತ ದಂಡ ಸಂಹಿತೆ 363ರಡಿ (ಅಪಹರಣ) ದಾಖಲಿಸಿಕೊಂಡಿದ್ದರು.

ಮರು ದಿನವೇ ಬಾಲಕಿಯ ತಂದೆಯನ್ನು ಕರೆಸಿದ ಸಬ್ ಇನ್ಸ್‍ಪೆಕ್ಟರ್ ಬಾಲಕಿಗೆ ಆಕೆಯದೇ ಗ್ರಾಮದ ಯುವಕ ನೊಂದಿಗೆ ಮದುವೆಯಾಗಿದೆ ಎಂದು ತಿಳಿಸಿದ್ದರು. ಆಗ ತನ್ನ ಪುತ್ರಿ ಅಪ್ರಾಪ್ತಳು ಎಂದು ಜನ್ಮ ದೃಢೀಕರಣ ಪತ್ರವನ್ನು ಬಾಲಕಿಯ ತಂದೆ ನೀಡಿ ತನ್ನ ಮಗಳನ್ನು ಅಪಹರಿಸಿಕೊಂಡು ಹೋದ ಯುವಕ ಮತ್ತು ಇತರರ ವಿರುದ್ಧ ಪೋಕ್ಸೋ ಕಾಯ್ದೆ ಯಡಿ ಪ್ರಕರಣ ದಾಖಲಿಸುವಂತೆ ಕೋರಿದ್ದರು. ಅದೇ ವೇಳೆ ಅವರು ಮಕ್ಕಳ ಕಲ್ಯಾಣ ಸಮಿತಿಗೂ ದೂರು ಸಲ್ಲಿಸಿದ್ದರು.

ದೂರಿನನ್ವಯ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯು ಬಾಲಮಂದಿರಕ್ಕೆ ಸೇರಿಸಿತ್ತು. ಆದರೆ ಸಬ್ ಇನ್ಸ್‍ಪೆಕ್ಟರ್ ಚಂದ್ರಹಾಸ ನಾಯಕ್, ಮಕ್ಕಳ ಕಲ್ಯಾಣ ಸಮಿತಿ ಅನುಮತಿ ಯನ್ನು ಪಡೆಯದೇ ಬಾಲಕಿಯನ್ನು ವಿವಾಹವಾಗಿದ್ದ ಯುವಕನ ಜೊತೆ ಕಳುಹಿಸಿಕೊಟ್ಟಿದ್ದರು ಎಂದು ಬಾಲಕಿಯ ತಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಬಾಲ್ಯ ವಿವಾಹ ಕಾಯ್ದೆ ಕಲಂ 9, 10, 11 ಮತ್ತು ಪೋಕ್ಸೋ ಕಾಯ್ದೆ ಕಲಂ 4, 6, 12ರಡಿ ಡಿ.ಲಿಂಗಪ್ಪ, ನಾಗರಾಜು, ಚನ್ನಮ್ಮ, ಬಸಪ್ಪಾಜಿ, ಕನ್ನಳ್ಳಿಯ ಶೋಭಾ, ಶಿವಳ್ಳಿಯ ವೆಂಕಟೇಶ, ಹುಳಿಮಾವಿನ ಎಂ.ಎನ್.ಚಂದ್ರಶೇಖರ್, ತಾಂಡವೇಶ್ವರ ದೇವಸ್ಥಾನದ ಪೂಜಾರಿ ಮಂಜುನಾಥ, ಕಲ್ಲಹಳ್ಳಿಯ ಲತಾ, ಹೊಳಲು ಗ್ರಾಮದ ಸಚಿನ್ ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿ ನವೆಂಬರ್ 2ರೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕೆರಗೋಡು ಸಬ್ ಇನ್ಸ್‍ಪೆಕ್ಟರ್ ಚಂದ್ರಹಾಸ ನಾಯಕ್ ಅವರಿಗೆ ಆದೇಶ ನೀಡಿದ್ದಾರೆ.

 

Translate »